Thursday, 26th December 2024

Indian student Murder: ಕೆನಡಾದಲ್ಲಿ ಭಾರತೀಯ ಮೂಲದ ಯುವಕನ ಇರಿದು ಕೊಲೆ

ಕೆನಡಾದಲ್ಲಿ (Canada) ಭಾರತೀಯ ವಿದ್ಯಾರ್ಥಿಯೊಬ್ಬನ ಹತ್ಯೆಯಾಗಿದೆ (Indian student Murder). ಇಲ್ಲಿನ ಸರ್ನಿಯಾ (Sarnia) ಎಂಬಲ್ಲಿ 22 ವರ್ಷ ಪ್ರಾಯದ ವಿದ್ಯಾರ್ಥಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ಈ ಕೊಲೆಯನ್ನು ಈತನ ಫ್ಲ್ಯಾಟ್ ಮೇಟ್ ಮಾಡಿದ್ದು, ಕಿಚನ್ ನಲ್ಲಿ ಇವರಿಬ್ಬರ ನಡುವೆ ಪ್ರಾರಂಭಗೊಂಡ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆಯಾದ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಇಲ್ಲಿನ ಲ್ಯಾಂಬ್ಟನ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿದ್ದ ಗುರಾಸಿಸ್ ಸಿಂಗ್ (Gurasis Singh) ಎಂದು ಗುರುತಿಸಲಾಗಿದೆ.

ಡಿ.1ರಂದು ಬೆಳಗ್ಗಿನ ಸಮಯದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಕ್ವೀನ್ ಸ್ಟ್ರೀಟ್  ನಲ್ಲಿರುವ ಮನೆಯಲ್ಲಿ ಇವರಿಬ್ಬರು ಕೋಣೆ ಶೇರಿಂಗ್ ಮಾಡಿ ವಾಸವಾಗಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಡಿ.1ರಂದು 911 ಕರೆ ಬಂದಿದೆ. ಇದನ್ನು ಆಧರಿಸಿ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಭಾರತೀಯ ಮೂಲದ ಈ ವಿದ್ಯಾರ್ಥಿ ಇರಿತದ ಗಾಯಗಳೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೊಲೆಗಾರನನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದುಕೊಂಡಿದ್ದಾರೆ.

ಕೊಲೆಗಾರ ಲಂಡನ್ ನಲ್ಲಿರುವ ಒಂಟಾರಿಯೋ ಕೋರ್ಟ್ ಆಫ್ ಜಸ್ಟಿಸ್ ಮುಂದೆ ವಿಡಿಯೋ ಮೂಲಕ ವಿಚಾರಣೆಗೊಳಪಟ್ಟಿದ್ದು, ಆತನನ್ನು ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪೊಲೀಸರು ನೀಡಿರುವ ಮಾಹಿತಿಯಂತೆ, ಇವರಿಬ್ಬರ ನಡುವೆ ಅಡುಗೆ ಕೋಣೆಯಲ್ಲಿ ಯಾವುದೋ ವಿಷಯಕ್ಕೆ ಗಲಾಟೆ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಮೊದಲೇ ಕೈಯಲ್ಲಿ ಚಾಕು ಹಿಡಿದುಕೊಂಡಿದ್ದ ಕೊಲೆಗಾರ ಆರೋಪಿ ತನ್ನ ಕೈಯಲಿದ್ದ ಚಾಕುವಿನಿಂದ ಭಾರತೀಯ ಮೂಲದ ವಿದ್ಯಾರ್ಥಿಗೆ ಮನಬಂದಂತೆ ಇರಿದಿದ್ದಾನೆ.

ಆರೊಪಿಯನ್ನು ಬಂಧಿಸಿದ್ದರೂ, ಈ ಸಂಕೀರ್ಣ ಪ್ರಕರಣದ ತನಿಖೆ ನಡೆಯುತ್ತಿದೆ. ಸರ್ನಿಯಾ ಪೊಲೀಸ್ ಕ್ರಿಮಿನಲ್ ತನಿಖಾ ವಿಭಾಗವು ಘಟನಾ ಸ್ಥಳದಲ್ಲಿ ಲಭ್ಯವಿರುವ ಎಲ್ಲಾ ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ. ಈ ಮೂಲಕ ಈ ಘಟನೆಯ ನಿಜಾಂಶವನ್ನು ಭೇದಿಸಲು ಪೊಲೀಸರು ಪಣತೊಟ್ಟಿದ್ದಾರೆ.

ಇದನ್ನು ಓದಿ: Pramod Maravante: ‘ಕಾಂತಾರ’ ಖ್ಯಾತಿಯ ಗೀತ ಸಾಹಿತಿಯ ಬಾಳಲ್ಲಿ ‘ಸಿಂಗಾರ ಸಿರಿ’ಯ ಎಂಟ್ರಿ!

ಸದ್ಯಕ್ಕೆ ಇದು ಜನಾಂಗೀಯ ವಿಚಾರಕ್ಕೆ ನಡೆದಿರಬಹುದಾದ ಕೊಲೆ ಎಂದು ನಮಗೆ ಅನ್ನಿಸುವುದಿಲ್ಲ ಎಂದು ಸರ್ನಿಯಾ ಪೊಲೀಸ್ ಮುಖ್ಯಸ್ಥ ಡೆರೆಕ್ ಡೇವಿಸ್ ಹೇಳಿಕೊಂಡಿದ್ದಾರೆ.

ಭಾರತೀಯ ಮೂಲದ ಈ ವಿದ್ಯಾರ್ಥಿ ಕಲಿಯುತ್ತಿದ್ದ ಲ್ಯಾಂಬ್ಟನ್ ಕಾಲೇಜು ಸಹ ತನ್ನ ಸಂಸ್ಥೆಯ ವಿದ್ಯಾರ್ಥಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿದೆ.

‘ನಮ್ಮ ಸಂಸ್ಥೆಯಲ್ಲಿ ಪ್ರಥಮ ವರ್ಷದ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಕಲಿಯುತ್ತಿದ್ದ ಗುರಾಸಿಸ್ ಸಿಂಗ್ ನಿಧನಕ್ಕೆ ಲ್ಯಾಂಬ್ಟನ್ ಕಾಲೇಜು ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತಿದೆ’ ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

‘ಗುರಾಸಿಸ್ ಕುಟುಂಬದವರಿಗೆ, ಪ್ರೀತಿ ಪಾತ್ರರಿಗೆ ಹಾಗೂ ಗೆಳೆಯರಿಗೆ ನಮ್ಮ ತೀವ್ರ ಸಂತಾಪಗಳು. ನಮ್ಮ ಕಾಲೇಜಿನ ಹೆಚ್ಚಿನ ಸಿಬ್ಬಂದಿಗಳು ಗುರಾಸಿಸ್ ನನ್ನು ತಿಳಿದವರೇ ಆಗಿದ್ದಾರೆ. ಲ್ಯಾಂಬ್ಟನ್ ಕಾಲೇಜು ಸದ್ಯ ಗುರಾಸಿಸ್ ಕುಟುಂಬದ ಜೊತೆ ಸಂಪರ್ಕದಲ್ಲಿದ್ದು, ಇವರ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಕಾರ್ಯತತ್ಪರರಾಗಿದ್ದೇವೆ’ ಎಂದು ಕಾಲೇಜು ಪ್ರಕಟನೆಯಲ್ಲಿ ತಿಳಿಸಿದೆ.