Thursday, 19th September 2024

Vishwakarma scheme: ವಿಶ್ವಕರ್ಮ ಯೋಜನೆ ಪ್ರಕ್ರಿಯೆ ವೇಗಗೊಳಿಸಲು ಬಿಜೆಪಿ ಮುಖಂಡರಿಂದ ಮನವಿ

ತುಮಕೂರು: ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ವಿಶ್ವಕರ್ಮ ಯೋಜನೆಯ ಸಾಲಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಿ ಜಿಲ್ಲಾ ಬಿಜೆಪಿ ನಿಯೋಗ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸಂದೀಪ್‌ಗೌಡ, ನಗರ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಮುಖಂಡ ಶಿವರಾಜ್ ಹಾಗೂ ಇತರರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಬಡ ಶ್ರಮಿಕ ವರ್ಗದವರ ಮತ್ತು ಕೆಲವೊಂದು ಕಸುಬುಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದೆ.

ಇದರಿಂದ ಬಡ ಕುಶಲಕರ್ಮಿಗಳಿಗೆ ಆರ್ಥಿಕ ಸಹಾಯ ದೊರಕಿ ಹೆಚ್ಚು ಹೆಚ್ಚು ಸ್ವಯಂ ಉದ್ಯೋಗಗಳಿಗೆ ಪ್ರೇರಣೆ ಯಾಗಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ದೊರಕಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದರು.

ಜಿಲ್ಲೆಯಲ್ಲಿ ಈ ಯೋಜನೆಯಡಿ ಈವರೆಗೆ ಸುಮಾರು 1,75,000 ಅರ್ಜಿಗಳು ನೋಂದಣಿಯಾಗಿದ್ದು ಅದರಲ್ಲಿ ಸುಮಾರು 92,000 ಅರ್ಜಿದಾರರನ್ನು ಈ ಯೋಜನೆಗೆ ಅರ್ಹರು ಎಂದು ಗುರುತಿಸಲಾಗಿದೆ. ಅಂತೆಯೇ ಅದರಲ್ಲಿ ಸುಮಾರು 19,000 ಅರ್ಜಿದಾರರನ್ನು ಈ ಯೋಜನೆಗೆ ಅರ್ಹರು ಎಂದು ಅನುಮೋದನೆ ದೊರಕಿದ್ದು ಅದರಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಸುಮಾರು 8,000 ಜನರಿಗೆ ಕೌಶಲ್ಯ ತರಬೇತಿಯನ್ನು ನೀಡಲು ಮಾಹಿತಿ ರವಾನಿಸಿದ್ದು ಅದರಲ್ಲಿ ಈಗಾಗಲೇ ಸುಮಾರು 4,000 ಜನರಿಗೆ ಕೌಶಲ್ಯ ತರಬೇತಿ ನೀಡಲಾಗಿರುತ್ತದೆ. ಆದರೆ ತರಬೇತಿ ಪಡೆದ ಕೇವಲ 200 ಜನರಿಗೆ ಸುಮಾರು 1,79,00,000 ರೂ.ಗಳು ಮಾತ್ರ ಸಾಲ ಮಂಜೂರಾಗಿರುತ್ತದೆ ಎಂದು ತಿಳಿಸಿದರು.

ಈ ವಿವರಗಳನ್ನು ಗಮನಿಸಿದಾಗಿ ಜಿಲ್ಲೆಯು ವಿಶ್ವಕರ್ಮ ಯೋಜನೆಯ ನೋಂದಣಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಹೊಂದಿದೆಯಾದರೂ ಅದರ ಪ್ರಗತಿ ಮಾತ್ರ ಅತ್ಯಂತ ಕುಂಠಿತವಾಗಿದೆ. ಅಂಕಿಅಂಶಗಳನ್ನು ಗಮನಿಸಿದಾಗ ಶೇಕಡ 9ರಷ್ಟು ಮಾತ್ರ ಪ್ರಗತಿಯಾಗಿದೆ. ಇದು ಈ ಮಹತ್ವದ ಯೋಜನೆಯು ಜಿಲ್ಲೆಯಲ್ಲಿ ಹಳ್ಳ ಹಿಡಿದಿರುವುದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ಬಡ ಕಸುಬುದಾರರ ಕುಶಲಕರ್ಮಿಗಳ ಹಿತ ಕಾಪಾಡುವ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ವಿಶ್ವಕರ್ಮ ಯೋಜನೆ ಪ್ರಕ್ರಿಯೆಯನ್ನು ವೇಗವಾಗಿಸಿ ಈಗಾಗಲೇ ಅರ್ಹರಾಗಿರುವ ಅರ್ಜಿದಾರರಿಗೆ ತರಬೇತಿ ನೀಡುವುದು. ತಾಲ್ಲೂಕುವಾರು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ತೆರೆಯುವುದು, ತರಬೇತಿ ಪಡೆದಿರುವ ಕುಶಲಕರ್ಮಿಗಳಿಗೆ ತುರ್ತಾಗಿ ಸಾಲಸೌಲಭ್ಯಗಳನ್ನು ಒದಗಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸುವುದು, ಅರ್ಹ ಕುಶಲಕರ್ಮಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸ್ಪಂದಿಸುವಂತೆ ಲೀಡ್ ಬ್ಯಾಂಕ್ ಮತ್ತು ಸಂಬಂಧಿಸಿದ ಬ್ಯಾಂಕ್‌ಗಳಿಗೆ ಸೂಚನೆ ನೀಡಬೇಕು ಎಂದು ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ವಿನಂತಿ ಮಾಡಿದರು.