ವಿಶ್ವದಲ್ಲೇ ಅತ್ಯಂತ ದುಬಾರಿ ಅಕ್ಕಿ (Costly Rice) ಎಂದು ಜಪಾನ್‌ನಲ್ಲಿ (japan) ಬೆಳೆಯುವ “ಕಿನ್ಮೆಮೈ” ಅಕ್ಕಿಯನ್ನು (Kinmemai rice) ಪರಿಗಣಿಸಲಾಗಿದೆ. ಹೆಚ್ಚು ರುಚಿಯಾದ ಮತ್ತು ಅತ್ಯಧಿಕ ಪೋಷಕಾಂಶಗಳನ್ನು ಹೊಂದಿರುವ ಇದರ ಬೆಲೆ ಕೆ.ಜಿ.ಗೆ ಸುಮಾರು 15,000 ರೂ. ಆಗಿದೆ. ಸುಲಭವಾಗಿ ಜೀರ್ಣವಾಗುವ ಈ ಅಕ್ಕಿಯನ್ನು ಅಡುಗೆಗೂ ಮುನ್ನ ತೊಳೆಯಬೇಕಿಲ್ಲವಂತೆ!
ಕಿನ್ಮೆಮೈ ಅಕ್ಕಿಯ ಕಾಳುಗಳು ಬೆಣ್ಣೆ ರುಚಿಯನ್ನು ಹೊಂದಿದ್ದು, ಕಡಿಮೆ ನೀರಿನಲ್ಲಿ ಬೇಯಿಸಬೇಕಾಗುತ್ತದೆ. ಈ ಅಕ್ಕಿಯನ್ನು ಜಪಾನ್ ನ ಮಿನಾಮಿಯೊನುಮಾದ ಕೊಶಿಹಿಕಾರಿ ಪ್ರದೇಶದಲ್ಲಿ ಬೆಳೆಸಲಾಗುತ್ತದೆ. ವಿಶ್ವದ ಅತ್ಯಂತ ದುಬಾರಿ ಅಕ್ಕಿಯಾಗಿರುವ ಕಿನ್ಮೆಮೈ ಅದರ ಗುಣಮಟ್ಟ ಮತ್ತು ವಿಶಿಷ್ಟ ಉತ್ಪಾದನಾ ತಂತ್ರಕ್ಕೆ ಹೆಸರುವಾಸಿಯಾಗಿದೆ. ಇದರ ವೈಶಿಷ್ಟ್ಯವೆಂದರೆ ಅಡುಗೆ ಮಾಡುವ ಮೊದಲು ಅದನ್ನು ತೊಳೆಯುವ ಅಗತ್ಯವಿಲ್ಲ. ಇದು ಅನೇಕ ಪ್ರಯೋಜನವನ್ನು ನೀಡುತ್ತದೆ. ನೀರಿನ ಸಂರಕ್ಷಣೆಗೆ ಈ ಅಕ್ಕಿ ಪರಿಸರ ಸ್ನೇಹಿ ಆಯ್ಕೆಯಾಗಿದೆ.
ಕಿನ್ಮೆಮೈ ಅಕ್ಕಿ ಬಿಳಿ ಮತ್ತು ಕಂದು ಬಣ್ಣದಲ್ಲಿ ಲಭ್ಯವಿದೆ. ಅತ್ಯಂತ ಸುವಾಸನೆಯನ್ನು ಹೊಂದಿದೆ. ಕಿನ್ಮೆಮೈಯ ಬಿಳಿ ಅಕ್ಕಿಯು ಪೌಷ್ಟಿಕಾಂಶದಲ್ಲಿ ಸಾಮಾನ್ಯ ಬಿಳಿ ಅಕ್ಕಿಗಿಂತ ಹೆಚ್ಚು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಕಿನ್ಮೆಮೈಯ ಕಂದು ಅಕ್ಕಿಯು ಸಾಮಾನ್ಯ ಕಂದು ಅಕ್ಕಿಯ ಎಲ್ಲಾ ಪ್ರಯೋಜನಗಳನ್ನು ನೀಡುತ್ತದೆ. ಇದು ಕೂಡ ಹೆಚ್ಚು ಬೇಗ ಜೀರ್ಣವಾಗುತ್ತದೆ ಮತ್ತು ಬೇಯಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
ವಿಶೇಷತೆ ಏನು?
