Friday, 22nd November 2024

Donald Trump: ಹಿಂದೂಗಳ ಬೆಂಬಲದಿಂದ ಗೆದ್ದ ಟ್ರಂಪ್!‌

Donald Trump

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷರಾಗಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತೊಮ್ಮೆ ಆಯ್ಕೆಯಾಗಿದ್ದಾರೆ (US presidential Elections 2024). ಜಗತ್ತಿನ ಕುತೂಹಲ ಕೆರಳಿಸಿದ್ದ ಜಿದ್ದಾಜಿದ್ದಿನ ಹೋರಾಟದಲ್ಲಿ ಅವರು ಭಾರತ ಮೂಲದ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris) ಅವರನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ ಗದ್ದುಗೆಗೆ ಏರಿದ್ದಾರೆ. ಈ ಸಲದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಹಿಂದೂ ಮತದಾರರು ನಿರ್ಣಾಯಕ ಪಾತ್ರ ವಹಿಸಿದ್ದು ವಿಶೇಷ. ಈ ಬಾರಿ ಒಂದೊಂದು ಮತಗಳೂ ಅತಿ ಅಮೂಲ್ಯವಾಗಿತ್ತು. ಇದನ್ನು ಅರಿತಿದ್ದ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಮತ್ತು ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಇಬ್ಬರೂ ಅಮೆರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಹಿಂದೂ ಮತದಾರರ ಮತಗಳನ್ನು ಪಡೆಯಲು ತೀವ್ರ ಪೈಪೋಟಿ ನಡೆಸಿದ್ದರು.

ಹಾಲಿ ಅಧ್ಯಕ್ಷ, ಡೆಮಾಕ್ರಟಿಕ್‌ ಪಾರ್ಟಿಯ ನಾಯಕ ಜೋ ಬೈಡೆನ್‌ ಅವರು ಶ್ವೇತಭವನದಲ್ಲಿ ಈ ಸಲ ವಿಜೃಂಭಣೆಯಿಂದ ದೀಪಾವಳಿಯನ್ನು ಆಚರಿಸಿದ್ದರು. ಇದು ಶ್ವೇತಭವನದಲ್ಲಿ ಇದುವರೆಗೆ ನಡೆದಿರುವ ದೀಪಾವಳಿ ಆಚರಣೆಗಳಲ್ಲೇ ದೊಡ್ಡದಾಗಿತ್ತು. ದೇಶದ ಉದ್ದಗಲಕ್ಕೂ ಇದ್ದ 600 ಪ್ರಮುಖ ಭಾರತೀಯ ಮೂಲದ ಅಮರಿಕನ್ನರನ್ನು ಬೈಡೆನ್‌ ದೀಪಾವಳಿಗೆ ಆಹ್ವಾನಿಸಿದ್ದರು. ಉಪಾಧ್ಯಕ್ಷ ಹುದ್ದೆಗೆ ಡೆಮಾಕ್ರಟಿಕ್‌ ಪಕ್ಷದಿಂದ ಸ್ಪರ್ಧಿಸಿದ್ದ ಟಿಮ್‌ ವಾಲ್ಜ್‌ ಅವರು ಹಿಂದೂ ದೇವಾಲಯಕ್ಕೆ ತೆರಳಿ ದೀಪಾವಳಿ ಆಚರಿಸಿದ್ದರು.

