Wednesday, 8th January 2025

Anita Anand: ಕೆನಡಾದ ಪ್ರಧಾನಿ ರೇಸ್‌ನಲ್ಲಿರುವ ಭಾರತೀಯ ಮೂಲದ ಅನಿತಾ ಆನಂದ್; ಇವರ ಹಿನ್ನೆಲೆಯೇನು?

anita anand

ಒಟ್ಟವಾ: ಜಸ್ಟಿನ್ ಟ್ರುಡೊ(Justin Trudeau) ಅವರು ಕೆನಡಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದು, ನೂತನ ಪ್ರಧಾನಿ ಆಯ್ಕೆಗೆ ಲಿಬರಲ್‌ ಪಕ್ಷ ಭಾರೀ ತಯಾರಿ ನಡೆಸಿದೆ. ಈ ಮಧ್ಯೆ ಭಾರತೀಯ ಮೂಲದ ರಾಜಕಾರಣಿ ಹಾಗೂ ಪ್ರಸ್ತುತ ಕೆನಡಾದ ಸಾರಿಗೆ ಮತ್ತು ಆಂತರಿಕ ವ್ಯಾಪಾರ ಸಚಿವರಾದ ಅನಿತಾ ಆನಂದ್‌(Anita Anand) ಅವರ ಹೆಸರು ಪ್ರಧಾನಿ ರೇಸ್‌ನಲ್ಲಿ ಕೇಳಿಬರುತ್ತಿದೆ. ಅವರು ವೃತ್ತಿಯಿಂದ ವಕೀಲರಾಗಿದ್ದು, 2019ರಲ್ಲಿ ಕೆನಡಾದ ರಾಜಕೀಯಕ್ಕೆ ಪ್ರವೇಶಿಸಿದ್ದರು. ಅನಿತಾ ಆನಂದ್‌ ಅವರಿಗೆ ಕೆನಡಾದ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಅನುಭವವಿದೆ.(Canadian PM)

ಕೆನಡಾದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಜಸ್ಟಿನ್ ಟ್ರುಡೊ, ತಮ್ಮ 9 ವರ್ಷಗಳ ಸುದೀರ್ಘ ಆಡಳಿತವನ್ನು ಕೊನೆಗೊಳಿಸಿದ್ದಾರೆ. ಇದೀಗ ಟ್ರುಡೋ ಬದಲಾಗಿ ಕೆನಡಾದ ಪ್ರಧಾನಿ ಗದ್ದುಗೆಗೆ ಯಾರು ಏರಬಲ್ಲರು ಎಂಬ ಕುತೂಹಲದ ಪ್ರಶ್ನೆ ಎದುರಾಗಿದೆ. ಕೆನಡಾದ ಪ್ರಧಾನಿ ಸ್ಥಾನಕ್ಕೆ ಅನಿತಾ ಆನಂದ್, ಪಿಯರೆ ಪೊಲಿಯೆವ್ರೆ, ಕ್ರಿಸ್ಟಿಯಾ ಫ್ರೀಲ್ಯಾಂಡ್, ಮಾರ್ಕ್ ಕಾರ್ನಿ ಮುಂತಾದವರ ಹೆಸರುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಭಾರತೀಯ ಮೂಲದ ಅನಿತಾ ಆನಂದ್‌ ಹೆಸರು ಪ್ರಮುಖವಾಗಿ ಕೇಳಿಬರುತ್ತಿರುವುದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಪ್ರಭಾವಶಾಲಿ ಆಡಳಿತ ಮತ್ತು ಸಾರ್ವಜನಿಕ ಸೇವಾ ಹಿನ್ನೆಲೆ ಹೊಂದಿರುವ 57 ವರ್ಷದ ಅನಿತಾ ಆನಂದ್‌, ವೃತ್ತಿಯಿಂದ ವಕೀಲರಾಗಿದ್ದಾರೆ. 2019ರಲ್ಲಿ ಕೆನಡಾದ ರಾಜಕೀಯಕ್ಕೆ ಪ್ರವೇಶಿಸಿದ ಅವರು ಸಮರ್ಥ ಮತ್ತು ಮಹತ್ವಾಕಾಂಕ್ಷೆಯ ಲಿಬರಲ್ ಪಕ್ಷದ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಭಾರತೀಯ ಮೂಲದ ನಾಯಕಿ ಅನಿತಾ ಆನಂದ್, ಟ್ರುಡೊ ಅವರ ರಾಜೀನಾಮೆಯಿಂದ ತೆರವಾದ ಕೆನಡಾ ಪ್ರಧಾನಿ ಪಟ್ಟಕ್ಕೆ ಕೇಳಿಬರುತ್ತಿರುವ ಪ್ರಮುಖ ಹೆಸರು ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ. ಐವರು ಪ್ರಮುಖ ಸ್ಪರ್ಧಿಗಳಲ್ಲಿ ಅನಿತಾ ಆನಂದ್‌ ಹೆಸರು ಮುಂಚೂಣಿಯಲ್ಲಿದೆ ಎಂಬ ಮಾಹಿತಿಯಿದೆ.

ಅನಿತಾ ಆನಂದ್‌ ಶಿಕ್ಷಣ ಮತ್ತು ರಾಜಕೀಯ

ಅನಿತಾ ಆನಂದ್ ಕ್ವೀನ್ಸ್ ವಿಶ್ವವಿದ್ಯಾನಿಲಯದಿಂದ ರಾಜಕೀಯ ಅಧ್ಯಯನದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ನ್ಯಾಯಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್, ಡಾಲ್‌ಹೌಸಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಮತ್ತು ಟೊರೊಂಟೊ ವಿಶ್ವವಿದ್ಯಾಲಯದಿಂದ ಕಾನೂನು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನೋವಾ ಸ್ಕಾಟಿಯಾದಲ್ಲಿ ಹುಟ್ಟಿ ಬೆಳೆದ ಅನಿತಾ ಆನಂದ್ 1985 ರಲ್ಲಿ ಒಂಟಾರಿಯೊಗೆ ತೆರಳಿದರು. ಅಲ್ಲೇ ವಿವಾಹವಾಗಿದ್ದು ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಪ್ರಸ್ತುತ ಸಾರಿಗೆ ಮತ್ತು ಆಂತರಿಕ ವ್ಯಾಪಾರ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಅನಿತಾ ಆನಂದ್‌, ಕೆನಡಾದ ರಕ್ಷಣಾ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2019ರಲ್ಲಿ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿದ ಅನಿತಾ ಆನಂದ್‌, ಟೊರೊಂಟೊದ ಉಪನಗರವಾದ ಓಕ್‌ವಿಲ್ಲೆಯನ್ನು ಹಲವು ವರ್ಷಗಳಿಂದ ಪ್ರತಿನಿಧಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ:CM Siddaramaiah: ಭ್ರಷ್ಟನಲ್ಲದ ಒಬ್ಬ ಬಿಜೆಪಿ ನಾಯಕನನ್ನು ತೋರಿಸಿದರೆ ಕರೆಸಿ ಸನ್ಮಾನ ಮಾಡುವೆ: ಪಿಎಂಗೆ ಸಿಎಂ ಪಂಥಾಹ್ವಾನ

Leave a Reply

Your email address will not be published. Required fields are marked *