Sunday, 8th September 2024

ಫೈಜಾಬಾದ್‌ನಲ್ಲಿ ಭೂಕಂಪ: 4.3 ತೀವ್ರತೆ

ಕಾಬೂಲ್ : ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ ಭೂಕಂಪ ಸಂಭವಿಸಿದ್ದು, 4.3 ತೀವ್ರತೆ ದಾಖಲಾಗಿದೆ ಎಂದು ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ವರದಿ ಮಾಡಿದೆ.

ಕಳೆದ ಬುಧವಾರ ಕೂಡ ಪೂರ್ವ ಅಫ್ಘಾನಿಸ್ತಾನದ ಕೆಲವು ಭಾಗಗಳಲ್ಲಿ ಭೂಕಂಪ ಸಂಭವಿಸಿತ್ತು. ಇದರಿಂದಾಗಿ ಸಾವಿನ ಸಂಖ್ಯೆ 1,000 ದಾಟಿದೆ. ಇನ್ನೂ, 1,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಖೋಸ್ಟ್ ಪ್ರಾಂತ್ಯದ ಸ್ಪೆರಾ ಜಿಲ್ಲೆ ಮತ್ತು ಪಕ್ಟಿಕಾ ಪ್ರಾಂತ್ಯದ ಬರ್ಮಲಾ, ಜಿರುಕ್, ನಾಕಾ ಮತ್ತು ಗಯಾನ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ. ಘಟನೆಯ ಬೆನ್ನಲ್ಲೇ ಇಂದು ಕೂಡ ಬೆಳಗ್ಗೆ 7. 18 ರ ಸುಮಾರಿಗೆ ಭೂಕಂಪ ಸಂಭವಿಸಿದೆ.

ಅಫ್ಘಾನಿಸ್ತಾನದ ಫೈಜಾಬಾದ್‌ನಿಂದ ನೈಋತ್ಯಕ್ಕೆ 76 ಕಿಲೋಮೀಟರ್ ದೂರದಲ್ಲಿ ಮತ್ತು 163 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

error: Content is protected !!