Friday, 29th November 2024

Chinmoy Krishna Das Brahmachari: ಬಾಂಗ್ಲಾದಲ್ಲಿ ಅರೆಸ್ಟ್‌ ಆಗಿರೋ ಚಿನ್ಮೋಯ್‌ ದಾಸ್‌ ಅವರನ್ನೇ ಉಚ್ಚಾಟಿಸಿದ ಇಸ್ಕಾನ್‌! ಅನೇಕರಿಂದ ವಿರೋಧ

Bangladesh Unrest

ಢಾಕಾ: ದೇಶದ್ರೋಹ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ಧಾರ್ಮಿಕ ಗುರು ಚಿನ್ಮೊಯ್ ಕೃಷ್ಣದಾಸ್ ಬ್ರಹ್ಮಚಾರಿ (Chinmoy Krishna Das Brahmachari)ಅವರಿಂದ ಸ್ವತಃ ಬಾಂಗ್ಲಾದೇಶದ ಇಸ್ಕಾನ್‌ ಸಂಸ್ಥೆ ಅಂತರ ಕಾಯ್ದುಕೊಂಡಿದ್ದು, ಅವರನ್ನು ಎಲ್ಲಾ ಹುದ್ದೆಗಳಿಂದ ಉಚ್ಚಾಟನೆಗೊಳಿಸಿದೆ. ದೇಶಾದ್ಯಂತ ಇಸ್ಕಾನ್‌(ISKCON) ಅನ್ನು ನಿಷೇಧ ಮಾಡಬೇಕು ಎಂಬ ಕೂಗು ಕೇಳಿ ಬಂದಿರುವ ಬೆನ್ನಲ್ಲೇ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ.

