Friday, 10th January 2025

Chandra Arya: ಕೆನಡಾ ಪ್ರಧಾನಿ ರೇಸ್‌ನಲ್ಲಿರುವ ಕನ್ನಡಿಗ; ಚಂದ್ರ ಆರ್ಯ ಬಗ್ಗೆ ನಿಮಗೆಷ್ಟು ಗೊತ್ತು?

ಒಟ್ಟವಾ:‌ ಜಸ್ಟಿನ್ ಟ್ರುಡೊ(Justin Trudeau) ಅವರು ಕೆನಡಾ(Canada) ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದು,ಕೆನಡಾ ದೇಶದ ರಾಜಕೀಯ ಪಡಸಾಲೆಯ ಪ್ರಧಾನಿ ರೇಸ್‌ನಲ್ಲಿ ಇದೀಗ ಸಾಕಷ್ಟು ಅಭ್ಯರ್ಥಿಗಳ ಹೆಸರುಗಳು ಕೇಳಿ ಬರುತ್ತಿದೆ. ಹಲವರಿಗೆ ಕೆನಡಾ ಪ್ರಧಾನಿ ಯಾರಾಗಬಹುದು ಎಂಬ ಕುತೂಹಲವಿದೆ. ಈ ಮಧ್ಯೆ ಕೆಲ ವರ್ಷಗಳ ಹಿಂದೆಯಷ್ಟೇ ಕೆನಡಾ ಸಂಸತ್‌ ನಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದ ಕರ್ನಾಟಕ ಮೂಲದ ಚಂದ್ರ ಆರ್ಯ(Chandra Arya) ಅವರ ಹೆಸರು ಕೂಡ ಪ್ರಧಾನಿ ಹುದ್ದೆಗಾಗಿ ಮುನ್ನೆಲೆಗೆ ಬಂದಿದೆ.

ಲಿಬರಲ್ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದ ನಡುವೆ ಜಸ್ಟಿನ್ ಟ್ರುಡೊ ಕೆನಡಾದ ಪ್ರಧಾನಿ ಸ್ಥಾನಕ್ಕೆ ನಾಲ್ಕು ದಿನಗಳ ಹಿಂದೆಯಷ್ಟೇ ರಾಜೀನಾಮೆ ಘೋಷಿಸಿದರು. ಟ್ರುಡೊ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಭಾರತ ಮೂಲದ ಸಂಸತ್ ಸದಸ್ಯ ಚಂದ್ರ ಆರ್ಯ ಅವರು ಪಕ್ಷದಿಂದ ಕೆನಡಾದ ಮುಂದಿನ ಪ್ರಧಾನಿಯಾಗಲು ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ನಾನು ಕೆನಡಾದ ಮುಂದಿನ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿದ್ದೇನೆ. ಇದರಿಂದ ನಾನು ನಮ್ಮ ದೇಶವನ್ನು ಪುನರ್‌ ನಿರ್ಮಿಸಲು ಮತ್ತು ಭವಿಷ್ಯದ ಪೀಳಿಗೆಯನ್ನು ಸಮೃದ್ಧವಾಗಿಸಲು ಪ್ರಯತ್ನಿಸುತ್ತೇನೆ. ಕೆನಡಾಕ್ಕೆ ದೊಡ್ಡ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆದರದ ನಾಯಕತ್ವದ ಅಗತ್ಯವಿದೆ. ದೇಶದ ಆರ್ಥಿಕತೆಯನ್ನು ಪುನರುಜ್ಜಿವನಗೊಳಿಸಲು ಮತ್ತು ಎಲ್ಲಾ ಕೆನಡಿಯನ್ನರಿಗೆ ಸಮಾನ ಅವಕಾಶಗಳನ್ನು ಒದಗಿಸಲು ಕೆನಡಾ ಇಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಚಂದ್ರ ಆರ್ಯ ಹೇಳಿದ್ದಾರೆ.

