Wednesday, 27th November 2024

ಉತ್ತಮ ಆಲೋಚನೆಗಳಿದ್ದರೆ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ: ಕುಲಪತಿ ವೆಂಕಟೇಶ್ವರಲು

ತುಮಕೂರು: ಮನಸ್ಸಿನ ಲವಲವಿಕೆಯಲ್ಲಿ ಹೃದಯದ ಆರೋಗ್ಯದ ಗುಟ್ಟು ಅಡಗಿದೆ. ಉತ್ತಮ ಆಲೋಚನೆಗಳಿದ್ದರೆ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಪ್ರೆಸ್ ಕ್ಲಬ್ ತುಮಕೂರು, ತುಮಕೂರು ವಿಶ್ವವಿದ್ಯಾಲಯ ಯುವ ರೆಡ್ ಕ್ರಾಸ್ ಘಟಕ ಮತ್ತು ಸಿದ್ಧಗಂಗಾ ಆಸ್ಪತ್ರೆ ಸಹಯೋಗ ದಲ್ಲಿ ಹಮ್ಮಿಕೊಂಡಿದ್ದ ಹೃದಯದ ಆರೋಗ್ಯ ಸಂವಾದದಲ್ಲಿ ಮಾತನಾಡಿದರು.

ಹೃದಯ ದೇಹದ ಶುದ್ಧೀಕರಣ ಘಟಕ. ಮನುಷ್ಯನ ಶರೀರಕ್ಕೆ ಹೃದಯ ಮುಖ್ಯವಾದ ಭಾಗ. ಅದೇರೀತಿ ವಿಶ್ವವಿದ್ಯಾಲಯಕ್ಕೆ ಗ್ರಂಥಾಲಯ ಹೃದಯವಿದ್ದಂತೆ. ಯಾರು ಹೆಚ್ಚು ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳುತ್ತಾರೋ ಅವರ್ ಮನಸ್ಸು ಚೆನ್ನಾಗಿರುತ್ತದೆ. ಮನಸ್ಸು ಚೆನ್ನಾಗಿದ್ದರೆ ಹೃದಯ ಚೆನ್ನಾಗಿರುತ್ತದೆಂದರು.

ಸಿದ್ಧಗಂಗಾ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ಹೆಚ್.ಎಂ. ಭಾನುಪ್ರಕಾಶ್, ಹೃದಯದ ಆರೋಗ್ಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ, 55 ವರ್ಷ ಮೇಲ್ಪಟ್ಟ ಪುರುಷರು, 65 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ವಯೋಸಹಜವಾಗಿ ಹೃದ್ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಸಕ್ಕರೆ ಕಾಯಿಲೆ ಅಥವಾ ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನ ಹೃದ್ರೋಗಗಳಿಗೆ ಪ್ರಮುಖ ಕಾರಣವಾಗಿದೆ ಎಂದರು.

ದೈನಂದಿನ ಚಟುವಟಿಕೆಗಳಲ್ಲಿ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ವಾರಕ್ಕೆ ಕನಿಷ್ಠ 5 ದಿನವಾದರೂ ವ್ಯಾಯಾಮ ಮಾಡುವುದು, ವಾಕಿಂಗ್, ಜಾಗಿಂಗ್ ಅಥವಾ ಯಾವುದೇ ಕ್ರೀಡೆ ಸೇರಿದಂತೆ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು ಉತ್ತಮ.

ಧೂಮಪಾನ ಮಾಡುತ್ತಿದ್ದರೆ ಈ ಕೂಡಲೇ ಬಿಡುವುದು ಒಳ್ಳೆಯದು. ಅಧಿಕ ತೂಕ ಹೃದ್ರೋಗಕ್ಕೆ ಕಾರಣವಾಗಬಹದು. ಹಾಗಾಗಿ ತೂಕ ನಿಯಂತ್ರಣಕ್ಕೆ ಗಮನಕೊಡಿ. ಅತಿಯಾದ ಮಾನಸಿಕ ಒತ್ತಡ ಹೃದಯದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಒತ್ತಡದ ಬದುಕಿನಿಂದ ಹೊರಬನ್ನಿ ಎಂದು ಎಂದರು.

ಕಾರ್ಯಕ್ರಮದಲ್ಲಿ ಟೂಡಾ ಅಧ್ಯಕ್ಷ ಚಂದ್ರಶೇಖರ್, ಪ್ರೆಸ್‌ಕ್ಲಬ್ ಅಧ್ಯಕ್ಷ ಶಶಿಧರ್ ದೋಣಿಹಕ್ಲು, ಜಂಟಿ ಕಾರ್ಯದರ್ಶಿಸತೀಶ್ ಶಾಸ್ತ್ರಿ, ತುಮಕೂರು ವಿವಿ ಯುವ ರೆಡ್‌ಕ್ರಾಸ್ ಘಟಕದ ಸಮನ್ವಯಾಧಿಕಾರಿ ಡಾ.ಡಿ.ಪೂರ್ಣಿಮಾ, ಡಾ.ರಶ್ಮಿ ಹೊಸಮನಿ, ಡಾ.ಲಲಿತಾ ಇದ್ದರು.