ಕೊಲಂಬೊ: ಶ್ರೀಲಂಕಾದ ಖಾಸಗಿ ಬ್ಯಾಂಕುಗಳಲ್ಲಿ ವಿದೇಶಿ ವಿನಿಮಯ ಖಾಲಿಯಾದ ಪರಿಣಾಮ, ಆಮದು ಪ್ರಕ್ರಿಯೆಗೆ ತಡೆ ಬಿದ್ದಿದ್ದು ಅದರ ಬೆನ್ನಲ್ಲೇ ಶ್ರೀಲಂಕಾ ಆಹಾರ ತುರ್ತುಪರಿಸ್ಥಿತಿ ಘೋಷಣೆ ಮಾಡಿದೆ.
ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಆಹಾರ ಅಭದ್ರತೆ ತೋರಿರುವುದರಿಂದ ಸಕ್ಕರೆ, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ದಾಸ್ತಾನಿನ ವಿರುದ್ಧ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ಬಗ್ಗೆ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಹಿತಿ ನೀಡಿದ್ದಾರೆ.
ಇದೇ ಸಂಬಂಧ, ಅಕ್ಕಿ ಹಾಗೂ ಅಗತ್ಯ ವಸ್ತುಗಳ ಪೂರೈಕೆ ಪ್ರಕ್ರಿಯೆ ನಿರ್ವಹಣೆಗಾಗಿ ಉನ್ನತ ಸೇನಾಧಿಕಾರಿಯನ್ನು ರಾಜಪಕ್ಸ ಅವರು ನೇಮಕ ಮಾಡಿದ್ದಾರೆ.
ಶ್ರೀಲಂಕಾದಲ್ಲಿ ಅಕ್ಕಿ, ನೀರುಳ್ಳಿ, ಆಲೂಗಡ್ಡೆ ಸೇರಿದಂತೆ ಹಲವು ದಿನಸಿ ಸಾಮಗ್ರಿ ಬೆಲೆ ಗಗನಕ್ಕೇರುತ್ತಲೇ ಇದೆ. ಅಲ್ಲದೇ, ಹಾಲಿನ ಪುಡಿ, ಸೀಮೆ ಎಣ್ಣೆ, ಅಡುಗೆ ಅನಿಲ ಖರೀದಿಗೆ ಗ್ರಾಹಕರು ಅಂಗಡಿ ಮುಂದೆ ಸರದಿ ನಿಲ್ಲುತ್ತಿದ್ದಾರೆ.
2020ರಲ್ಲಿ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತಗೊಂಡಿತ್ತು. ವಿದೇಶಿ ವಿನಿಮಯ ಉಳಿಸುವ ಉದ್ದೇಶದಿಂದ ಹಲವು ಅಗತ್ಯ ವಸ್ತುಗಳ ಆಮದಿನ ಮೇಲೆ ಸರ್ಕಾರ ನಿಷೇಧ ಹೇರಿತ್ತು. ಇವೆಲ್ಲದರಿಂದಾಗಿ ಆಹಾರ ಅಭದ್ರತೆ ತಲೆದೋರಿದೆ ಎಂದು ತಜ್ನರು ಅಭಿಪ್ರಾಯ ಪಟ್ಟಿದ್ದಾರೆ.