ಕಳೆದ ಕೆಲವು ವರ್ಷಗಳಿಂದ ಸಂಘರ್ಷದಲ್ಲಿ ತೊಡಗಿರುವ ಇಸ್ರೇಲ್ ಮತ್ತು ಲೆಬನಾನ್ ನ ( Israel and Lebanon) ಉಗ್ರಗಾಮಿ ಸಂಘಟನೆ (militant group Hezbollah) ಹೆಜ್ಬುಲ್ಲಾ (Explained on Hezbollah) ನಡುವೆ ಇದೀಗ ಪೂರ್ಣಪ್ರಮಾಣದ ಸಮರ ಶುರುವಾಗಿದೆ.
ಒಂದು ವೇಳೆ ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವೆ ಯುದ್ಧ ನಡೆದರೆ ಹಮಾಸ್ ನ (hamas) ಗಾಜಾ ಪಟ್ಟಿಯಲ್ಲಿ (gaza strip) ಇಸ್ರೇಲ್ ಅನ್ನು ಎದುರಿಸಿದ್ದಕ್ಕಿಂತ ಹೆಚ್ಚು ಅಸಾಧಾರಣ ಶತ್ರು ಪಡೆಯನ್ನು ಇರಾನ್ ಬೆಂಬಲಿತ ಅರೆಸೈನಿಕ ಪಡೆ ಹೆಜ್ಬುಲ್ಲಾ ಎದುರಿಸಲಿದೆ. ಲೆಬನಾನ್‌ನಲ್ಲಿ ಅಪಾರ ಶಕ್ತಿ ಹೊಂದಿರುವ ಹೆಜ್ಬುಲ್ಲಾ ರಾಜಕೀಯ ಮತ್ತು ಸಾಮಾಜಿಕ ಬೆಂಬಲವನ್ನು ಹೊಂದಿದೆ.
ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಇತ್ತೀಚೆಗೆ ತನ್ನ ಸಂಘಟನೆ ಹೊಸ ಶಸ್ತ್ರಾಸ್ತ್ರಗಳು ಮತ್ತು ಸಾಮರ್ಥ್ಯಗಳನ್ನು ಹೊಂದಿದೆ ಎಂದು ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದ. ಇದರೊಂದಿಗೆ ಉತ್ತರ ಇಸ್ರೇಲ್‌ನೊಳಗೆ ತೆಗೆದ ಡ್ರೋನ್ ವಿಡಿಯೋವನ್ನು ಪ್ರಕಟಿಸಲಾಗಿತ್ತು. ಇದರಲ್ಲಿ ಹೈಫಾ ಬಂದರು ಮತ್ತು ಲೆಬನಾನ್- ಇಸ್ರೇಲ್ ಗಡಿಯಿಂದ ದೂರದಲ್ಲಿರುವ ಕೆಲವು ಪ್ರದೇಶಗಳನ್ನು ತೋರಿಸಲಾಗಿತ್ತು. ಇತ್ತೀಚಿನ ಕೆಲವು ದಿನಗಳಲ್ಲಿ ಅದು ಇಸ್ರೇಲ್ ನೊಳಗೆ ನಡೆಯುತ್ತಿರುವ ಚಟುವಟಿಕೆಯನ್ನು ಗಮನಿಸುತ್ತಿದೆ. ಆದರೆ ಈಗ ಇಸ್ರೇಲ್ ಹಸನ್ ನಸ್ರಲ್ಲಾನನ್ನೇ ಕೊಂದು ಹಾಕಿದೆ.
ಹೆಜ್ಬುಲ್ಲಾ ಎಂದರೇನು?
1982ರ ಲೆಬನಾನ್‌ನ ಅಂತರ್ಯುದ್ಧದ ಸಮಯದಲ್ಲಿ ಸ್ಥಾಪನೆಯಾದ ಹೆಜ್ಬುಲ್ಲಾ ಆರಂಭದಲ್ಲಿ ಇಸ್ರೇಲ್ ಅತಿಕ್ರಮಿಸಿಕೊಂಡಿದ್ದ ದಕ್ಷಿಣ ಲೆಬನಾನ್‌ನ ಮೇಲಾಗುತ್ತಿದ್ದ ದಾಳಿಯನ್ನು ಕೊನೆಗೊಳಿಸಲು ಮೀಸಲಾಗಿತ್ತು. ಸುದೀರ್ಘ ಯುದ್ಧದ ಬಳಿಕ 2000ರಲ್ಲಿ ಇಸ್ರೇಲ್ ದಕ್ಷಿಣ ಲೆಬನಾನ್‌ನಿಂದ ಹಿಂದಕ್ಕೆ ಸರಿಯಿತು. ಆದರೆ ಹೆಜ್ಬುಲ್ಲಾ ತನ್ನ ಯುದ್ಧವನ್ನು ಮುಂದುವರಿಸಿದ್ದು, ಇಸ್ರೇಲ್ ಅನ್ನು ನಾಶ ಪಡಿಸುವ ಗುರಿಯನ್ನು ಹೊಂದಿತ್ತು.