ಪ್ರಧಾನಿಯಾಗುವ ತಮ್ಮ ಉದ್ದೇಶದ ಬಗ್ಗೆ ಮಾತನಾಡಿರುವ ಚಂದ್ರ ಆರ್ಯ, ಕೆನಡಾಕ್ಕೆ ಆರ್ಥಿಕತೆಯನ್ನು ಮರುನಿರ್ಮಾಣ ಮಾಡುವ ಅವಶ್ಯಕತೆ ಇದೆ. ದೇಶಕ್ಕೆ ಸಮೃದ್ಧಿಯನ್ನು ಮರುಸ್ಥಾಪಿಸುವುದು ಮತ್ತು ಎಲ್ಲಾ ಕೆನಡಿಯನ್ನರಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವಂತಹ ದೊಡ್ಡ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ನಾಯಕತ್ವದ ಅಗತ್ಯ ಮತ್ತು ಅನಿವಾರ್ಯತೆ ಎಂದು ಹೇಳಿದರು. ಕೆನಡಾವನ್ನು ಸಾರ್ವಭೌಮ ಗಣರಾಜ್ಯವನ್ನಾಗಿ ಮಾಡುವ ಭರವಸೆಯನ್ನು ನೀಡಿದ್ದು,ಆರ್ಥಿಕತೆಯಲ್ಲಿ ಅಭಿವೃದ್ಧಿ ಕಾಣಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಮಾತನಾಡಿದರು.

ಕನ್ನಡಿಗ ಚಂದ್ರ ಆರ್ಯ

ಚಂದ್ರ ಆರ್ಯ ಅಪ್ಪಟ ಕನ್ನಡಿಗ. ಕರ್ನಾಟಕ ಅವರ ಜನ್ಮಭೂಮಿ. ಕರ್ನಾಟಕದಲ್ಲಿ ಹುಟ್ಟಿದ ಅವರು ಕೆನಡಾದಲ್ಲಿ ಖ್ಯಾತಿ ಗಳಿಸಿದ್ದಾರೆ. ಚಂದ್ರ ಆರ್ಯ ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯ ದ್ವಾರಲು ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. 2006ರಲ್ಲಿ ಕೆನಡಾಕ್ಕೆ ತೆರಳಿದ ನಂತರ ಅವರು ಮೊದಲು ಇಂಡೋ-ಕೆನಡಾ ಒಟ್ಟಾವಾ ಬಿಸಿನೆಸ್ ಚೇಂಬರ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬಳಿಕ 2015ರಲ್ಲಿ ಕೆನಡಾದ ಫೆಡರಲ್ ಚುನಾವಣೆಯಲ್ಲಿ ನೇಪಿಯನ್ ರೈಡಿಂಗ್‌ಗೆ ಸಂಸದರಾದರು. ಅವರು 2019 ಮತ್ತು 2021 ರಲ್ಲಿ ಮರು ಆಯ್ಕೆಯಾದರು.

ಚಂದ್ರ ಆರ್ಯ ಅವರು ಕೆನಡಾ ರಾಜಕೀಯದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ವಿಶೇಷವಾಗಿ ಭಾರತೀಯ ಸಮುದಾಯ ಮತ್ತು ಕೆನಡಾದ ಸಮಾಜದ ಪ್ರಮುಖ ವಿಷಯಗಳ ಬಗ್ಗೆ ಅವರು 2022ರಲ್ಲಿ ಕೆನಡಾದ ಹೌಸ್ ಆಫ್ ಕಾಮನ್ಸ್‌ನಲ್ಲಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಭಾಷಣ ಮಾಡಿ ಪ್ರಸಿದ್ಧಿಯಾದರು. ಟೊರೊಂಟೊದಲ್ಲಿನ ಹಿಂದೂ ದೇವಾಲಯಗಳ ಧ್ವಂಸ ಪ್ರಕರಣಗಳಲ್ಲಿ ಅವರು ಧ್ವನಿ ಎತ್ತಿದ್ದರು.

