Saturday, 23rd November 2024

Donald Trump: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಟ್ರಂಪ್‌ ಖಂಡನೆ; ಕಮಲಾ ಹ್ಯಾರಿಸ್‌ ವಿರುದ್ಧವೂ ಗಂಭೀರ ಆರೋಪ

Trump

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ(US Presidential Election)ಯಲ್ಲಿ ಬ್ಯುಸಿಯಾಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದೇ ವೇಳೆ ಬಾಂಗ್ಲಾದೇಶ(Banglaesh Unrest)ದಲ್ಲಿ ವಿಶೇಷವಾಗಿ ಶೇಖ್ ಹಸೀನಾ ಸರ್ಕಾರದ ಪತನದ ನಂತರ ಹಿಂದೂಗಳು ಎದುರಿಸುತ್ತಿರುವ ದೌರ್ಜನ್ಯವನ್ನೂ ಖಂಡಿಸಿದ್ದಾರೆ. ಅಮೆರಿಕದಲ್ಲಿರುವ ಹಿಂದೂಗಳ ರಕ್ಷಣೆ ಮತ್ತು ಸ್ವಾತಂತ್ರ್ಯ ಕಾಪಾಡಲು ಕಠಿಬದ್ಧರಾಗಿರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌, ಬಾಂಗ್ಲಾದೇಶದಲ್ಲಿ ಜನಸಮೂಹದಿಂದ ದಾಳಿ ಮತ್ತು ಲೂಟಿಗೆ ಒಳಗಾಗುತ್ತಿರುವ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ಅನಾಗರಿಕ ಹಿಂಸಾಚಾರವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಬಾಂಗ್ಲಾದೇಶ ಇಂದು ಸಂಪೂರ್ಣ ಅವ್ಯವಸ್ಥೆಯ ಸ್ಥಿತಿಯಲ್ಲಿ ಉಳಿದಿದೆ. ನನ್ನ ಆಡಳಿತದಲ್ಲಿ ಇಂತಹ ಘಟನೆ ನಡೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಇನ್ನು ಟ್ರಂಪ್ ಬಾಂಗ್ಲಾದೇಶದ ವಿಷಯದ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲು.

ಯುಎಸ್ ಅಧ್ಯಕ್ಷೀಯ ಅಭ್ಯರ್ಥಿ, ತಮ್ಮ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಯುಎಸ್ ಅಧ್ಯಕ್ಷ ಜೋ ಬೈಡೆನ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಇಬ್ಬರು ನಾಯಕರು ಪ್ರಪಂಚದಾದ್ಯಂತ ಮತ್ತು ಅಮೆರಿಕದಲ್ಲಿರುವ ಹಿಂದೂಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ದೂರಿದ್ದಾರೆ. “ಕಮಲಾ ಮತ್ತು ಜೋ ಪ್ರಪಂಚದಾದ್ಯಂತ ಮತ್ತು ಅಮೆರಿಕಾದಲ್ಲಿ ಹಿಂದೂಗಳನ್ನು ನಿರ್ಲಕ್ಷಿಸಿದ್ದಾರೆ. ಅವರು ಇಸ್ರೇಲ್‌ನಿಂದ ಉಕ್ರೇನ್‌ಗೆ ನಮ್ಮ ದಕ್ಷಿಣ ಗಡಿಗೆ ವಿಪತ್ತು ತಂದಿದ್ದಾರೆ, ಆದರೆ ನಾವು ಅಮೆರಿಕವನ್ನು ಮತ್ತೆ ಬಲಿಷ್ಠಗೊಳಿಸುತ್ತೇವೆ ಮತ್ತು ಶಕ್ತಿಯ ಮೂಲಕ ಶಾಂತಿಯನ್ನು ಮರಳಿ ತರುತ್ತೇವೆ ಎಂದು ಅವರು ಹೇಳಿದರು.

ಭಾರತೀಯರಿಗೆ ತಮ್ಮ ದೀಪಾವಳಿ ಶುಭಾಶಯಗಳನ್ನು ತಿಳಿಸಿದ ಟ್ರಂಪ್, ಭಾರತ ಮತ್ತು ಅವರ “ಉತ್ತಮ ಸ್ನೇಹಿತ” ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಮ್ಮ ದೇಶದ ಪಾಲುದಾರಿಕೆಯನ್ನು ಬಲಪಡಿಸುವುದಾಗಿ ಪ್ರತಿಜ್ಞೆ ಮಾಡಿದರು. “ನನ್ನ ಆಡಳಿತಾವಧಿಯಲ್ಲಿ, ನಾವು ಭಾರತ ಮತ್ತು ನನ್ನ ಉತ್ತಮ ಸ್ನೇಹಿತ, ಪ್ರಧಾನಿ ಮೋದಿಯವರೊಂದಿಗೆ ನಮ್ಮ ಉತ್ತಮ ಪಾಲುದಾರಿಕೆಯನ್ನು ಬಲಪಡಿಸುತ್ತೇವೆ. ಅಲ್ಲದೆ, ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ಬೆಳಕಿನ ಹಬ್ಬವು ದುಷ್ಟತನದ ವಿರುದ್ಧ ಒಳ್ಳೆಯದಕ್ಕೆ ವಿಜಯವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂಗಳ ಬೃಹತ್‌ ರ‍್ಯಾಲಿ; ವಿವಿಧ ಬೇಡಿಕೆಗಳಿಗೆ ಒತ್ತಾಯ