Friday, 13th December 2024

ಸಾಲಗಾರರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬೈಜುಸ್

ನ್ಯೂಯಾರ್ಕ್ : ಭಾರತದ ನಂಬರ್ ಒನ್ ಆನ್​ಲೈನ್ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್(Byju’s) ಇದೀಗ ತನ್ನ ಸಾಲಗಾರರ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಜೂನ್ 5 ರಂದು ಸಾಲದ ಕಂತೊಂದನ್ನು ಕಟ್ಟಲು ಡೆಡ್​ಲೈನ್ ಇತ್ತು. ಆದರೆ ಸಾಲದ ಹಣವನ್ನು ಕಟ್ಟುವ ಬದಲು ಬೈಜುಸ್ ಅಮೆರಿಕದ ನ್ಯೂಯಾರ್ಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ .

ಸಾಲಗಾರರು ಅನಗತ್ಯವಾಗಿ ಹಿಂಸೆ ಕೊಟ್ಟು ಮಾನ ಹರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೈಜುಸ್ , ತನಗೆ ಸಾಲ ಕೊಟ್ಟಿರುವ ರೆಡ್​ವುಡ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಸಂಸ್ಥೆ ವಿರುದ್ಧವೇ ಕೋರ್ಟ್​ನಲ್ಲಿ ದಾವೆ ಹಾಕಿದೆ .

ರೆಡ್​ವುಡ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಸಂಸ್ಥೆ ದುರಾಸೆಯಿಂದ ತನ್ನ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದೆ. ಈ ಸಂಸ್ಥೆಯನ್ನು ಅನರ್ಹಗೊಳಸಬೇಕು ಎಂದು ನ್ಯೂಯಾರ್ಕ್ ಸುಪ್ರೀಂಕೋರ್ಟ್​ನಲ್ಲಿ ಬೈಜುಸ್ ಸಂಸ್ಥೆ ಮನವಿ ಮಾಡಿದೆ.

ಇದರೊಂದಿಗೆ ಬೈಜೂಸ್ ಹಾಗೂ ಅವರ ಸಾಲಗಾರರ ಮಧ್ಯೆ ಅಮೆರಿಕದಲ್ಲಿ ಎರಡು ಕಡೆ ಕೋರ್ಟ್ ಕೇಸ್ ದಾಖಲಾದಂತಾಗಿದೆ. ಡೆಲಾವೇರ್​ನಲ್ಲಿ ಬೈಜುಸ್​ನ ಸಾಲಗಾರರು ಕೆಲ ತಿಂಗಳ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದು, ಅಮೆರಿಕದಲ್ಲಿರುವ ಬೈಜೂಸ್​ನ ಅಂಗಸಂಸ್ಥೆ ಆಲ್ಫಾವನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಕೇಸ್​ನ ವಿಚಾರಣೆ ನಡೆಯುತ್ತಿದೆ.