ಇರಾನ್ ಬೆಂಬಲಿತ ಶಿಯಾ ಮುಸ್ಲಿಂ ಸಂಘಟನೆಯಾದ ಹೆಜ್ಬುಲ್ಲಾ ಅಲ್ಲಿಯ ಸರ್ಕಾರದ ಒಂದು ಭಾಗವಾಗಿದೆ. ಇಸ್ಲಾಂ ರಾಜಕೀಯ ಚಟುವಟಿಕೆಯನ್ನು ವಿಸ್ತರಿಸಲು ಮೊದಲ ಬಾರಿಗೆ ಇರಾನ್ ಬಳಸಿಕೊಂಡ ಸಂಘಟನೆ ಇದಾಗಿದೆ. ಸಶಸ್ತ್ರ ಗುಂಪಿನ ಜೊತೆಗೆ ಹೆಜ್ಬುಲ್ಲಾ ಲೆಬನಾನಿನ ಸಂಸತ್ತಿನಲ್ಲಿ ಶಾಸಕರನ್ನು ಹೊಂದಿರುವ ರಾಜಕೀಯ ಪಕ್ಷವಾಗಿದೆ. ದಶಕಗಳಿಂದ ಹೆಚ್ಚಿನ ಲೆಬನಾನಿನ ಸರ್ಕಾರಗಳಲ್ಲಿ ಹೆಜ್ಬುಲ್ಲಾ ಪ್ರತಿನಿಧಿಗಳು ಇದ್ದಾರೆ.
ದಕ್ಷಿಣ ಲೆಬನಾನ್ ಮತ್ತು ದೇಶದ ಇತರ ಭಾಗಗಳಲ್ಲಿ ಶಾಲೆ, ಆರೋಗ್ಯ ಚಿಕಿತ್ಸಾಲಯಗಳನ್ನು ನಡೆಸುವುದು ಸೇರಿದಂತೆ ವ್ಯಾಪಕವಾದ ಸಾಮಾಜಿಕ ಸೇವೆಗಳನ್ನು ಹೆಜ್ಬುಲ್ಲಾ ನಡೆಸುತ್ತಿದೆ.
ಅಮೆರಿಕದ ಮೇಲೆ ದಾಳಿ:
ಸ್ಥಾಪನೆಯಾದ ಆರಂಭಿಕ ದಿನಗಳಲ್ಲಿ ಹೆಜ್ಬುಲ್ಲಾ ಅಮೆರಿಕದ ಹಿತಾಸಕ್ತಿಗಳ ಮೇಲೆ ದಾಳಿ ನಡೆಸಿದ್ದರಿಂದ ಅಮೆರಿಕ ಅದನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯಿತು. ಹೆಜ್ಬುಲ್ಲಾ ಬೈರುತ್‌ನಲ್ಲಿ ಅಮೆರಿಕ ಒತ್ತೆಯಾಳುಗಳನ್ನು ತೆಗೆದುಕೊಂಡು 241 ಅಮೆರಿಕನ್ನರನ್ನು ಕೊಂದು ಹಾಕಿತ್ತು. 1983ರಲ್ಲಿ ನಡೆದ ಈ ಘಟನೆಯಲ್ಲಿ ಬೈರುತ್‌ನಲ್ಲಿ ನಡೆದ ಮೆರೈನ್ ಕಾರ್ಪ್ಸ್ ಬ್ಯಾರಕ್‌ಗಳ ಟ್ರಕ್ ಬಾಂಬ್ ದಾಳಿಯನ್ನು ಒಳಗೊಂಡಿತ್ತು.
ಹೆಜ್ಬುಲ್ಲಾಗೆ ಇರಾನ್‌ನ ಬೆಂಬಲವು ಅದನ್ನು ಲೆಬನಾನ್ ನಲ್ಲಿ ಅತ್ಯಂತ ಶಕ್ತಿಶಾಲಿಯನ್ನಾಗಿ ಮಾಡಿದೆ.
ರಾಜಕೀಯವಾಗಿ ಅದರ ಸ್ಥಾನವನ್ನು ಬಲಪಡಿಸಿದೆ. ಸಂಪೂರ್ಣ ಮಧ್ಯಪ್ರಾಚ್ಯದಲ್ಲಿ ಅತ್ಯಂತ ಸುಸಜ್ಜಿತ ಮಿಲಿಟರಿ ಸ್ಥಾನವನ್ನು ಅದು ಪಡೆಯಲು ಸಾಧ್ಯವಾಗಿದೆ ಎಂದು ಲಂಡನ್‌ನಲ್ಲಿರುವ ಸೋಅಸ್ ಮಿಡಲ್ ಈಸ್ಟ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕಿ ಲೀನಾ ಖತೀಬ್ ವಿವರಿಸಿದ್ದಾರೆ.
