ಢಾಕಾ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಎದ್ದಿರುವ ಸಿಟ್ರಾಂಗ್ ಚಂಡಮಾರುತ ಬಾಂಗ್ಲಾದೇಶಕ್ಕೆ ಅಪ್ಪಳಿ ಸಿದ್ದು, ತನ್ನ ರೌದ್ರಾವತಾರ ತೋರಿಸುತ್ತಿದೆ. ಸಿಟ್ರಾಂಗ್ ಈಗಾಗಲೇ 9 ಮಂದಿಯ ಪ್ರಾಣ ಬಲಿಪಡೆದಿದೆ.
ಮೃತರಲ್ಲಿ ಒಂದೇ ಕುಟುಂಬದ ಮೂವರೂ ಸೇರಿದ್ದಾರೆ. ಮನೆಗಳ ಗೋಡೆ, ಕಾಂಪೌಡ್ಗಳು ಕುಸಿದು ಬೀಳುತ್ತಿವೆ. ಮರಗಳೂ ಉರುಳುತ್ತಿವೆ.
ಬಾಂಗ್ಲಾದೇಶದಲ್ಲಿ ಸಿಟ್ರಾಂಗ್ ಚಂಡಮಾರುತ ಪ್ರಭಾವ ತೀವ್ರತರನಾಗಿದೆ. ಢಾಕಾ, ಕ್ಯುಮಿಲ್ಲಾ ದೌಲತ್ಖಾನ್ನಲ್ಲಿರುವ ನಾಗಲ್ಕೋಟ್, ಭೋಲಾದಲ್ಲಿರುವ ಚಾರ್ಫೆಸನ್, ನರೈಲ್ನಲ್ಲಿರುವ ಲೋಹಗಾರ ಪ್ರದೇಶಗಳಲ್ಲಿ ಚಂಡಮಾರುತದ ಕಾರಣಕ್ಕೆ ಸಿಕ್ಕಾಪಟೆ ಮಳೆಯಾಗುತ್ತಿದೆ.
ಚಂಡಮಾರುತದ ಪರಿಣಾಮಕ್ಕೆ ಒಳಗಾದ ಪ್ರದೇಶಗಳಿಂದ ಸಾವಿರಾರು ಜನರು, ಪಶು ಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಕಾಕ್ಸ್ ಬಜಾರ್ ಕರಾವಳಿ ತೀರದಲ್ಲಿ ವಾಸವಾಗಿದ್ದ 28,155 ಜನರು ಮತ್ತು ಅವರಿಗೆ ಸೇರಿದ 2,736 ಜಾನುವಾರುಗಳನ್ನು ಅಲ್ಲಿಂದ ಸ್ಥಳಾಂತರ ಮಾಡಿ, ಆಶ್ರಯಕೇಂದ್ರದಲ್ಲಿ ಉಳಿಯಲು ವ್ಯವಸ್ಥೆ ಮಾಡಿಕೊಡಲಾಗಿದೆ.
104 ವೈದ್ಯಕೀಯ ತಂಡಗಳು ಸಜ್ಜಾಗಿದ್ದು, ಯಾವುದೇ ತುರ್ತು ಸಂದರ್ಭದಲ್ಲಿ ಅವರ ಸೇವೆ ತಕ್ಷಣವೇ ಲಭಿಸಲಿದೆ.
ಸಿಟ್ರಾಂಗ್ ಚಂಡಮಾರುತದ ಪಶ್ಚಿಮ ಬಂಗಾಳದ ಮೇಲೆ ಕೂಡ ಪ್ರಭಾವ ಬೀರುತ್ತಿದೆ. ಅಲ್ಲಿ ಗಾಳಿಯ ಅಬ್ಬರ ಈಗಾಗಲೇ ಭಯಂಕರವಾಗಿ ಶುರುವಾಗಿದ್ದು, ಕೂಚ್ ಬೆಹಾರ್ನಲ್ಲಿ ಕಾಳಿಪೂಜೆಗಾಗಿ ಹಾಕಿದ್ದ ಪೆಂಡಾಲ್ ಕುಸಿದುಬಿದ್ದಿದ್ದಾಗಿ ವರದಿ ಯಾಗಿದೆ. ಒಡಿಶಾ-ಪಶ್ಚಿಮ ಬಂಗಾಳದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.