ಢಾಕಾ: (Chinmoy Das arrested) ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ನಿರಂತರ ದಾಳಿಗಳ ನಡುವೆ ಇಸ್ಕಾನ್ ಅನ್ನು ನಿಷೇಧಿಸುವಂತೆ ಕೋರಿ ಬಾಂಗ್ಲಾದೇಶ ಹೈಕೋರ್ಟ್‌ಗೆ ಇಂದು (ನ.27) ಅರ್ಜಿ ಸಲ್ಲಿಸಲಾಗಿದೆ. ಚಿತ್ತಗಾಂಗ್ ಮತ್ತು ರಂಗ್‌ಪುರ (Chittagong and Rangpur) ನಗರಗಳಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ತಡೆಯಲು ಕೂಡಲೇ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕೆಂದೂ ಮನವಿ ಮಾಡಲಾಗಿದೆ.
ಇಸ್ಕಾನ್‌ನ ಇತ್ತೀಚೆಗಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈವರೆಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ. ಸರ್ಕಾರದ ಕ್ರಮಗಳ ಕುರಿತು ಕಡ್ಡಾಯವಾಗಿ ಗುರುವಾರ ಮಾಹಿತಿ ನೀಡಬೇಕೆಂದು ಅಟಾರ್ನಿ ಜನರಲ್ ಮೊಹಮ್ಮದ್ ಅಸಾದುಝಮಾನ್ ಅವರಿಗೆ ನ್ಯಾಯಾಲಯವು ಸೂಚಿಸಿದೆ. ಹೈಕೋರ್ಟ್ ಪೀಠದಲ್ಲಿ ನ್ಯಾಯಮೂರ್ತಿ ಫರಾ ಮೆಹಬೂಬ್ ಮತ್ತು ನ್ಯಾಯಮೂರ್ತಿ ದೇಬಶಿಶ್ ರಾಯ್ ಚೌಧರಿ ಇದ್ದಾರೆ ಎಂದು ತಿಳಿದು ಬಂದಿದೆ.
ಬಾಂಗ್ಲಾದೇಶ ಸರ್ಕಾರವು ಇಸ್ಕಾನ್ (ISKCON) ಅನ್ನು ಧಾರ್ಮಿಕ ಮೂಲಭೂತವಾದಿ ಸಂಘಟನೆ ಎಂದು ಘೋಷಿಸಿದೆ. ಇದು ಸರ್ಕಾರದ ಮುಖ್ಯ ಅಜೆಂಡಾವಾಗಿದ್ದು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದು ಬಾಂಗ್ಲಾದೇಶದ ಅಟಾರ್ನಿ ಜನರಲ್, ಹೈಕೋರ್ಟ್‌ಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಎಚ್ಚರವಹಿಸುವಂತೆ ಹೈಕೋರ್ಟ್ ಬಾಂಗ್ಲಾ ಸರ್ಕಾರಕ್ಕೆ ಸೂಚನೆ ನೀಡಿದೆ.
ಘಟನೆಯ ಮಾಹಿತಿ
ನವೆಂಬರ್ 25 ರಂದು ಢಾಕಾ ವಿಮಾನ ನಿಲ್ದಾಣದಲ್ಲಿ ಪ್ರಮುಖ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಯಿತು. ಅಂದಿನಿಂದ ಹಿಂಸಾಚಾರ ಮತ್ತು ಅಶಾಂತಿ ಪ್ರಾರಂಭವಾಗಿದೆ. ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ರಕ್ಷಣೆಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದರು. ಸದ್ಯ ಅವರ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸಲಾಗಿದ್ದು, ಜಾಮೀನನ್ನು ನಿರಾಕರಿಸಲಾಗಿದೆ. ಅವರ ಬಂಧನದ ನಂತರ ಬಾಂಗ್ಲಾದೇಶದಾದ್ಯಂತ ಪ್ರತಿಭಟನೆಗಳು ಪ್ರಾರಂಭವಾದವು. ಅವರ ಬಿಡುಗಡೆಗೆ ಹಿಂದೂ ಸಮುದಾಯವು ಒತ್ತಾಯಿಸಿದೆ.
