Monday, 23rd December 2024

Voters List: ಸಂಘದ ಮತದಾರರ ಪಟ್ಟಿ ದೋಷ ಪೂರಿತ: ಚುನಾವಣೆ ಮುಂದೂಡಲು ಆಗ್ರಹ

ಚಿಕ್ಕನಾಯಕನಹಳ್ಳಿ : ಬರಸಿಡ್ಲಹಳ್ಳಿ ಸಹಕಾರ ಸಂಘದ ಮತದಾರರ ಪಟ್ಟಿಯಲ್ಲಿ ಅನರ್ಹರ ಹೆಸರು ಸೇರಿಸ ಲಾಗಿದೆ ಹಾಗು ಅರ್ಹರನ್ನು ಕೈ ಬಿಟ್ಟು ಮತದಾರರ ಪಟ್ಟಿ ತಯಾರಿಸಲಾಗಿದೆ ಆದ್ದರಿಂದ ಇದನ್ನು ಸರಿ ಮಾಡು ವವರೆಗೂ ಚುನಾವಣೆ ಮುಂದೂಡಬೇಕು ಎಂದು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಜಶೇಖರ್ ಆಗ್ರಹಿಸಿದರು.

ಈ ಮತದಾರರ ಪಟ್ಟಿ ಸಂಪೂರ್ಣ ದೋಷದಿಂದ ಕೂಡಿದೆ. 65 ಜನರ ಅನರ್ಹರ ಹೆಸರು ಸೇರಿಕೊಂಡಿದೆ. ಮತ್ತು ಅನೇಕರ ಹೆಸರನ್ನು ಕೈ ಬಿಡಲಾಗಿದೆ. ಇದರಿಂದ ಅಕ್ರಮ ನಡೆಸಲು ಅನುಕೂಲ ಮಾಡಿದಂತಾಗುತ್ತದೆ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಪಟ್ಟಿಯಲ್ಲಿ ಸತ್ತವರ ಹೆಸರನ್ನು ತಗೆಯದೆ ಹಾಗೇಯೇ ಬಿಟ್ಟಿದ್ದಾರೆ. ಸಹಕಾರ ಸಂಘಗಳ ಉಪ ನಿಂಬಂಧಕರ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ನಮೂದಾಗಿದ್ದು ಇಲ್ಲಿನ ಪಟ್ಟಿಯನ್ನು ಗಮನಿಸಿದರೆ ನನ್ನ ಹೆಸರು ತೆಗೆದುಹಾಕಲಾಗಿದೆ. ಅನೇಕ ವರ್ಷಗಳಿಂದ ಹೊಸಬರನ್ನು ನೊಂದಣಿ ಮಾಡಿಕೊಳ್ಳದೆ ಕಾರ್ಯದರ್ಶಿಗಳು ನಿರ್ಲಕ್ಷ್ಯ ತೋರಿ ಕೇವಲ 180 ಮಂದಿ ಮಾತ್ರ ನೊಂದಣಿ ಮಾಡಿದ್ದಾರೆ. ಇದೊಂದು ಕಾಟಾಚಾರದ ಚುನಾವಣೆ ರೀತಿ ಭಾಸವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ನೊಂದಣಾಧಿಕಾರಿಗಳ ಕಚೇರಿ, ಸಹಕಾರ ಸಂಘದ ಕಚೇರಿಗಳಲ್ಲಿ ಎಲ್ಲ ಅರ್ಜಿಗಳನ್ನು ಸಂಖ್ಯಾವಾರು ವಿಂಗಡಣೆ ಮಾಡಿ ಹೆಸರು ಸೇರ್ಪಡೆಗೆ ಅರ್ಹತೆ ಇದೆಯೇ-ಇಲ್ಲವೇ ಎಂಬುದನ್ನು ಖಚಿತ ಮಾಡಿಕೊಳ್ಳಬೇಕು. ಶೇರುದಾರರ ಅರ್ಜಿ ನಮೂನೆಯಲ್ಲಿರುವಂತೆ ಎಲ್ಲಾ ವಿವರಗಳನ್ನು ಪುನಃ ಪರಿಶೀಲಿಸಿ ಲೋಪ-ದೋಷ ಸರಿಪಡಿಸಬೇಕು ಎಂದು ಮಾಜಿ ತಾ.ಪಂ ಸದಸ್ಯ ಸ್ವಾಮಿನಾಥ್ ಆಗ್ರಹಿಸಿದರು. ಇದೆಲ್ಲಾ ಮುಗಿಯುವವರೆಗೂ ಚುನಾವಣೆ ನಡೆಸಬಾರದು. ಒಂದು ವೇಳೆ ನಡೆಸಿದರೂ ಅದು ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿರುತ್ತದೆ ಎಂದು ಆಕ್ರೋಷ ಹೊರಹಾಕಿದರು.

ಸಂಘದ ಪ್ರಥಮ ಚುನಾವಣೆ
ಸಂಘವು ಕಾರ್ಯಾರಂಭ ಮಾಡಿದಾಗಿನಿಂದ ಕಾನೂನು ರೀತಿ ಕಾರ್ಯ ನಿರ್ವಹಿಸದೆ, ಕಾಲ ಕಾಲಕ್ಕೆ ನಡೆಸಬೇಕಿದ್ದ ಸಂಘದ ಚುನಾವಣೆ ಮತ್ತು ಸರ್ವ ಸದಸ್ಯರ ಸಾಮಾನ್ಯ ಸಭೆಗಳನ್ನು ನಡೆಸಿಲ್ಲ. ಅಲ್ಲದೇ ಪ್ರತಿ ವರ್ಷ ಕಡ್ಡಾಯವಾಗಿ ಸಲ್ಲಿಸಲೇಬೇಕಾದ ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಿಸದೆ ಸಹಕಾರ ಸಂಘಗಳ ನಿಯಮಗಳಿಗೆ ವಿರುದ್ದವಾಗಿ ಸಂಘದ ಪಧಾಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಮುಖಂಡ ದೇವರಾಜು ಆರೋಪಿಸಿದರು. ರಾಮನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಮದನಮಡು ನಟರಾಜ್, ಪಾಂಡುರAಗಯ್ಯ, ನಾಗರಾಜ್, ಕೇಶವಮೂರ್ತಿ ಇದ್ದರು.