Thursday, 28th November 2024

Egyptian billionaire: ಒಂದಲ್ಲ..ಎರಡಲ್ಲ 400ಕ್ಕೂ ಹೆಚ್ಚು ಮಹಿಳೆಯರ ಮೇಲೆ ರೇಪ್‌; ಈಜಿಪ್ಟಿನ ಕೋಟ್ಯಧಿಪತಿಯ ಹೀನ ಕೃತ್ಯ ಬಯಲು

ಕೈರೋ : ಕಳೆದ ವರ್ಷದ ಆಗಸ್ಟ್‌ನಲ್ಲಿ ತಮ್ಮ 94 ನೇ ವಯಸ್ಸಿನಲ್ಲಿ ನಿಧನರಾದ ಈಜಿಪ್ಟ್ ನ ಬಿಲಿಯನೇರ್ (Billionaire) ಮೊಹಮದ್ ಅಲ್-ಫಾಯೆದ್ (Mohamed Al-Fayed) ವಿರುದ್ಧ ಹಲವಾರು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಿದೆ.(Egyptian billionaire) . ಲಂಡನ್‌ನ ಮೆಟ್ರೋಪಾಲಿಟನ್ (Metropolitan) ಪೊಲೀಸರು ಬುಧವಾರ ಹ್ಯಾರೋಡ್ಸ್ (Harrods) ನ ಮಾಲೀಕ ದಿವಂಗತ ಮೊಹಮ್ಮದ್ ಅಲ್-ಫಾಯೆದ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತು ತನಿಖೆಯನ್ನು ಆರಂಭಿಸಿರುವುದಾಗಿ ತಿಳಿಸಿದ್ದಾರೆ. ತನಿಖೆಯಿಂದಾಗಿ ಇದುವರೆಗೆ ಅಲ್-ಫಾಯೆದ್‌ನಿಂದ ದೌರ್ಜನ್ಯಕ್ಕೊಳಗಾದ 90 ಮಹಿಳೆಯರನ್ನು ಗುರುತಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ತನಿಖೆಯು ಸೆಪ್ಟೆಂಬರ್‌ ತಿಂಗಳಿನಲ್ಲಿ BBC ಯಲ್ಲಿ ಪ್ರಸಾರವಾದ ಸಾಕ್ಷ್ಯಚಿತ್ರವನ್ನು ಆಧರಿಸಿದೆ ಎಂದು ತಿಳಿದು ಬಂದಿದೆ. ತಮ್ಮ 94 ನೇ ವಯಸ್ಸಿನಲ್ಲಿ ಮೃತರಾದ ಮೊಹಮದ್ ಅಲ್-ಫಾಯೆದ್ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಹಕ್ಕುಗಳನ್ನು ಅದು ಬಹಿರಂಗಪಡಿಸಿದೆ. BBC ಯಲ್ಲಿ ಪ್ರಸಾರವಾದ ಸಾಕ್ಷ್ಯ ಚಿತ್ರವನ್ನು ನೋಡಿದಾಗಿನಿಂದ ಇದುವರೆಗೆ 400ಕ್ಕೂ ಹೆಚ್ಚು ಮಹಿಳೆಯರು ಅಲ್-ಫಾಯೆದ್‌ ವಿರುದ್ಧ ಲೈಂಗಿಕ ಆರೋಪಗಳೊಂದಿಗೆ ಮುಂದೆ ಬಂದಿದ್ದಾರೆ. ಈ ಬಗ್ಗೆ ಹಲವಾರು ವರ್ಷಗಳಿಂದ ದೂರುಗಳಿದ್ದರೂ ಪೊಲೀಸರು ಅದನ್ನು ಹೇಗೆ ನಿರ್ವಹಿಸಿದರು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ ಎಂದು ವರದಿಯಾಗಿದೆ.

“ಅಲ್‌-ಫಾಯೆದ್ ನಿಂದಾಗಿ ಬಲಿಪಶುವಾದವರಿಗೆ ನ್ಯಾಯ ಕೊಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಒಂದಷ್ಟು ಸಾಕ್ಷಿಗಳನ್ನು ಒದಗಿಸಿದ್ದಾರೆ. ಅವರು ನೀಡಿರುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಸೂಕ್ತ ತನಿಖೆಯನ್ನು ಕೈಗೊಳ್ಳುತ್ತೇವೆ. ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಅಪರಾಧಿಗಳನ್ನೂ ಪತ್ತೆ ಹಚ್ಚುತ್ತೇವೆ” ಎಂದು ಮೆಟ್ರೋಪಾಲಿಟನ್ ಪೊಲೀಸರು ಹೇಳಿದ್ದಾರೆ.

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಅಲ್-ಫಾಯೆದ್‌ಗೆ ಸಹಾಯ ಮಾಡಿರುವ ಐವರು ಶಂಕಿತ ವ್ಯಕ್ತಿಗಳ ಮೇಲೆ ಈಗಾಗಲೇ ಕೇಸು ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ ಎನ್ನಲಾಗಿದೆ. ಹಿಂದಿನ ತನಿಖೆಗಳು ಹಳ್ಳ ಹಿಡಿದಿವೆಯೇ ಮತ್ತು ಆಗಿನ ಮಾಜಿ ಪೊಲೀಸ್ ಅಧಿಕಾರಿಗಳು ಭ್ರಷ್ಟರಾಗಿ ಅಲ್-ಫಾಯೆದ್‌ ಗೆ ಸಹಾಯ ಮಾಡಿರುವ ಅನುಮಾನವಿದ್ದು, ಪುರಾವೆಗಳಿಗಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಅಲ್-ಫಾಯೆದ್‌ ನಿಂದ ದೌರ್ಜನ್ಯಕ್ಕೊಳಗಾದ ಯುವತಿ ಮತ್ತು ಹ್ಯಾರೋಡ್ಸ್ ನ ಸಿಬ್ಬಂದಿಯೊಬ್ಬರ ದೂರನ್ನು ಪೊಲೀಸರು ಈ ಹಿಂದೆ ಕಡೆಗಣಿಸಿದ್ದು, ಪ್ರಕರಣದಲ್ಲಿ ಫಾಯೆದ್‌ ಗೆ ಭ್ರಷ್ಟ ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂದು ಕಳೆದ ತಿಂಗಳು ಪತ್ರಿಕೆಯೊಂದು ವರದಿ ಮಾಡಿತ್ತು.

