Sunday, 3rd November 2024

#Brexit ಹರಿಕಥೆಗೆ ಬಿತ್ತು ಅಂತಿಮ ತೆರೆ

ಮೂರೂವರೆ ವರ್ಷಗಳ ಸರ್ಕಸ್ ಬಳಿಕ ಐರೋಪ್ಯ ಒಕ್ಕೂಟವನ್ನು (EU) ಬ್ರಿಟನ್ ಕೊನೆಗೂ ಅಧಿಕೃತವಾಗಿ ತೊರೆದಿದೆ. ಈ ಮೂಲಕ 47 ವರ್ಷಗಳ ಕಾಲ EU ಜೊತೆಗಿದ್ದ ಬೆಸುಗೆಯನ್ನು ಬ್ರಿಟನ್‌ ಇಂದು ಮುಗಿಸಿದೆ.

ಈ ಘಳಿಗೆಗೂ ಒಂದು ಗಂಟೆ ಮುನ್ನ ಸಾಮಾಜಿಕ ಜಾಲತಾಣಗಳಿಗೆ ಸಂದೇಶವೊಂದನ್ನು ರವಾನೆ ಮಾಡಿದ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್‌, “ಅನೇಕ ಜನರಿಗೆ ಇದೊಂದು ಭರವಸೆಯ ಘಳಿಗೆಯಾಗಿದೆ, ಈ ಕ್ಷಣಗಳು ಬರುವುದೇ ಇಲ್ಲವೆಂದು ಅನೇಕರು ಭಾವಿಸಿದ್ದರು. ಇನ್ನು ಕೆಲವರು ಏನನ್ನೋ ಕಳೆದುಕೊಂಡ ನೋವಿನಲ್ಲಿದ್ದಾರೆ. ಇವರ ನಡುವೆ ಮೂರನೇ ಗುಂಪೊಂದು ಇದ್ದು, ಬ್ರೆಕ್ಸಿಟ್‌ನ ಇಡೀ ರಾಜಕೀಯ ತಿಕ್ಕಾಟಕ್ಕೆ ಅಂತ್ಯವೆಂಬುದೇ ಬಾರದು ಎಂದು ಭಾವಿಸಿದ್ದರು,”

“ಈ ಎಲ್ಲಾ ಭಾವನೆಗಳನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಮತ್ತು ನಮ್ಮ ಸರ್ಕಾರ ಹಾಗೂ ನನ್ನ ಕೆಲಸವೇನೆಂದರೆ — ಭವಿಷ್ಯದತ್ತ ಹೆಜ್ಜೆ ಹಾಕಲು ಇಡೀ ದೇಶವನ್ನು ಒಂದೆಡೆ ತರುವುದಾಗಿದೆ,” ಎಂದಿದ್ದಾರೆ.

“ತನ್ನೆಲ್ಲಾ ಶಕ್ತಿ ಹಾಗೂ ಅನುಕರಣನೀಯ ಗುಣಗಳನ್ನು ಪರಿಗಣನೆಗೆ ತೆಗೆದುಕೊಂಡಾಗ, ಕಳೆದ 50 ವರ್ಷಗಳಿಂದೂ EU ನಡೆದುಕೊಂಡು ಹೋಗುತ್ತಿರುವ ಹಾದಿ ನಮ್ಮ ದೇಶಕ್ಕೆ ಸೂಕ್ತವಾಗಿ ಉಳಿದಿಲ್ಲ. ಈ ರಾತ್ರಿ ನಾನು ಹೇಳಲು ಬಯಸುವ ಅತ್ಯಂತ ಪ್ರಮುಖ ವಿಚಾರವೆಂದರೆ, ಇದು ಒಂದು ಅಂತ್ಯವಲ್ಲ, ಹೊಸ ಆರಂಭ. ನಿಜವಾದ ರಾಷ್ಟ್ರೀಯ ಮನ್ವಂತರ ಹಾಗೂ ಬದಲಾವಣೆ,” ಬೋರಿಸ್ ಜಾನ್ಸನ್,

