Thursday, 12th December 2024

ಬಲೂಚಿಸ್ತಾನದಲ್ಲಿ 5.9 ತೀವ್ರತೆಯ ಪ್ರಬಲ ಭೂಕಂಪ, 22 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಗುರುವಾರ 5.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ಮನೆಗಳು ಕುಸಿದಿದ್ದು ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ.

ದುರಂತದಲ್ಲಿ 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮರಣ ಪ್ರಮಾಣ ಹೆಚ್ಚಾಗ ಬಹುದು ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ಕೇಂದ್ರ ಬಿಂದು ಹರ್ನೈ ಬಳಿ ಸುಮಾರು 15 ಕಿ.ಮೀ. ಆಳದಲ್ಲಿತ್ತು. ಕ್ವೆಟ್ಟಾ, ಸಿಬಿ, ಹರ್ನೈ, ಪಿಶಿನ್‌, ಕಿಲಾ ಸೈಫುಲ್ಲಾ, ಚಮನ್‌, ಜಿಯಾರತ್‌ ಮತ್ತು ಬಲೂಚಿಸ್ತಾನ ಪ್ರದೇಶಗಳಲ್ಲಿ ಭೂಕಂಪದ ಪ್ರಭಾವ ಇತ್ತು. ಕಡಿಮೆ ಆಳದ ಪ್ರದೇಶದಲ್ಲಿ 5.9 ತೀವ್ರತೆಯ ಭೂಕಂಪ ಅಪ್ಪಳಿಸಿದೆ.

ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಿದ್ದಾರೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಪಿಡಿಎಂಎ) ಹೇಳಿದೆ. ಭಯಭೀತರಾದ ನಾಗರಿಕರು ಪವಿತ್ರ ಕುರಾನ್‌ ಪದ್ಯಗಳನ್ನು ಪಠಿಸುತ್ತಾ ಮನೆಗಳಿಂದ ಹೊರಬಂದರು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಸೈನಿಕರು ಹರ್ನೈನ ಭೂಕಂಪ ಪೀಡಿತ ಪ್ರದೇಶಗಳಿಗೆ ತಲುಪಿದ್ದಾರೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.