Friday, 22nd November 2024

ಉಗ್ರರ ಅಟ್ಟಹಾಸ: ಬಸ್ಸಿನಲ್ಲಿ ತೆರಳುತ್ತಿದ್ದವರ ಅಪಹರಣ, ಹತ್ಯೆ

ಲಾಹೋರ್: ಪಾಕಿಸ್ತಾನದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಬಸ್ ನಲ್ಲಿ ತೆರಳುತ್ತಿದ್ದವರನ್ನು ಅಪಹರಣ ಮಾಡಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಉಗ್ರರು 9 ಮಂದಿಯನ್ನು ಅಪಹರಿಸಿ, ಅವರನ್ನು ಭೀಕರವಾಗಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಬಲೂಚಿಸ್ತಾನದ ಕ್ವೆಟ್ಟಾದಿಂದ ತಫ್ತಾನ್‌ಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಬಸ್ ತೆರಳುತ್ತಿತ್ತು.

ವಾಹನವನ್ನು ಅಡ್ಡಹಾಕಿದ ಅಪರಿಚಿತ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ವಾಹನದಿಂದ ಪ್ರಯಾಣಿಕರನ್ನು ಹೊರಗೆಳೆದ ಉಗ್ರರು, ಅವರ ಮೇಲೆ ನಿರಂತರವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಪಂಜಾಬ್‌ ಪ್ರಾಂತ್ಯದ 9 ಮಂದಿ ಸೇರಿ ಒಟ್ಟು 11 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 11 ಜನರನ್ನು ಹತ್ಯೆ ಮಾಡಲಾಗಿದೆ. 9 ಜನರ ಶವಗಳು ಬೆಟ್ಟ ಗುಡ್ಡಗಳು, ಸೇತುವೆಗಳ ಬಳಿ ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ವಾಜಿರಾಬಾದ್‌, ಮಂಡಿ, ಬಹಾವುದ್ದೀನ್‌ ಹಾಗೂ ಗುಜ್ರನ್‌ವಾಲಾದವರು ಎಂದು ಗುರುತಿಸಲಾಗಿದೆ. ಇದೇ ಪ್ರಾಂತ್ಯದಲ್ಲಿ ಮತ್ತೊಂದು ಕಡೆ ದಾಳಿ ನಡೆದಿದ್ದು, ದಾಳಿಯಲ್ಲಿ ಇಬ್ಬರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಉಗ್ರರ ದಾಳಿಯ ಬಳಿಕ ಯಾವುದೇ ಸಂಘಟನೆಯು ಹೊಣೆಯನ್ನು ಹೊತ್ತುಕೊಂಡಿಲ್ಲ. ಕಳೆದ ತಿಂಗಳು ಗ್ವಾದರ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 17 ಮಂದಿಯನ್ನು ಹತ್ಯೆ ಮಾಡಿದ್ದರು.