Thursday, 12th December 2024

ಇದ್ಲಿಬ್​ ಪ್ರಾಂತ್ಯದ ಮೇಲೆ ರಷ್ಯಾದ ಫೈಟರ್ ಜೆಟ್‌ ಬಾಂಬ್ ದಾಳಿ

ಡಮಾಸ್ಕಸ್: ಸಿರಿಯಾದ ಬಂಡುಕೋರರ ನಿಯಂತ್ರಣದಲ್ಲಿರುವ ವಾಯುವ್ಯ ಇದ್ಲಿಬ್​ ಪ್ರಾಂತ್ಯದ ಮೇಲೆ ರಷ್ಯಾದ ಫೈಟರ್ ಜೆಟ್‌ಗಳು ಬಾಂಬ್ ದಾಳಿ ನಡೆಸಿವೆ. ಪರಿಣಾಮ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.

“ಇದ್ಲಿಬ್‌ನ ಜಿಸ್ರ್ ಅಲ್-ಶುಘೂರ್ ನಗರದಲ್ಲಿ ನಡೆದ ವೈಮಾನಿಕ ದಾಳಿಯಿಂದ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಹಾನಿಗೊಳಗಾಗಿದೆ. ಮುಸ್ಲಿಂ ಹಬ್ಬವಾದ ಈದ್ ಅಲ್-ಅಧಾಗೆ ಮುಂಚಿತ ವಾಗಿ ಈ ದಾಳಿ ನಡೆಸಲಾಗಿದೆ. ಈ ಪ್ರದೇಶದಲ್ಲಿ ವೈಮಾನಿಕ ದಾಳಿಯು ಎರಡನೇ ದಿನ ಸಹ ಮುಂದು ವರೆದಿದ್ದು, ಕಳೆದ ನಾಲ್ಕು ದಿನಗಳಿಂದ ಫಿರಂಗಿ ಹಾಗೂ ಗುಂಡಿನ ದಾಳಿ ಸಹ ನಡೆಸ ಲಾಗುತ್ತಿದೆ” ಎಂದು ನಾಗರಿಕ ರಕ್ಷಣಾ ವಿಭಾಗ ಮಾಹಿತಿ ನೀಡಿದೆ.

ಜಿಸ್ರ್ ಅಲ್-ಶುಘೂರ್ ಮೇಲಿನ ವೈಮಾನಿಕ ದಾಳಿಯು ಇದುವರೆಗೆ ವಾಯುವ್ಯ ಸಿರಿಯಾದಲ್ಲಿ 2023 ರಲ್ಲಿ ಸಂಭವಿಸಿದ ಅತ್ಯಂತ ಮಾರಕ ದಾಳಿ ಗಳಲ್ಲಿ ಒಂದಾಗಿದೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.

ರಷ್ಯಾ ವೈಮಾನಿಕ ದಾಳಿ ಬಗ್ಗೆ ಸ್ಥಳೀಯ ಪತ್ರಕರ್ತನೊಬ್ಬ ಮಾತನಾಡಿದ್ದು, ದಾಳಿ ನಡೆದು ಮೂವತ್ತು ನಿಮಿಷಗಳ ನಂತರ ನಾನು ಸ್ಥಳಕ್ಕೆ ಹೋದೆ, ನೆಲ ರಕ್ತ ಸಿಕ್ತವಾಗಿರುವುದನ್ನು ಕಂಡೆ, ಮಾರುಕಟ್ಟೆಯಲ್ಲಿ ಟೊಮೇಟೊ ಚಲ್ಲಾಪಿಲ್ಲಿಯಾಗಿ ರುವುದನ್ನು ನೋಡಿದೆ ಎಂದು ಹೇಳಿದ್ದಾರೆ.