Wednesday, 27th November 2024

Bangladesh Unrest: ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; 3 ಹಿಂದೂ ದೇವಾಲಯಗಳ ಮೇಲೆ ದಾಳಿ

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ಧಾರ್ಮಿಕ ಮುಖಂಡ (Bangladeshi Hindu Monk), ಇಸ್ಕಾನ್‌ ದೇಗುಲಗಳ ಆಡಳಿತ ಮಂಡಳಿ ಸದಸ್ಯ ಚಿನ್ಮೋಯ್ ಕೃಷ್ಣ ದಾಸ್ (Chinmoy Krishna Das) ಅವರನ್ನು ಪೊಲೀಸರು ಬಂಧಿಸಿದ್ದು, ಮಂಗಳವಾರ (ನ. 27) ಛಟ್ಟೋಗ್ರಾಮ್‌ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದೆ. 3 ಹಿಂದೂ ದೇವಾಲಯಗಳ ಮೇಲೆ ಮತ್ತೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ (Bangladesh Unrest).

ಫಿರಂಗಿ ಬಜಾರ್‌ನಲ್ಲಿರುವ ಲೋಕನಾಥ ದೇವಾಲಯ, ಮಾನಸ ಮಾತಾ ದೇವಾಲಯ ಮತ್ತು
ಹಜಾರಿ ಲೇನ್‌ನ ಕಾಳಿ ಮಾತಾ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಸಂಘರ್ಷದಲ್ಲಿ ಓರ್ವ ಸಾವು

ಚಿನ್ಮೋಯ್ ಕೃಷ್ಣ ದಾಸ್ ಅವರ ಬಂಧನ ವಿರೋಧಿಸಿ ಛಟ್ಟೋಗ್ರಾಮ್‌ನಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆದಿದೆ. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಬಲ ಪ್ರಯೋಗಿಸಿದ್ದು, ಈ ಸಂಘರ್ಷದ ವೇಳೆ ಓರ್ವ ಮೃತಪಟ್ಟಿದ್ದಾನೆ. ಮೃತನನ್ನು 32 ವರ್ಷ ಟ್ರೈನಿ ಲಾಯರ್‌ ಸೈಫುಲ್‌ ಇಸ್ಲಾಂ ಆಲಿಫ್‌ ಎಂದು ಗುರುತಿಸಲಾಗಿದೆ. 10 ಮಂದಿಗೆ ಗಾಯಗಳಾಗಿವೆ. ಗಾಯಗೊಂಡವರಲ್ಲಿ ಪತ್ರಕರ್ತರೂ ಸೇರಿದ್ದಾರೆ.

ಛಟ್ಟೋಗ್ರಾಮ್‌ ವಕೀಲರ ಸಂಘದ ಅಧ್ಯಕ್ಷ ನಜೀಮ್ ಉದ್ದೀನ್ ಚೌಧರಿ ಮಾತನಾಡಿ, ಪ್ರತಿಭಟನಾಕಾರರು ಟ್ರೈನಿ ಲಾಯರ್‌ ಸೈಫುಲ್‌ ಇಸ್ಲಾಂ ಆಲಿಫ್‌ನನ್ನು ಕೊಠಡಿಯಿಂದ ಎಳೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ದೇಶದ್ರೋಹದ ಆರೋಪದ ಮೇಲೆ ಚಿನ್ಮೋಯ್‌ ಕೃಷ್ಣ ದಾಸ್ ಅವರನ್ನು ಜೈಲಿಗೆ ಕಳುಹಿಸುವಂತೆ ನ್ಯಾಯಾಲಯ ಆದೇಶಿಸಿದ ನಂತರ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಲಾಲ್ಡಿಘಿ ಪ್ರದೇಶದಲ್ಲಿ ಘರ್ಷಣೆಗಳು ಭುಗಿಲೆದ್ದವು. ವಿಭಾಗೀಯ ಸೌಲಭ್ಯಗಳನ್ನು ಒದಗಿಸುವಂತೆ ಮತ್ತು ಅವರ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡುವಂತೆ ನ್ಯಾಯಾಲಯವು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಚಿನ್ಮೋಯ್‌ ಅವರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ ಅನ್ನು ಪ್ರತಿಭನಾಕಾರರು ತಡೆಯಲು ಯತ್ನಿಸಿದರು ಎಂದು ವರದಿ ತಿಳಿಸಿದೆ.

ಅಪರಾಹ್ನ 3 ಗಂಟೆ ಸುಮಾರಿಗೆ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಗ್ರೆನೇಡ್‌, ಅಶ್ರುವಾಯು ಶೆಲ್‌ ಮತ್ತು ಲಾಠಿ ಪ್ರಯೋಗ ನಡೆಸಿದವು. ನಗರ ಪೊಲೀಸ್ ಉಪ ಆಯುಕ್ತ ಲಿಯಾಕತ್ ಅಲಿ ಮಾತನಾಡಿ, ಓರ್ವ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಸಾವಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾತರೆ. ಘರ್ಷಣೆಯಲ್ಲಿ ಪತ್ರಕರ್ತರು ಸೇರಿದಂತೆ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.

ಈ ಮಧ್ಯೆ ಕೃಷ್ಣ ದಾಸ್‌ ಅವರ ಬಂಧನದ ವಿರುದ್ದ ಭಾರತ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತ ಹಿಂದೂಗಳು ಮತ್ತು ಅವರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ದುಷ್ಕರ್ಮಿಗಳನ್ನು ಬಂಧಿಸದೆ ತಮ್ಮ ಹಕ್ಕುಗಳಿಗೆ ಬೇಡಿಕೆ ಮಂಡಿಸಿದ ಧಾರ್ಮಿಕ ಮುಖಂಡರ ವಿರುದ್ಧ ಕ್ರಮ ಕೈಗೊಂಡಿರುವುದನ್ನು ಖಂಡಿಸಿದೆ.

ಈ ಸುದ್ದಿಯನ್ನೂ ಓದಿ: Chinmoy Krishna Das: ಬಾಂಗ್ಲಾದಲ್ಲಿ ಹಿಂದೂ ಮುಖಂಡ ಕೃಷ್ಣ ದಾಸ್ ಬಂಧನ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರತಿಭಟನೆ