Friday, 22nd November 2024

BRICS Summit: ಭಾರತದ ಆರ್ಥಿಕ ಬೆಳವಣಿಗೆಯನ್ನು ಶ್ಲಾಘಿಸಿದ ಪುಟಿನ್; ಬ್ರಿಕ್ಸ್‌ ದೇಶಗಳಿಗೆ ಮಾದರಿ ಎಂದ ರಷ್ಯಾ ಅಧ್ಯಕ್ಷ

BRICS Summit

ಮಾಸ್ಕೋ: ಭಾರತದ ಆರ್ಥಿಕ ಬೆಳವಣಿಗೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಮುಕ್ತಕಂಠದಿಂದ ಶ್ಲಾಘಿಸಿದರು. ಭಾರತದ ಬೆಳವಣಿಗೆ ಬ್ರಿಕ್ಸ್‌ ರಾಷ್ಟ್ರಗಳಿಗೆ ಮಾದರಿ ಎಂದೂ ಅವರು ಹೇಳಿದರು. ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ 16ನೇ ಬ್ರಿಕ್ಸ್ ಶೃಂಗಸಭೆ (BRICS Summit)ಯಲ್ಲಿ ಅವರು ಮಾತನಾಡಿ ಭಾರತದ ಸಾಧನೆಗೆ ಮೆಚ್ಚುಗೆ ಸೂಚಿಸಿದರು. ಜತೆಗೆ 3 ದಿನಗಳ ಶೃಂಗಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಧನ್ಯವಾದ ಅರ್ಪಿಸಿದರು.

“ನಾವೆಲ್ಲರೂ ಹೆಚ್ಚಿನ ಆರ್ಥಿಕ ಬೆಳವಣಿಗೆಯ ದರವನ್ನು ಖಚಿತಪಡಿಸಿಕೊಳ್ಳುವ ಅಗತ್ಯದ ಬಗ್ಗೆ ಮಾತನಾಡುತ್ತೇವೆ. ನೀವು (ನರೇಂದ್ರ ಮೋದಿ) ಇದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೀರಿ” ಎಂದು ಪುಟಿನ್ ಹೇಳಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಟಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ. “ಈ ಸಾಧನೆಗಾಗಿ ನಾವು ನಿಮ್ಮನ್ನು ಅಭಿನಂದಿಸುತ್ತೇವೆ. ನಿಮ್ಮಲ್ಲಿನ ಶೇ. 7.5 ಆರ್ಥಿಕ ಬೆಳವಣಿಗೆ. ಇದು ನಮ್ಮಲ್ಲಿ ಅನೇಕರಿಗೆ ಉದಾಹರಣೆ” ಎಂದು ಅವರು ತಿಳಿಸಿದರು.

ಭಾರತದ ಆರ್ಥಿಕತೆಯು ಈ ವರ್ಷ ಶೇ. 7 ಮತ್ತು 2025ರಲ್ಲಿ ಶೇ. 6.5ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿದ್ದ ಬ್ರಿಕ್ಸ್ ಇದೀಗ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ಎಂಬ ಐದು ಹೆಚ್ಚುವರಿ ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.

“ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಬದಲಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಬೆಳವಣಿಗೆಯನ್ನು ನಾವು ಶೇ. 7ಕ್ಕೆ ಅಂದಾಜಿಸಿದ್ದೇವೆ. 2024-25ರ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇಕಡಾ 4.4ಕ್ಕೆ ಇಳಿಯುವ ನಿರೀಕ್ಷೆಯಿದೆʼʼ ಎಂದು ಐಎಂಎಫ್ ಏಷ್ಯಾ ಪೆಸಿಫಿಕ್ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಮಂಗಳವಾರ ಹೇಳಿದ್ದರು.

ಬ್ರಿಕ್ಸ್ ಶೃಂಗಸಭೆಯ ಹೊರತಾಗಿ ಪುಟಿನ್ ಅವರು ಮಂಗಳವಾರ (ಅಕ್ಟೋಬರ್‌ 22) ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಕಳೆದ ವರ್ಷ ದ್ವಿಪಕ್ಷೀಯ ವ್ಯಾಪಾರ ವಹಿವಾಟು ದಾಖಲೆಯ ಗರಿಷ್ಠ 56.8 ಬಿಲಿಯನ್ ಡಾಲರ್ ತಲುಪಿದೆ. ಇದು ಶೇ. 60ಕ್ಕಿಂತ ಹೆಚ್ಚಾಗಿದೆ ಎಂದು ಟಾಸ್ ವರದಿ ಮಾಡಿದೆ. ಈ ವರ್ಷದ ಜನವರಿ-ಆಗಸ್ಟ್‌ನಲ್ಲಿ ರಷ್ಯಾ ಮತ್ತು ಭಾರತದ ನಡುವಿನ ವ್ಯಾಪಾರ ವಹಿವಾಟು ಶೇ. 9ರಷ್ಟು ಹೆಚ್ಚಾಗಿದ್ದು, 37.4 ಬಿಲಿಯನ್ ಡಾಲರ್ ಆಗಿದೆ.

ಪುಟಿನ್‌ ಅವರೊಂದಿಗೆ ಮಾತುಕತೆ ನಡೆಸಿದ ಮೋದಿ ಅವರು ರಷ್ಯಾ- ಉಕ್ರೇನ್ ಸಂಘರ್ಷಕ್ಕೆ ಶಾಂತಿಯುವ ಪರಿಹಾರವಿದೆ ಎಂದು ಹೇಳಿದ್ದಾರೆ. ಭೇಟಿಯ ಸಮಯದಲ್ಲಿ ಇಬ್ಬರೂ ನಾಯಕರು ಪರಸ್ಪರ ತಬ್ಬಿಕೊಂಡು ಶುಭಾಶಯ ಕೋರಿಕೊಂಡಿದ್ದರು. ರಷ್ಯಾ- ಉಕ್ರೇನ್ ಸಮಸ್ಯೆ ಪರಿಹಾರಕ್ಕಾಗಿ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಎಲ್ಲ ಸಂಘರ್ಷಗಳನ್ನು ಮಾತುಕತೆಯಿಂದ ಪರಿಹರಿಸಬಹುದು ಎಂಬುದು ನಮ್ಮ ನಿಲುವಾಗಿದೆ. ಸಂಘರ್ಷಗಳಿಗೆ ಶಾಂತಿಯುತ ಪರಿಹಾರಗಳು ಇರಬೇಕು ಎಂದು ನಾವು ನಂಬುತ್ತೇವೆ. ಶಾಂತಿ ಸ್ಥಾಪನೆಗೆ ಭಾರತ ಯಾವಾಗಲೂ ಸಿದ್ದ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Modi Visit Russia : ರಷ್ಯಾ- ಉಕ್ರೇನ್‌ ಸಂಘರ್ಷಕ್ಕೆ ಶಾಂತಿಯುತ ಪರಿಹಾರ; ಪುಟಿನ್‌ಗೆ ಪ್ರಧಾನಿ ಮೋದಿ ಭರವಸೆ