ಈ ಕುರಿತು ಇಸ್ಕಾನ್‌ನ ಬಾಂಗ್ಲಾದೇಶದ ಜನರಲ್ ಸೆಕ್ರಟರಿ ಚಾರು ಚಂದ್ರ ದಾಸ್‌ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿದ್ದು, ಹಿಂದೂ ಮುಖಂಡ ಧಾರ್ಮಿಕ ಗುರು ಚಿನ್ಮೊಯ್ ಕೃಷ್ಣದಾಸ್ ಅವರ ಮಾತುಗಳಿಗೆ ಹಾಗೂ ಅವರು ನಡೆಸಿದ ಚಟುವಟಿಕೆಗಳಿಗೆ ಇಸ್ಕಾನ್ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. ಇನ್ನು ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, 23 ಸೆಕೆಂಡ್‌ಗಳ ಈ ವೀಡಿಯೋ ಬೆಂಗಾಲಿ ಭಾಷೆಯಲ್ಲಿದ್ದು, ಬಾಂಗ್ಲಾದೇಶದ ನೂತನ ಸರ್ಕಾರದ ಆದೇಶದಿಂದ ಬಂಧಿಸಲ್ಪಟ್ಟಿರುವ ಚಿನ್ಮೊಯ್ ಕೃಷ್ಣದಾಸ್ ಅವರಿಗೂ ಬಾಂಗ್ಲಾದೇಶದ ಇಸ್ಕಾನ್ ಸಂಸ್ಥೆಗೂ ಇನ್ನುಮುಂದೆ ಯಾವುದೇ ಸಂಬಂಧ ಇರುವುದಿಲ್ಲ, ಅವರ ಮಾತುಗಳಿಗೆ ಇಸ್ಕಾನ್ ಸಂಸ್ಥೆ ಜವಾಬ್ದಾರಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಾಂಗ್ಲಾದೇಶದ ಇಸ್ಕಾನ್ ಸಮುದಾಯದ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿನ್ಮೊಯಿ ಕೃಷ್ಣ ದಾಸ್ ಪ್ರಭು ಅವರನ್ನು ನೂಪುರ್ ಶರ್ಮಾಗೆ ಹೋಲಿಸಿದ್ದು, ಅವರು ಬಾಂಗ್ಲಾದ ನೂಪುರ್ ಶರ್ಮಾ 2.0 ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಸ್ಕಾನ್‌ನಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಚಾರು ಚಂದನ್ ದಾಸ್ ಬಂಗಾಳದೇಶಿ ಇಸ್ಕಾನ್ ಪ್ರಧಾನ ಕಾರ್ಯದರ್ಶಿ ಪ್ರಭು ಜಿ ಬಂಧನದಿಂದ ದೂರವಾಗುವುದು ಹೇಗೆ ಅವರ ಕೆಲವು ಹೇಳಿಕೆಗಳು ಸಂಪೂರ್ಣವಾಗಿ ಧಾರ್ಮಿಕವಾಗಿವೆ ಎಂದು ಕಾಮೆಂಟ್ ಮಾಡಿದ್ದಾರೆ. ಇತಿಹಾಸ ಪುನರಾವರ್ತನೆಯಾಗುತ್ತಿದೆ. ಹಿಂದೂಗಳ ಶತ್ರುಗಳು ಹಿಂದೂಗಳೇ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಚಿನ್ಮೋಯ್ ಪ್ರಭುವನ್ನು ಹೊರಹಾಕಲು ಇಸ್ಕಾನ್ ಇತ್ತೀಚೆಗೆ ತೆಗೆದುಕೊಂಡ ನಿರ್ಧಾರವು ಈ ಸ್ವಯಂ ವಿನಾಶಕಾರಿ ನಡವಳಿಕೆಗೆ ಒಂದು ಜ್ವಲಂತ ಉದಾಹರಣೆಯಾಗಿದೆ ಎಂದು ಕಿಡಿ ಕಾರಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂ ಮುಖಂಡ ಚಿನ್ಮೋಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಅವರ ಬಂಧನದ ಬೆನ್ನಲ್ಲೇ ಕೇಳಿಬಂದಿರುವ ದೇಶಾದ್ಯಂತ ಇಸ್ಕಾನ್‌ ದೇವಾಲಯಗಳನ್ನು ನಿಷೇಧಿಸಬೇಕೆಂಬ ಮನವಿಯನ್ನು ಢಾಕಾ ಹೈಕೋರ್ಟ್‌ ತಿರಸ್ಕರಿಸಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಿದ್ದ ಚಿನ್ಮೋಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ದೇಶದ್ರೋಹ ಆರೋಪದ ಮೇಲೆ ಢಾಕಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇದರ ನಡುವೆ ಬಾಂಗ್ಲಾದೇಶದಲ್ಲಿ ಇಸ್ಕಾನ್‌ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ ಢಾಕಾ ಹೈಕೋರ್ಟ್‌ ಇದನ್ನು ನಿರಾಕರಿಸಿದೆ. ಈಗಾಗಲೇ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ, ನಿಷೇಧಗೊಳಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.

ಬಾಂಗ್ಲಾದೇಶ ತೊರೆದು ಭಾರತಕ್ಕೆ ಬರಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಚಿನ್ಮೋಯ್‌ ದಾಸ್‌ ಅವರನ್ನು ಸರ್ಕಾರದ ಸೂಚನೆ ಮೇರೆಗೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡರು. ಬಳಿಕ ಪೊಲೀಸರು ಬಂಧಿಸಿದ್ದಾರೆ. ಬಳಿಕ ಅಜ್ಞಾತ ಸ್ಥಳದಲ್ಲಿ ಪೊಲೀಸರು ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಅವರಿಗೆ ಜಾಮೀನು ನಿರಾಕರಣೆಯಾಗಿದೆ.

ಈ ಸುದ್ದಿಯನ್ನೂ ಓದಿ: Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂಗಳ ಬೃಹತ್‌ ರ‍್ಯಾಲಿ; ವಿವಿಧ ಬೇಡಿಕೆಗಳಿಗೆ ಒತ್ತಾಯ