                                                                 ಬ್ರಿಟನ್ ಪ್ರಧಾನಿ

ಗ್ರೀನ್‌ವಿಚ್‌ ಕಾಲಮಾನ ರಾತ್ರಿ 11:00 ಗಂಟೆಗೆ ಘಟಿಸಿದ ಈ ಘಳಿಗೆಯನ್ನು ಅಲ್ಲಿನ ಒಂದು ವರ್ಗ ಸಂಭ್ರಮಿಸಿದರೆ, ಬ್ರೆಕ್ಸಿಟ್ ವಿರೋಧಿ ಬಳಗಗಳು ವಿರೋಧಿಸಿವೆ. ಸ್ಕಾಟ್ಲೆಂಡ್‌ನಲ್ಲಿ ಬ್ರೆಕ್ಸಿಟ್ ವಿರೋಧಿಸಿ ಮೋಂಬತ್ತಿ ಮೆರವಣಿಗೆ ನಡೆದರೆ, ಲಂಡನ್‌ನ ಸಂಸತ್‌ ಚೌಕದ ಬಳಿ ಬ್ರೆಕ್ಸಿಟ್ ಪರವಾದಿಗಳು ಪಾರ್ಟಿ ಮಾಡಿದ್ದಾರೆ.

1973ರಲ್ಲಿ ಒಕ್ಕೂಟ ಸೇರಿಕೊಂಡಿದ್ದ ಬ್ರಿಟನ್‌, ಕಳೆದ 5-6 ವರ್ಷಗಳಲ್ಲಿ ಐರೋಪ್ಯ ಒಕ್ಕೂಟದ ದೇಶಗಳಲ್ಲಿ ಕ್ಷಿಪ್ರವಾಗಿ ಬದಲಾಗುತ್ತಿರುವ ರಾಜಕೀಯ ವಾಸ್ತವಾಂಶಗಳ ಕಾರಣವೊಡ್ಡಿ, ಅಲ್ಲಿಂದ ಹೊರಬರಲು 2016ರಲ್ಲಿ ಜನಮತ ಸಂಗ್ರಹ ಮಾಡಿತ್ತು. ಇದಲ್ಲಿ ದೇಶದ 53.4% ಜನರು ಬ್ರೆಕ್ಸಿಟ್ ಪರವಾಗಿ ಮತ ಹಾಕಿದರೆ, 46.6% ಜನರ ವಿರೋಧಿಸಿದ್ದರು.

ಈ ಅಲ್ಪ ವ್ಯತ್ಯಾಸದ ಪ್ರತಿಬಿಂಬವಾಗಿ, ಇಡೀ ಬ್ರಿಟನ್‌ ದ್ವೀಪದಲ್ಲಿ ಬ್ರೆಕ್ಸಿಟ್ ಪರ ಹಾಗೂ ವಿರೋಧದ ಅಲೆಗಳು ವ್ಯಾಪಕವಾಗಿ ಎದ್ದಿದ್ದವು. ಪ್ರತ್ಯೇಕ ದೇಶ ಹಾಗೂ ಬ್ರಿಟನ್‌ನ ಭಾಗವೂ ಆಗಿರು ಸ್ಕಾಟ್ಲೆಂಡ್‌ನ ಬಹುತೇಕ ಮಂದಿ ಬ್ರೆಕ್ಸಿಟ್ ವಿರೋಧ ಮಾಡಿದ ಕಾರಣ, ಬ್ರಿಟನ್‌ನಿಂದ ಸಂಪೂರ್ಣವಾಗಿ ಹೊರಬಂದು ತನ್ನದೇ ಪೂರ್ಣ ಆಡಳಿತ ಹೊಂದಲು ಸ್ಕಾಟ್ಲೆಂಡ್‌ನಲ್ಲಿ ಮಾತುಗಳು ಕೇಳಿ ಬಂದಿದ್ದವು.

ಇಷ್ಟೇ ಕಠಿಣತೆಗಳನ್ನು ಕಂಡ ಬ್ರಿಟನ್‌ ಸಂಸತ್ತಿನಲ್ಲಿ, ಬ್ರೆಕ್ಸಿಟ್ ಸಂಬಂಧಿ ಕಾನೂನು ತರಲು ನಡೆಸಿದ ಪ್ರಯತ್ನಗಳು ಅಷ್ಟಿಷ್ಟಲ್ಲ. ಇದೇ ಪ್ರಕ್ರಿಕೆಯೆಗಳ ಮಧ್ಯೆ ಮಾಜಿ ಪ್ರಧಾನಿಗಳಾ ಡೇವಿಡ್ ಕ್ಯಾಮರೂನ್ ಹಾಗೂ ಥರೇಸಾ ಮೇ ತಂತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.