ಡೊನಾಲ್ಡ್‌ ಟ್ರಂಪ್‌ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದರು. ಚುನಾವಣಾ ಪ್ರಚಾರದ ಸಂದರ್ಭ ಭಾರತೀಯ ಅಮೆರಿಕರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿದ್ದರು. ಬಾಂಗ್ಲಾದೇಶದ ಹಿಂದೂಗಳ ಸಂರಕ್ಷಣೆಯ ಅಗತ್ಯವನ್ನು ಒತ್ತಿ ಹೇಳಿದ್ದರು. ಕಮಲಾ ಹ್ಯಾರಿಸ್‌ ಮತ್ತು ಬೈಡೆನ್‌ ಹಿಂದೂಗಳ ರಕ್ಷಣೆಯನ್ನು ಕಡೆಗಣಿಸುತ್ತಿದ್ದಾರೆ ಎಂದೂ ಅರೋಪಿಸಿದ್ದರು. ಅಮೆರಿಕ ಮತ್ತು ಜಾಗತಿಕ ಮಟ್ಟದಲ್ಲಿ ಹಿಂದೂಗಳ ಹಕ್ಕುಗಳ ಸಂರಕ್ಷಣೆಯನ್ನು ಪ್ರತಿಪಾದಿಸಿದ್ದರು. ಟ್ರಂಪ್‌ ಅವರ ಈ ಹೇಳಿಕೆಯನ್ನು ಅಮೆರಿಕದಲ್ಲಿರುವ ಹಿಂದೂಗಳು ಸ್ವಾಗತಿಸಿದ್ದರು. ಪೆನ್‌ಸೆಲ್ವೇನಿಯಾ, ಜಾರ್ಜಿಯಾ, ಮಿಚಿಗನ್‌ ಮತ್ತು ನಾರ್ತ್‌ ಕ್ಯಾರೊಲಿನಾದಲ್ಲಿ ಹಿಂದೂ ಮತಗಳು ನಿರ್ಣಾಯಕವಾಗಿದ್ದು, ಇಲ್ಲೆಲ್ಲ ಟ್ರಂಪ್‌ ಅವರಿಗೆ ಉತ್ತಮ ಬೆಂಬಲ ಲಭಿಸಿದೆ.

ಅಮೆರಿಕದಲ್ಲಿರುವ ಭಾರತೀಯ ಮೂಲದ ಅಮೆರಿಕನ್ನರ ಸಂಖ್ಯೆ ಸುಮಾರು 52 ಲಕ್ಷ. ಅಮೆರಿಕದಲ್ಲಿನ ವಲಸೆಗಾರರ ಸಮುದಾಯದಲ್ಲಿ ಎರಡನೇ ದೊಡ್ಡ ಸಮುದಾಯ ಇದಾಗಿದೆ. ಸಾಮಾನ್ಯವಾಗಿ ಭಾರತೀಯ ಮೂಲದ ಅಮೆರಿಕನ್ನರು ಡೆಮಾಕ್ರಟಿಕ್‌ ಪಾರ್ಟಿಯನ್ನು ಬೆಂಬಲಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಟ್ರೆಂಡ್‌ ಬದಲಾಗುತ್ತಿದೆ. ರಿಪಬ್ಲಿಕನ್‌ ಪಕ್ಷಕ್ಕೂ ಹಿಂದೂಗಳಿಂದ ಹೆಚ್ಚಿನ ಬೆಂಬಲ ಸಿಗುತ್ತಿದೆ. ಅದು ಈ ಬಾರಿ ಮತ್ತೊಮ್ಮೆ ಸಾಬೀತಾಗಿದೆ.

ಅನಿವಾಸಿ ಭಾರತೀಯರು ಈ ಹಿಂದೆಲ್ಲ ಡೆಮಾಕ್ರಟಿಕ್‌ ಪಕ್ಷಕ್ಕೆ ಬೆಂಬಲಿಸುತ್ತಿದ್ದರು. ಅದು ಲಿಬರಲ್‌ ಪಾರ್ಟಿ ಎಂಬುದಾಗಿತ್ತು. ಆಗ ರಿಪಬ್ಲಿಕನ್‌ ಪಾರ್ಟಿ ಎಂದರೆ ಬಿಳಿಯರ ಪಾರ್ಟಿ ಎಂಬ ಮಾತಿತ್ತು. ಉಳಿದವರೆಲ್ಲ ಡೆಮಾಕ್ರಟಿಕ್‌ ಪಾರ್ಟಿಯಲ್ಲಿ ಇರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ರಿಪಬ್ಲಿಕನ್‌ ಪಾರ್ಟಿಯಲ್ಲೂ ಭಾರತೀಯ ಮೂಲದವರು ಇದ್ದಾರೆ. ಸಂಸದರೂ ಇದ್ದಾರೆ.

ಈ ಸುದ್ದಿಯನ್ನೂ ಓದಿ: Donald Trump: ಟ್ರಂಪ್ ಗೆಲುವಿನಿಂದ ಭಾರತಕ್ಕೇನು ಲಾಭ? ವಿಡಿಯೊ ನೋಡಿ