ತನಿಖೆಯಿಂದಾಗಿ ಈಗ 111 ಆಪಾದಿತ ನಿಂದನೆ ಪ್ರಕರಣಗಳು ದಾಖಲಾಗಿವೆ. 2005 ರಿಂದ ಫಾಯೆದ್‌ ಸಾಯುವವರೆಗೆ ನಡೆದಿರುವ ಅಪರಾಧಗಳೂ ಇದರಲ್ಲಿ ಸೇರಿದೆ. BBC ಯಲ್ಲಿ ಸಾಕ್ಷ್ಯಚಿತ್ರ ಪ್ರಸಾರವಾದ ನಂತರ ದೌರ್ಜನ್ಯಕ್ಕೆ ಒಳಗಾದ 90 ಮಹಿಳೆಯರು ಮುಂದೆ ಬಂದಿದ್ದಾರೆ. ಪೊಲೀಸರು ಈ ಹಿಂದೆ ಬಲಿಪಶುವಾದ 60 ಮಹಿಳೆಯರನ್ನು ಗುರುತಿಸಿದ್ದರು.

“ಕಾನೂನು ಕ್ರಮವನ್ನು ಎದುರಿಸಲು ಮೊಹಮದ್ ಅಲ್-ಫಾಯೆದ್ ಈಗ ಜೀವಂತವಾಗಿ ಉಳಿದಿಲ್ಲ. ಆದರೆ ಈ ತನಿಖೆ ದೌರ್ಜನ್ಯಕ್ಕೊಳಗಾದವರ ಧ್ವನಿಯಾಗಲಿದೆ. ನಾವು ಈಗ ಅಪರಾಧದಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗಳನ್ನು ಪತ್ತೆ ಹಚ್ಚುತ್ತೇವೆ. ನ್ಯಾಯ ಕೊಡಿಸುವಲ್ಲಿ ಬದ್ಧತೆ ತೋರುತ್ತೇವೆ” ಎಂದು ಮೆಟ್‌ನ ಸ್ಪೆಷಲಿಸ್ಟ್ ಕ್ರೈಮ್ ಕಮಾಂಡ್‌ನ ಕಮಾಂಡರ್ ಸ್ಟೀಫನ್ ಕ್ಲೇಮನ್ ಹೇಳಿದ್ದಾರೆ.

“ಈ ಹಿಂದಿನ ಘಟನೆಗಳು ಸಾರ್ವಜನಿಕರ ನಂಬಿಕೆ ಮತ್ತು ವಿಶ್ವಾಸದ ಮೇಲೆ ಪ್ರಭಾವ ಬೀರಿರಬಹುದು. ಈ ಆರೋಪಗಳನ್ನು ಸಮಗ್ರವಾಗಿ ಪರಿಶೀಲಿಸಿ ಪರಿಹಾರ ನೀಡುವ ಮೂಲಕ ಅವರಲ್ಲಿ ಮತ್ತೆ ನಂಬಿಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡೆಲಾಗುತ್ತದೆ” ಎಂದಿದ್ದಾರೆ.

1977 ರಿಂದ 2014 ರವರೆಗೂ ಅಲ್‌-ಫಾಯೆದ್‌ ವಿರುದ್ಧ ಪ್ರಕರಣ ದಾಖಲಾಗಿವೆ. ಪೊಲೀಸರು ದೂರುದಾರರ ಹೇಳಿಕೆಗಳನ್ನು ಪಡೆದು, 50 ಸಾವಿರ ಪುಟಗಳ ಚಾರ್ಜ್‌ಶೀಟ್‌ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಅಲ್-ಫಾಯೆದ್‌ ಅವರ ದಿವಂಗತ ಸಹೋದರ ಸಲಾಹ್ ಫಯೆದ್ ವಿರುದ್ಧ ದೌರ್ಜನ್ಯದ ಆರೋಪಗಳು ಕೇಳಿ ಬಂದಿವೆ. ಹ್ಯಾರೋಡ್ಸ್ ನ ಸಹ-ಮಾಲೀಕತ್ವವನ್ನು ಹೊಂದಿದ್ದ ಅವರು 2010 ರಲ್ಲಿ ನಿಧನರಾಗಿದ್ದರು.

ಈ ಸುದ್ದಿಯನ್ನೂ ಓದಿ : Pavagada News: ಅನೈತಿಕ ಚಟುವಟಿಕೆ ತಾಣವಾದ 13 ಕೋಟಿ ವೆಚ್ಚದ ಸರ್ಕಾರಿ ಶಾಲಾ ಕಟ್ಟಡ; ಪಾಳು ಬಿದ್ದು ಶಿಕ್ಷಣ ಕೇಂದ್ರವಾಗುವ ಕನಸು ಭಗ್ನ!