ನ್ಯೂಯಾರ್ಕ್ : ಭಾರತದ ನಂಬರ್ ಒನ್ ಆನ್ಲೈನ್ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್(Byju’s) ಇದೀಗ ತನ್ನ ಸಾಲಗಾರರ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಜೂನ್ 5 ರಂದು ಸಾಲದ ಕಂತೊಂದನ್ನು ಕಟ್ಟಲು ಡೆಡ್ಲೈನ್ ಇತ್ತು. ಆದರೆ ಸಾಲದ ಹಣವನ್ನು ಕಟ್ಟುವ ಬದಲು ಬೈಜುಸ್ ಅಮೆರಿಕದ ನ್ಯೂಯಾರ್ಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ .
ಸಾಲಗಾರರು ಅನಗತ್ಯವಾಗಿ ಹಿಂಸೆ ಕೊಟ್ಟು ಮಾನ ಹರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೈಜುಸ್ , ತನಗೆ ಸಾಲ ಕೊಟ್ಟಿರುವ ರೆಡ್ವುಡ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಸಂಸ್ಥೆ ವಿರುದ್ಧವೇ ಕೋರ್ಟ್ನಲ್ಲಿ ದಾವೆ ಹಾಕಿದೆ .
ರೆಡ್ವುಡ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಸಂಸ್ಥೆ ದುರಾಸೆಯಿಂದ ತನ್ನ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದೆ. ಈ ಸಂಸ್ಥೆಯನ್ನು ಅನರ್ಹಗೊಳಸಬೇಕು ಎಂದು ನ್ಯೂಯಾರ್ಕ್ ಸುಪ್ರೀಂಕೋರ್ಟ್ನಲ್ಲಿ ಬೈಜುಸ್ ಸಂಸ್ಥೆ ಮನವಿ ಮಾಡಿದೆ.
ಇದರೊಂದಿಗೆ ಬೈಜೂಸ್ ಹಾಗೂ ಅವರ ಸಾಲಗಾರರ ಮಧ್ಯೆ ಅಮೆರಿಕದಲ್ಲಿ ಎರಡು ಕಡೆ ಕೋರ್ಟ್ ಕೇಸ್ ದಾಖಲಾದಂತಾಗಿದೆ. ಡೆಲಾವೇರ್ನಲ್ಲಿ ಬೈಜುಸ್ನ ಸಾಲಗಾರರು ಕೆಲ ತಿಂಗಳ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದು, ಅಮೆರಿಕದಲ್ಲಿರುವ ಬೈಜೂಸ್ನ ಅಂಗಸಂಸ್ಥೆ ಆಲ್ಫಾವನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಕೇಸ್ನ ವಿಚಾರಣೆ ನಡೆಯುತ್ತಿದೆ.