2006ರಲ್ಲಿ ಹೆಜ್ಬುಲ್ಲಾ ಇಸ್ರೇಲ್ ಗಸ್ತು ಸಿಬ್ಬಂದಿ ಮೇಲೆ ದಾಳಿ ನಡೆಸಿ ಇಬ್ಬರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡಿತ್ತು. ಇದು ಹೆಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ಒಂದು ತಿಂಗಳ ಕಾಲ ಯುದ್ಧವನ್ನು ಉಂಟು ಮಾಡಿತು. ಕೊನೆಗೆ ಅದು ಮುಕ್ತಾಯಗೊಂಡರೂ ಇಸ್ರೇಲ್ ಬಾಂಬ್ ದಾಳಿಯು ದಕ್ಷಿಣ ಲೆಬನಾನ್‌ನಲ್ಲಿ ವ್ಯಾಪಕ ವಿನಾಶವನ್ನು ಉಂಟುಮಾಡಿತು.
ಹೆಜ್ಬುಲ್ಲಾ ನಾಶಕ್ಕೆ ಇಸ್ರೇಲ್ ಶಪಥ:
ಇಸ್ರೇಲ್ ಹೆಜ್ಬುಲ್ಲಾಹ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಆದರೆ ಇದು ಮತ್ತಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮಿತ್ತು. ಇಸ್ರೇಲ್ ನ ಉತ್ತರದ ಗಡಿಯಲ್ಲಿ ಪ್ರಮುಖ ಮಿಲಿಟರಿ ಮತ್ತು ರಾಜಕೀಯ ಶಕ್ತಿಯಾಯಿತು.
ಹೆಜ್ಬುಲ್ಲಾದ ಮಿಲಿಟರಿ ಸಾಮರ್ಥ್ಯ ಎಷ್ಟು?
ಹೆಜ್ಬುಲ್ಲಾ ಅರಬ್ ರಾಷ್ಟ್ರಗಳ ಅತ್ಯಂತ ಪ್ರಮುಖ ಅರೆಸೈನಿಕ ಪಡೆಯಾಗಿದೆ. ಇದು ದೃಢವಾದ ಸಾಂಸ್ಥಿಕ ರಚನೆ ಮತ್ತು ಗಣನೀಯ ಪ್ರಮಾಣದ ಶಸ್ತ್ರಾಗಾರವನ್ನು ಹೊಂದಿದೆ. ಸುಮಾರು 1,00,000 ಸೈನಿಕರು ಇದರಲ್ಲಿದ್ದಾರೆ ಎಂದು ಹೆಜ್ಬುಲ್ಲಾ ಹೇಳಿಕೊಂಡಿದೆ.
ಹೆಜ್ಬುಲ್ಲಾದ ಮಿಲಿಟರಿ ಸಾಮರ್ಥ್ಯಗಳು ಕಳೆದ ಒಂದು ವರ್ಷಗಳಲ್ಲಿ ಹೆಚ್ಚಾಗಿದ್ದು, ಇದು ಸಿರಿಯನ್ ಅಂತರ್ಯುದ್ಧದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಅಧ್ಯಕ್ಷ ಬಶರ್ ಅಸ್ಸಾದ್ ಅವರನ್ನು ಅಧಿಕಾರದಲ್ಲಿ ಉಳಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಿದೆ. ಇದು ಸಿರಿಯಾ ಮತ್ತು ಇರಾಕ್‌ನಲ್ಲಿ ಇರಾನ್ ಬೆಂಬಲಿತ ಉಗ್ರರಿಗೆ ಮತ್ತು ಯೆಮೆನ್‌ನ ಹೌತಿ ಬಂಡುಕೋರರಿಗೆ ತರಬೇತಿ ನೀಡಲು ಸಹಾಯ ಮಾಡಿದೆ.
ಇಸ್ರೇಲ್ ಅಂದಾಜಿನ ಪ್ರಕಾರ ಹೆಜ್ಬುಲ್ಲಾ ಸುಮಾರು 1,50,000 ರಾಕೆಟ್ ಮತ್ತು ಕ್ಷಿಪಣಿಗಳನ್ನು ಹೊಂದಿದೆ. ಇದರಲ್ಲಿ ಮಾರ್ಗದರ್ಶಿ ಕ್ಷಿಪಣಿಗಳು, ಇಸ್ರೇಲ್‌ನಲ್ಲಿ ಎಲ್ಲಿ ಬೇಕಾದರೂ ದಾಳಿ ನಡೆಸಲು ಸಾಮರ್ಥ್ಯವಿರುವ ಸ್ಫೋಟಕಗಳು ಸೇರಿವೆ. ಇಸ್ರೇಲ್‌ನೊಂದಿಗಿನ ತನ್ನ ಇತ್ತೀಚಿನ ಸಂಘರ್ಷದ ಸಮಯದಲ್ಲಿ ಹೆಜ್ಬುಲ್ಲಾ ತನ್ನ ಶಸ್ತ್ರಾಗಾರಕ್ಕೆ ಹೊಸ ಶಸ್ತ್ರಾಸ್ತ್ರಗಳನ್ನು ಪರಿಚಯಿಸಿದೆ.
