Sunday, 15th December 2024

ಶಿಯಾ ಮಸೀದಿಯಲ್ಲಿ ಬಾಂಬ್ ಸ್ಫೋಟ: 7 ಮಂದಿ ಸಾವು

ಕಂದಹಾರ್: ಅಫ್ಘಾನಿಸ್ತಾನದ ಕಂದಹಾರ್ ನಗರದ ಶಿಯಾ ಮಸೀದಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 7 ಮಂದಿ ಪ್ರಾಣ ಬಿಟ್ಟಿದ್ದು, 15 ಜನರು ಗಾಯಗೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಮಸೀದಿ ಮೇಲೆ ನಡೆದ ಎರಡನೇ ದಾಳಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಶಿಯಾ ಮಸೀದಿಯಲ್ಲಿ ಸಂಭವಿಸಿರುವ ಸ್ಫೋಟದ ಬಗ್ಗೆ ಪತ್ತೆ ಮಾಡಲಾಗುವುದು. ಅಧಿಕಾರಿಗಳು ಸ್ಫೋಟದ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಕರಿ ಸಯೀದ್ ಖೋಸ್ತಿ ಹೇಳಿದರು. ಈ ಮಧ್ಯೆ ಇಮಾಮ್ ಬರ್ಗಾ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಸಂಭವಿಸಿದ ಸ್ಫೋಟದಲ್ಲಿ ಭಾರಿ ಸಂಖ್ಯೆಯ ಸಾವು-ನೋವು ಆಗಿದ್ದು, ಅಂಕಿ ಸಂಖ್ಯೆ ಬಗ್ಗೆ ಈಗಲೇ ದೃಢವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಪ್ರಾಂತೀಯ ಮಂಡಳಿಯ ಮಾಜಿ ಸದಸ್ಯ ನೆಮತುಲ್ಲಾ ವಫಾ ಹೇಳಿದ್ದಾರೆ.

ಕಂದಹಾರ್ ನಗರದ ಶಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ದಿನವೇ ನಡೆಸಿದ ಬಾಂಬ್ ಸ್ಫೋಟದ ಘಟನೆ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಾವುದೇ ಸಂಘ ಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ತಿಳಿದು ಬಂದಿದೆ.

ಅ.8 ರಂದು, ಉತ್ತರ ಅಫ್ಘಾನಿಸ್ತಾನದಲ್ಲಿ ಮಸೀದಿ ಸ್ಫೋಟದಲ್ಲಿ ಕನಿಷ್ಠ 100 ಜನರು ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲಾಗಿದೆ ಎಂದ ಶಂಕೆ ವ್ಯಕ್ತವಾಗಿತ್ತು. ಆತ್ಮಹತ್ಯಾ ಬಾಂಬರ್ ಅನ್ನು ಬಳಸಿಕೊಂಡು ಈ ದಾಳಿ ನಡೆಸಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿತ್ತು.