ಕಿನ್ಮೆಮೈಯ ಬಿಳಿ ಮತ್ತು ಕಂದು ಅಕ್ಕಿ ಎರಡರ ವಿಶೇಷತೆ ಎಂದರೆ ಇದರಲ್ಲಿ ಹೊಟ್ಟು ಇರುವುದಿಲ್ಲ. ಹೀಗಾಗಿ ಇದನ್ನು ತೊಳೆಯಬೇಕಿಲ್ಲ.
ಕಿನ್ಮೆಮೈ ಬಿಳಿ ಅಕ್ಕಿ ಸಾಮಾನ್ಯ ಅಕ್ಕಿಗಿಂತ 1.8 ಪಟ್ಟು ಹೆಚ್ಚು ಫೈಬರ್ ಮತ್ತು ಏಳು ಪಟ್ಟು ಹೆಚ್ಚು ವಿಟಮಿನ್ ಬಿ1 ಅನ್ನು ಹೊಂದಿದೆ. ಇದು ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ವಿವಿಧ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ. ಕ್ಯಾನ್ಸರ್ ಮತ್ತು ಬುದ್ಧಿಮಾಂದ್ಯತೆಯ ವಿರುದ್ಧ ಹೋರಾಡಲು ಸಹಾಯ ಮಾಡುವ ಲಿಪೊಪೊಲಿಸ್ಯಾಕರೈಡ್‌ಗಳನ್ನು ಹೊಂದಿದೆ.
ದುಬಾರಿ ಅಕ್ಕಿ
ಪ್ರತಿ ಕೆ.ಜಿ. ಗೆ ಇದರ ಮಾರುಕಟ್ಟೆ ಬೆಲೆ ಅಂದಾಜು 15,000 ರೂ. ಸಾಮಾನ್ಯವಾಗಿ ತಲಾ 140 ಗ್ರಾಂನ ಆರು ಪ್ಯಾಕೆಟ್‌ಗಳನ್ನು ಹೊಂದಿರುವ ಬಾಕ್ಸ್‌ಗಳಲ್ಲಿ ಇದನ್ನು ಪ್ಯಾಕ್ ಮಾಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಐಷಾರಾಮಿ ಪೆಟ್ಟಿಗೆಗಳಲ್ಲಿ ಹಾಕಿ ರಫ್ತು ಮಾಡಲಾಗುತ್ತದೆ.
Horseshoe Crab: ಈ ಏಡಿಯ 1 ಲೀಟರ್ ರಕ್ತದ ಬೆಲೆ 12.58 ಲಕ್ಷ ರೂ!
ಯಾರು ಉತ್ಪಾದಿಸುತ್ತಾರೆ?
1961ರಲ್ಲಿ ಸ್ಥಾಪಿಸಲಾದ ಜಪಾನ್‌ನ ವಕಯಾಮಾದಲ್ಲಿ ನೆಲೆಸಿರುವ ಟೊಯೊ ರೈಸ್ ಕಾರ್ಪೊರೇಶನ್‌ನಿಂದ ಕಿನ್ಮೆಮೈ ಅಕ್ಕಿಯನ್ನು ಉತ್ಪಾದಿಸಲಾಗುತ್ತದೆ. ಅಕ್ಕಿಯನ್ನು ತಯಾರಿಸಲು ಬಳಸುವ ಉಪಕರಣಗಳ ನಿರ್ಮಾಣದಲ್ಲಿ ಪರಿಣತಿ ಹೊಂದಿರುವ ಟೊಯೊ 1970 ರ ದಶಕದಲ್ಲಿ ಈ ಅಕ್ಕಿಯನ್ನು ಪರಿಚಯಿಸಿತು ಎನ್ನಲಾಗಿದೆ.