ಅಬುಧಾಬಿ: ಭಾರತದಿಂದ ರಫ್ತು ಮತ್ತು ಮರು ರಫ್ತಾಗುವ ಗೋಧಿ ಮತ್ತು ಗೋಧಿಹಿಟ್ಟಿನ ಮೇಲೆ ಯುಎಇ 4 ತಿಂಗಳ ನಿಷೇಧ ವಿಧಿಸಿದೆ ಎನ್ನಲಾಗಿದೆ.
2022ರ ಮೇ 13ರಿಂದ ಇದು ಜಾರಿಯಲ್ಲಿದೆ. ವ್ಯಾಪಾರ ಹರಿವಿನ ಮೇಲೆ ಪರಿಣಾಮ ಬೀರಿದ ಅಂತರಾಷ್ಟ್ರೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಾಗೂ ವಿಶೇಷವಾಗಿ ಉಭಯ ದೇಶಗಳ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ(ಸಿಇಪಿಎ)ಗೆ ಸಹಿ ಹಾಕಿದ ಬಳಿಕ ದೇಶೀಯ ಬಳಕೆಗಾಗಿ ಯುಎಇಗೆ ಗೋಧಿ ರಫ್ತು ಮಾಡಲು ಭಾರತ ಸರಕಾರದ ಅನುಮೋದನೆಯನ್ನು ಶ್ಲಾಘಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವಿತ್ತ ಸಚಿವಾಲಯ ವಿವರಿಸಿದೆ.
ದೇಶದೊಳಗೆ ಮೇ 13ರ ಮೊದಲು ಆಮದಾಗಿರುವ ಭಾರತ ಮೂಲದ ಗೋಧಿ ಮತ್ತು ಗೋಧಿ ಹಿಟ್ಟಿನ ರಫ್ತು/ಮರು ರಫ್ತಿಗೆ ಇಚ್ಛಿಸುವ ಸಂಸ್ಥೆಗಳು ಈ ಕುರಿತು ಸಚಿವಾಲಯಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳೊಂದಿಗೆ ಕೋರಿಕೆ ಪತ್ರ ಸಲ್ಲಿಸಬೇಕು.
ಭಾರತೇತರ ಮೂಲದ ಗೋಧಿ ಮತ್ತು ಗೋಧಿ ಹಿಟ್ಟಿನ ವಿಷಯದಲ್ಲಿ , ಇವನ್ನು ರಫ್ತು/ಮರು ರಫ್ತು ಮಾಡಲು ಇಚ್ಛಿಸುವ ಸಂಸ್ಥೆಗಳು ದೇಶದಿಂದ ಹೊರಗೆ ರಫ್ತು ಮಾಡಲು ಅನುಮತಿಗಾಗಿ ಎಲ್ಲಾ ಪೂರಕ ದಾಖಲೆಪತ್ರಗಳೊಂದಿಗೆ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಬೇಕು.
ಸಂಸ್ಥೆಗಳಿಗೆ ನೀಡಲಾಗುವ ರಫ್ತು ಪರವಾನಿಗೆಯು ವಿತರಿಸಿದ ದಿನಾಂಕದಿಂದ 30 ದಿನಗಳವರೆಗೆ ಮಾನ್ಯ ವಾಗಿರುತ್ತದೆ ಮತ್ತು ಯುಎಇಯಿಂದ ಸರಕು ಸಾಗಿಸುವ ಕಾರ್ಯವಿಧಾನವನ್ನು ಪೂರ್ಣಗೊಳಿಸಲು ಅದನ್ನು ಸಂಬಂಧಿತ ಕಸ್ಟಮ್ಸ್ ಇಲಾಖೆಗೆ ಸಲ್ಲಿಸ ಬೇಕು. ಇ-ಮೇಲ್ ಮೂಲಕ ಅಥವಾ ಇಲಾಖೆಯ ಕೇಂದ್ರ ಕಚೇರಿಗೆ ನೇರವಾಗಿ ಬಂದು ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ಸೂಚಿಸಿದೆ.