Wednesday, 6th November 2024

Donald Trump: ಟ್ರಂಪ್ ಗೆಲುವಿನಿಂದ ಭಾರತಕ್ಕೇನು ಲಾಭ? ವಿಡಿಯೊ ನೋಡಿ

Donald Trump

ಬೆಂಗಳೂರು: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಗೆಲುವಿನತ್ತ ಸಾಗಿದ್ದಾರೆ (US presidential Elections 2024). ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಆಯ್ಕೆಯಾಗುವುದರಿಂದ ಭಾರತಕ್ಕೆ ಹಲವು ವಿಧದಲ್ಲಿ ಲಾಭವಾಗಲಿದೆ ಎನ್ನುತ್ತಾರೆ ಹಿರಿಯ ಲೇಖಕ ಹಾಗೂ ಅಮೆರಿಕದ ಮೂರು ಅಧ್ಯಕ್ಷೀಯ ಚುನಾವಣೆಗಳನ್ನು (US Election results) ಹತ್ತಿರದಿಂದ ಕಂಡಿರುವ ಎಂ.ಆರ್‌. ದತ್ತಾತ್ರಿ (MR Dattatri). ʼವಿಶ್ವವಾಣಿʼ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ಅಮೆರಿಕದ ಚುನಾವಣೆ ಮತ್ತು ಅದರ ಪರಿಣಾಮದ ಬಗ್ಗೆ ಸಮಗ್ರ ವಿಶ್ಲೇಷಣೆಯನ್ನು ಮಾಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

ಪಾಕ್‌, ಬಾಂಗ್ಲಾಗೆ ಟ್ರಂಪ್‌ ತಾಕೀತು

ಡೊನಾಲ್ಡ್‌ ಟ್ರಂಪ್‌ ಅವರು ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದಾಗ ಪಾಕಿಸ್ತಾನಕ್ಕೆ, ಭಯೋತ್ಪಾದನೆಯನ್ನು ಹತ್ತಿಕ್ಕಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು, ಕೇವಲ ಮಾತಿನಲ್ಲಿ ಹೇಳಿದರೆ ಸಾಲದು ಎಂದು ಎಚ್ಚರಿಸಿದ್ದರು. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಟ್ರಂಪ್‌ ಖಂಡಿಸಿದ್ದರು. ಹಿಂದೂಗಳ ರಕ್ಷಣೆಯೂ ಅಗತ್ಯ ಎಂದು ಪ್ರತಿಪಾದಿಸಿದ್ದರು. ಟ್ರಂಪ್‌ ಅವರೂ ರಾಷ್ಟ್ರೀಯವಾದಿ, ಮೋದಿಯವರೂ ರಾಷ್ಟ್ರೀಯವಾದಿ. ಇಲ್ಲಿ ಇಂಡಿಯಾ ಫಸ್ಟ್‌, ಅಲ್ಲಿ ಅಮೆರಿಕ ಫಸ್ಟ್ ಹೀಗೆ ರಾಷ್ಟ್ರೀಯತೆ, ಭಯೋತ್ಪಾದನೆ ದಮನೆ ಇತ್ಯಾದಿ ವಿಚಾರಗಳಲ್ಲಿ ಸಾಮ್ಯತೆ ಇದೆ.