ಚಿತ್ತಗಾಂಗ್ ನ್ಯಾಯಾಲಯದ ಹೊರಗೆ ನಡೆದ ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆದುಕೊಂಡಿತು. ಈ ಪ್ರತಿಭಟನೆಯಲ್ಲಿ ವಕೀಲರೊಬ್ಬರು ಮೃತಪಟ್ಟಿದ್ದಾರೆ. ಈ ಹಿಂಸಾಚಾರದಲ್ಲಿ 20ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರು ಇತ್ತೀಚೆಗೆ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸುತ್ತಾ, ಹಿಂದೂ ಸಮುದಾಯಕ್ಕೆ ರಕ್ಷಣೆ ನೀಡುವಂತೆ ಒತ್ತಾಯಿಸಿ ಹಲವಾರು ಪ್ರತಿಭಟನೆಗಳನ್ನು ನಡೆಸಿದ್ದರು. ಅವರ ಬಂಧನವು ಇದೀಗ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಭಯ ಮತ್ತು ಅಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರ ಬಂಧನವನ್ನು ಇಸ್ಕಾನ್ ಕಟುವಾಗಿ ಖಂಡಿಸಿದೆ. ಅಂತಾರಾಷ್ಟ್ರೀಯ ಸಮುದಾಯವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಕರೆ ನೀಡಿದೆ. ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರ ರಕ್ಷಣೆಗಾಗಿ ವಿಶ್ವಸಂಸ್ಥೆಯು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಇಸ್ಕಾನ್ ವಕ್ತಾರರೊಬ್ಬರು ಆಗ್ರಹಿಸಿದ್ದಾರೆ.
ಕಳವಳ ವ್ಯಕ್ತಪಡಿಸಿರುವ ಭಾರತ
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿ ಮತ್ತು ಹಿಂಸಾಚಾರದ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತೀವ್ರ ಕಳವಳ ವ್ಯಕ್ತಪಡಿಸಿದೆ. ಬಾಂಗ್ಲಾದೇಶದಲ್ಲಿನ ಹಿಂದೂ ಮತ್ತು ಇತರೆ ಅಲ್ಪಸಂಖ್ಯಾತರ ಮೇಲೆ ಮೂಲಭೂತವಾದಿಗಳ ದಾಳಿಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಈ ಘಟನೆಯಿಂದ ತಿಳಿದುಬಂದಿದೆ. ಇವುಗಳಲ್ಲಿ ಅಲ್ಪಸಂಖ್ಯಾತರ ಮನೆಗಳು ಮತ್ತು ಹಿಂದೂ ವ್ಯಾಪಾರಿಗಳ ಅಂಗಡಿಗಳಿಗೆ ಬೆಂಕಿ ಹಚ್ಚುವುದು, ಲೂಟಿ, ಕಳ್ಳತನ ಮತ್ತು ದೇವಾಲಯಗಳು ಮತ್ತು ದೇವರ ವಿಗ್ರಹಗಳನ್ನು ಅಪವಿತ್ರಗೊಳಿಸುವಿಕೆ ಸೇರಿವೆ ಎಂದು ಸಚಿವಾಲಯವು ಹೇಳಿದೆ.
ಈ ಸುದ್ದಿಯನ್ನೂ ಓದಿ : ISKCON: ʻಬಾಂಗ್ಲಾದೇಶದಲ್ಲಿ ಇಸ್ಕಾನ್ ಅನ್ನು ಬ್ಯಾನ್ ಮಾಡಿ, ಇಲ್ಲ ಭಕ್ತರನ್ನು ಕೊಲ್ಲುತ್ತೇವೆʼ-ಇಸ್ಲಾಂ ಸಂಘಟನೆಗಳಿಂದ ಎಚ್ಚರಿಕೆ!