ಗೌರಿಬಿದನೂರು : ಶಿಲ್ಪಕಲೆಯ ಮೂಲಕ ದೇಶದ ಇತಿಹಾಸ ಸಂಸ್ಕೃತಿಯನ್ನು ಉಳಿಸುವಲ್ಲಿ ವಿಶ್ವಕರ್ಮ ಜನಾಂಗದ ಪಾತ್ರ ಅಪಾರವಾಗಿದೆ ಎಂದು ತಾಲೂಕು ದಂಡಾಧಿಕಾರಿ ಮಹೇಶ್‌ಪತ್ರಿ ಹೇಳಿದರು.
ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಅಮರ ಶಿಲ್ಪಿ ಜಕಣಾ ಚಾರಿ ಅವರ ಜಯಂತಿಯಲ್ಲಿ ಜಕ್ಕಣಾಚಾರಿ ಅವರ ಬಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಹೊಯ್ಸಳ ಮತ್ತು ಚಾಲುಕ್ಯರೇ ಮೊದಲಾಗಿ ಎಲ್ಲಾ ರಾಜಮಹಾರಾಜರ ಆಡಳಿತದಲ್ಲಿ ವಿಶ್ವಕರ್ಮ ಸಮು ದಾಯಕ್ಕೆ ಪ್ರಧಾನ ಸ್ಥಾನ ನೀಡಲಾಗಿತ್ತು.ಇದೇ ಕಾರಣಕ್ಕಾಗಿ ಶಿಲ್ಪಕಲೆಯ ವೈಭವ ದೇವಾಲಯಗಳಲ್ಲಿ ಕಾಣಲು ಸಾಧ್ಯ ವಾಗಿದೆ. ಬೇಲೂರು ಹಳೇಬೀಡು, ಪಟ್ಟದಕಲ್ಲು,ಕೈದಾಳ, ಸೋಮನಾಥಪುರ ಮುಂತಾದ ಸ್ಥಳಗಳಲ್ಲಿ ಜಕಣಾಚಾರಿ ಅವರ ಶಿಲ್ಲಕಲೆಯ ವೈಭವವನ್ನು ನಾವುಗಳು ಇಂದಿಗೂ ಕಾಣಬಹುದು, ಇಂತಹ ಅಮರ ಶಿಲ್ಪಿ ಜಕ್ಕಣಾಚಾರಿ ಅವರ ನೆನಪಿನಲ್ಲಿ ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಯಾಗಿದೆ ಎಂದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂಎನ್.ರಾಧಾಕೃಷ್ಣ ಮಾತನಾಡಿ ತುಮಕೂರು ಜಿಲ್ಲೆ ಕೈದಾಳದಲ್ಲಿ ಜನಿಸಿದ ಅಮರ ಶಿಲ್ಪಿ ಜಕಣಾಚಾರಿ ಅವರು ಕೆತ್ತಿದ ಹಲವು ಶಿಲ್ಪಗಳಿಂದ ಇಂದು ಸಂಸ್ಕೃತಿ ಉಳಿದಿದೆ. ಕಾಲ ಜ್ಞಾನ ಬರೆದ ವೀರ ಬ್ರಹ್ಮೇಂದ್ರರು ಜನಿಸಿದ್ದು ಸಹ ನಮ್ಮ ಸಮುದಾಯದಲ್ಲಿ,ಕೇಂದ್ರ ಸರ್ಕಾರ ಪಿ.ಎಂ.ವಿಶ್ವಕರ್ಮ ಹೆಸರಿನಲ್ಲಿ ಯೋಜನೆನ್ನು ಅನುಷ್ಠಾನಗೊಳಿಸಿದ್ದು,ವಿಶ್ವಕರ್ಮ ಸಮುದಾಯದವರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಮುಂದುವರೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತೆ ಡಿಎಂ.ಗೀತಾ, ಗ್ರೇಡ್ ಟೂ ತಹಶಿಲ್ದಾರ್ ಆಶಾ,ಆರ್ ಐ ಖಾದರ್, ರವಿಕುಮಾರ್, ಅಮರ ನಾರಾಯಣ್, ತಾಲೂಕು ಆರೋಗ್ಯಾಧಿಕಾರಿ ಚಂದ್ರಮೋಹನ್ ರೆಡ್ಡಿ, ಹಾಗೂ ಸಮುದಾ ಯದ ಮುಖಂಡರಾದ ಎಂಆರ್.ಆಕಾಶ್ ದೀಪ್, ಮುರುಳೀಧರ್, ರಾಘವೇಂದ್ರಾಚಾರಿ, ಸಂಪತ್ ಕುಮಾರ್,ಪ್ರಸನ್ನ ಕುಮಾರಚಾರಿ, ಸವಿತಾ ಸಮಾಜದ ಅಧ್ಯಕ್ಷ ಜಿ.ಡಿ.ಶಿವಕುಮಾರ್, ಉಪ್ಪಾರ ಸಮಾಜದ ನಾಗರಾಜ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.