ಈ ಹಿಂದೆ ರಿಸೆಶನ್‌ ಬಂದಾಗಲೂ ಭಾರತಕ್ಕೆ ಅಷ್ಟಾಗಿ ಕಾಡಿರಲಿಲ್ಲ. ಹೀಗಾಗಿ ಅಮೆರಿಕದಲ್ಲಿ ಯಾರು ಅಧ್ಯಕ್ಷರಾದರೂ ತೀರಾ ದೊಡ್ಡ ಪರಿಣಾಮ ಬೀರುವುದಿಲ್ಲ. ಹೀಗಿದ್ದರೂ ಟ್ರಂಪ್‌ ಗೆದ್ದರೆ ಕೆಲವನ್ನು ನಿರೀಕ್ಷಿಸಬಹುದು. ಕೆಲವು ವಿಚಾರಗಳು ನೆಗೆಟಿವ್‌ ಆಗಿ ಕಾಡಬಹುದು. ಕೆಲವು ವಿಶೇಷ ಅವಕಾಶಗಳೂ ಸಿಗಬಹುದು. ಉದಾಹರಣೆಗೆ ಟ್ರಂಪ್‌ ಅವರು ವಿದೇಶದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳಿಗೆ 10% ಆಮದು ಸುಂಕ ವಿಧಿಸಬಹುದು. ಅಲ್ಲಿಗೆ ಭಾರತದಿಂದ ಅಮೆರಿಕಕ್ಕೆ ಹೋಗುವ ಸರಕುಗಳಿಗೆ 10% ಸುಂಕ ತಗಲುತ್ತದೆ. ಇದು ಸಮಸ್ಯಾತ್ಮಕವಾಗಿ ಭಾರತಕ್ಕೆ ಕಾಣಬಹುದು. ಆದರೆ ಇದೇ ವೇಳೆ ಚೀನಾ ವಿರುದ್ಧ 60% ಆಮದು ಸುಂಕವನ್ನು ಹಾಕಬಹುದು. ಆಗ ಭಾರತಕ್ಕೆ ವಿಶೇಷ ಅವಕಾಶ ಸಿಗಬಹುದು. ಸಾಮಾನ್ಯವಾಗಿ ಚೀನಾ ಅಗ್ಗದ ದರದಲ್ಲಿ ಜಗತ್ತಿಗೇ ವಸ್ತುಗಳನ್ನು ಒದಗಿಸುತ್ತದೆ. ಟ್ರಂಪ್‌ ಈಗ ಚೀನಾಕ್ಕೆ ಹೆಚ್ಚು ಸುಂಕ ವಿಧಿಸಿದ್ರೆ, ಭಾರತಕ್ಕೆ ಹೆಚ್ಚಿನ ವ್ಯಾಪಾರಾವಕಾಶ ಸಿಗಬಹುದು.

ಅಮೆರಿಕದಲ್ಲಿ ಸಾಮಾನ್ಯವಾಗಿ ಡೆಮಾಕ್ರಟಿಕ್‌ ಪಾರ್ಟಿಯನ್ನು ಲಿಬರಲ್‌ ಪಾರ್ಟಿ ಎನ್ನುತ್ತಾರೆ. ರಿಪಬ್ಲಿಕನ್‌ ಪಾರ್ಟಿ ಕನ್ಸರ್ವೇಟಿವ್‌ ಅಥವಾ ಸಂಪ್ರದಾಯವಾದಿ ಎನ್ನುತ್ತಾರೆ. ಸಾಮಾನ್ಯ ವಲಸೆಯನ್ನು ರಿಪಬ್ಲಿಕನ್‌ ಪಾರ್ಟಿ ಸಹಿಸುವುದಿಲ್ಲ. ಹೀಗಾಗಿ ವಲಸೆ ನೀತಿಯನ್ನು ಟ್ರಂಪ್‌ ಬಿಗಿಗೊಳಿಸಬಹುದು. ಕಳೆದ ಸಲ ಕೂಡ ಅವರು ಎಚ್‌ 1 ಬಿ ವೀಸಾ ಬಗ್ಗೆ ನಿರ್ಬಂಧ ಹಾಕಿದ್ದರಿ. ಹೀಗಿದ್ದರೂ, ಭಾರತದಿಂದ ಕಾನೂನುಬದ್ಧವಾಗಿ ವಲಸೆಗಿಂತಲೂ, ಮೆಕ್ಸಿಕೊ ಮತ್ತಿತರ ದೇಶಗಳಿಂದ ಅಕ್ರಮ ವಲಸೆಯನ್ನು ನಿರ್ಬಂಧಿಸುವುದು ಹೆಚ್ಚು. ಹೀಗಿದ್ದರೂ, ಭಾರತೀಯ ಕಂಪನಿಗಳು ಅಲ್ಲಿಯೇ ಘಟಕಗಳನ್ನು ತೆರೆದು ಅಲ್ಲಿನವರಿಗೂ ಉದ್ಯೋಗಾವಕಾಶಗಳನ್ನು ನೀಡಿವೆ. ಹೀಗಾಗಿ ವಲಸೆ ನೀತಿ ಸಮಸ್ಯಾತ್ಮಕವಾಗದು.

ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾದ ಬಳಿಕ ಇಲ್ಲಿಯವರೆಗೆ ಬರಾಕ್‌ ಒಬಾಮಾ, ಟ್ರಂಪ್‌, ಬೈಡೆನ್‌ ಹೀಗೆ ಎರಡು ಭಿನ್ನ ಪಕ್ಷದ ಅಧ್ಯಕ್ಷರ ಜತೆಗೆ ವ್ಯವಹರಿಸಿದ್ದಾರೆ. ಹೀಗಾಗಿ ಯಾರು ಅಧ್ಯಕ್ಷರಾದರೂ ಮೋದಿಯವರು ಉತ್ತಮ ರೀತಿಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮುಂದುವರಿಸಬಲ್ಲರು.

ಅನಿವಾಸಿ ಭಾರತೀಯರು ಈ ಹಿಂದೆಲ್ಲ ಡೆಮಾಕ್ರಟಿಕ್‌ ಪಕ್ಷಕ್ಕೆ ಬೆಂಬಲಿಸುತ್ತಿದ್ದರು. ಅದು ಲಿಬರಲ್‌ ಪಾರ್ಟಿ ಎಂಬುದಾಗಿತ್ತು. ಆಗ ರಿಪಬ್ಲಿಕನ್‌ ಪಾರ್ಟಿ ಎಂದರೆ ಬಿಳಿಯರ ಪಾರ್ಟಿ ಎಂಬ ಮಾತಿತ್ತು. ಉಳಿದವರೆಲ್ಲ ಡೆಮಾಕ್ರಟಿಕ್‌ ಪಾರ್ಟಿಯಲ್ಲಿ ಇರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ರಿಪಬ್ಲಿಕನ್‌ ಪಾರ್ಟಿಯಲ್ಲೂ ಭಾರತೀಯ ಮೂಲದವರು ಇದ್ದಾರೆ. ಸಂಸದರೂ ಇದ್ದಾರೆ. ಉದಾಹರಣೆಗೆ ರಿಪಬ್ಲಿಕನ್‌ ಪಾರ್ಟಿಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯ ಕಣದಲ್ಲಿ ಆರಂಭಿಕ ಸುತ್ತಿನಲ್ಲಿ ಭಾರತೀಯ ಮೂಲದ ವಿವೇಕ್‌ ರಾಮಸ್ವಾಮಿ, ನಿಕ್ಕಿ ಹ್ಯಾಲಿ ಇದ್ದರು.

ಕಚ್ಚಾ ತೈಲ ದರ ಇಳಿಕೆ

ರಿಪಬ್ಲಿಕನ್‌ ಪಕ್ಷವು ಕಚ್ಚಾ ತೈಲ ದರವನ್ನು ನಿಯಂತ್ರಣದಲ್ಲಿ ಇಡಲು ಬಯಸುತ್ತದೆ. ಇದಕ್ಕಾಗಿ ಅಮೆರಿಕದಲ್ಲಿ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ತೈಲ ದರ ನಿಯಂತ್ರಣಕ್ಕೆ ಬರಬಹುದು.

ಈ ಸುದ್ದಿಯನ್ನೂ ಓದಿ: US presidential elections 2024: ಭಾರತೀಯ ನಟಿ ಅಮೆರಿಕದಲ್ಲಿ ವೋಟಿಂಗ್‌; ನೆಟ್ಟಿಗರು ಫುಲ್‌ ಸರ್ಪ್ರೈಸ್‌!