ಇತ್ತೀಚೆಗೆ ಹೆಜ್ಬುಲ್ಲಾ ತೀವ್ರ ಹಾನಿ ಅನುಭವಿಸಿತ್ತು. ಮುಖ್ಯವಾಗಿ ಅದರ ಸದಸ್ಯರು ಬಳಸುತ್ತಿದ್ದ ಸಾವಿರಾರು ಸಂವಹನ ಸಾಧನಗಳು ಲೆಬನಾನ್‌ನ ವಿವಿಧ ಭಾಗಗಳಲ್ಲಿ ಸ್ಫೋಟಗೊಂಡವು. ಈ ಘಟನೆಯಲ್ಲಿ 39 ಮಂದಿ ಮೃತಪಟ್ಟಿದ್ದರು. ಹಲವು ನಾಗರಿಕರು ಸೇರಿದಂತೆ ಸುಮಾರು 3,000 ಜನರು ಗಾಯಗೊಂಡಿದ್ದರು. ಅಲ್ಲದೆ ಇಸ್ರೇಲ್ ಇತ್ತೀಚೆಗೆ ಹೆಜ್ಬುಲ್ಲಾದ ಉನ್ನತ ಮಿಲಿಟರಿ ಕಮಾಂಡರ್ ಸೇರಿದಂತೆ ಹಲವಾರು ಹಿರಿಯ ನಾಯಕರನ್ನು ಹತ್ಯೆ ಮಾಡಿದೆ.
ಹಸನ್ ನಸ್ರಲ್ಲಾ ಯಾರು?
ಬೈರುತ್ ನ ಉಪನಗರವಾದ ಬೌರ್ಜ್ ಹಮ್ಮೌಡ್‌ನಲ್ಲಿ ಬಡ ಶಿಯಾ ಕುಟುಂಬದಲ್ಲಿ 1960ರಲ್ಲಿ ಜನಿಸಿದ ನಸ್ರಲ್ಲಾ ಅನಂತರ ದಕ್ಷಿಣ ಲೆಬನಾನ್‌ಗೆ ಸ್ಥಳಾಂತರಗೊಂಡಿದ್ದ. ಇಸ್ಲಾಂ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಿರುವ ಈತ ಹೆಜ್ಬುಲ್ಲಾದ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದ. ಇದಕ್ಕೂ ಮೊದಲು ಶಿಯಾ ರಾಜಕೀಯ ಮತ್ತು ಅರೆಸೈನಿಕ ಸಂಘಟನೆಯಾದ ಅಮಲ್ ಚಳವಳಿಯಲ್ಲಿ ಪಾಲ್ಗೊಂಡಿದ್ದ. 1992ರಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಮೃತಪಟ್ಟ ಬಳಿಕ ಹಸನ್ ನಸ್ರಲ್ಲಾ ಹೆಜ್ಬುಲ್ಲಾದ ನಾಯಕನಾದ.
ದಕ್ಷಿಣ ಲೆಬನಾನ್ ನಿಂದ ಇಸ್ರೇಲ್ ವಾಪಸ್ ತೆರಳುವಂತೆ ಮಾಡಿರುವುದಕ್ಕೆ ಮತ್ತು 2006ರ ಯುದ್ಧದ ನೇತೃತ್ವ ವಹಿಸಿರುವುದಕ್ಕೆ ಅನೇಕರು ಈತನನ್ನು ಗೌರವಿಸುತ್ತಿದ್ದರು. ಈತನ ಚಿತ್ರಗಳು ಲೆಬನಾನ್, ಸಿರಿಯಾ ಮತ್ತು ಅರಬ್ ರಾಷ್ಟ್ರಗಳ ಹಲವು ಪ್ರದೇಶಗಲ್ಲಿ ಜಾಹೀರಾತು ಫಲಕಗಳಲ್ಲಿ ಕಾಣಿಸಿಕೊಂಡಿತ್ತು.
ಇದೀಗ ಇಸ್ರೇಲ್ ಈ ಉಗ್ರ ನಾಯಕನನ್ನು ಹತ್ಯೆ ಮಾಡಿದೆ. ಇದೀಗ ಹೆಜ್ಬುಲ್ಲಾದ ಮುಂದಿನ ನಡೆ ಏನಿರಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.