ಕೆನಡಾ ಸಂಸತ್‌ನಲ್ಲಿ ಕನ್ನಡದ ಕಹಳೆ

ಕೆನಡಾ ದೇಶದ ಸಂಸತ್‌ನಲ್ಲಿ ಕನ್ನಡ ಭಾಷೆ ಮಾತನಾಡುವ ಮೂಲಕ ಚಂದ್ರ ಆರ್ಯ ಅವರು ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದರು. ದೂರದ ಕೆನಡಾದಲ್ಲಿ ಕಸ್ತೂರಿ ಕನ್ನಡದ ಬೀಜ ಬಿತ್ತಿದ್ದರು. ಚಂದ್ರ ಆರ್ಯ ಕೆನಡಾದ ಪಾರ್ಲಿಮೆಂಟ್‌ನಲ್ಲಿ ತಮ್ಮ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡ ಪ್ರೀತಿಯನ್ನು ತೋರಗೊಟ್ಟಿದ್ದರು. ʼಕನ್ನಡವಲ್ಲ ತಿಂಗಳು ನಡೆಸುವ ಗುಲ್ಲಿನ ಕಾಮನ ಬಿಲ್ಲು; ರವಿ ಶಶಿ ತಾರೆಯ ನಿತ್ಯೋತ್ಸವವದು ಸರಸ್ವತಿ ವೀಣೆಯ ಸೊಲ್ಲುʼ ಎಂಬ ಕವಿವಾಣಿಯನ್ನು ಅಕ್ಷರಶಃ ನಿಜಗೊಳಿಸಿದ್ದರು.

ಕೆನಡಾದ ಪಾರ್ಲಿಮೆಂಟ್‌ ಸಂಸದರಾಗಿರುವ ತುಮಕೂರು ಮೂಲದ ಕನ್ನಡಿಗ ಚಂದ್ರ ಆರ್ಯ ಅವರು ‘ನಾನು ನನ್ನ ಮಾತೃಭಾಷೆ ಕನ್ನಡದಲ್ಲೇ ಮಾತನಾಡುತ್ತೇನೆ’ ಎಂದು ಹೇಳುವ ಮೂಲಕ ಸಿರಿಗನ್ನಡದ ಕಂಪನ್ನು ಹೊರಜಗತ್ತಿನಲ್ಲಿ ಪಸರಿಸಿದ್ದರು. ಕೆನಡಾದ ಕನ್ನಡಿಗ ಸಂಸದ ಚಂದ್ರ ಆರ್ಯ ಹೀಗೆ ಮಾತನಾಡಿದ್ದರು.

“ಮಾನ್ಯ ಸಭಾಪತಿ, ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಕನ್ನಡದಲ್ಲಿ ಮಾತನಾಡುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟಸಾರ್ವಭೌಮ ಡಾ ರಾಜ್‌ಕುಮಾರ್ ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತಿದ್ದೇನೆ. ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಧನ್ಯವಾದಗಳು ಸಭಾಪತಿಗಳೇ ಎಂದು ಅಬ್ಬರಿಸಿದ್ದರು. ಇದೀಗ ಈ ಹೆಮ್ಮೆಯ ಕನ್ನಡಿಗ ಕೆನಡಾ ಪ್ರಧಾನಿ ರೇಸ್‌ನಲ್ಲೂ ಇದ್ದಾರೆ ಎನ್ನುವುದೇ ಕರುನಾಡಿಗೆ ಹೆಮ್ಮೆಯ ವಿಚಾರ

ಈ ಸುದ್ದಿಯನ್ನೂ ಓದಿ:Deepika Padukone: ವಾರಕ್ಕೆ 90 ಗಂಟೆ ಕೆಲಸ ಮಾಡಿ ಎಂದ ಉದ್ಯಮಿ- ನಟಿ ದೀಪಿಕಾ ಪಡುಕೋಣೆ ಫುಲ್‌ ಗರಂ

Leave a Reply

Your email address will not be published. Required fields are marked *