Thursday, 12th December 2024

ಇಂಡೋನೇಷ್ಯಾದಲ್ಲಿ 6.4 ತೀವ್ರತೆಯ ಭೂಕಂಪ

ಜಕಾರ್ತ: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಈವರೆಗೂ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿ ಯಾಗಿಲ್ಲ.

ಪಶ್ಚಿಮ ಪ್ರಾಂತ್ಯದ ಯೋಗಕರ್ತಾದಲ್ಲಿ ಈ ಕಂಪನ ಉಂಟಾಗಿದೆ. ರಾತ್ರಿ 7.57 ನಿಮಿಷ ದಲ್ಲಿ ಭೂಮಿ ಗಢಗಢ ನಡುಗಿದೆ. ಭೂಮಿ ಕಂಪಿಸಿದ ಏಟಿಗೆ ಕೆಲ ಮನೆಗಳು ಬಿರುಕು ಬಿಟ್ಟಿದ್ದರೆ, ಅಶಕ್ತ ಮನೆಗಳು ಉರುಳಿವೆ ಎಂದು ತಿಳಿದುಬಂದಿದೆ. 6.4 ತೀವ್ರತೆಯ ಭೂಕಂಪ ಇದಾಗಿದೆ ಹವಾಮಾನ ಮತ್ತು ಜಿಯೋಫಿಸಿಕ್ಸ್ ಏಜೆನ್ಸಿಯ ಮುಖ್ಯಸ್ಥರು ತಿಳಿಸಿದ್ದಾರೆ.

ಭೂಕಂಪನದ ಕೇಂದ್ರಬಿಂದು ಬಂತುಲ್ ಜಿಲ್ಲೆಯ ವಾಯುವ್ಯದ 86 ಕಿಮೀ ದೂರ ಮತ್ತು ಸಮುದ್ರತಳದ 25 ಕಿಮೀ ಆಳದಲ್ಲಿ ಎದ್ದಿದೆ ಎಂದು ಸಂಸ್ಥೆ ತಿಳಿಸಿದೆ. ಸಮೀಪದ ಮಧ್ಯ ಜಾವಾ ಮತ್ತು ಪೂರ್ವ ಜಾವಾ ಪ್ರಾಂತ್ಯಗಳಲ್ಲಿಯೂ ಭೂಕಂಪನದ ಅನುಭವ ಉಂಟಾಗಿದೆ.

ತೀವ್ರ ಭೂಕಂಪನದ ಬಳಿಕ ಐದಕ್ಕೂ ಹೆಚ್ಚು ಲಘು ಕಂಪನಗಳು ಉಂಟಾಗಿವೆ. ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದಲ್ಲಿ ಜನರು ಅಂಥವುಗಳನ್ನು ತೊರೆಯಲು ಅಲ್ಲಿನ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Read E-Paper click here

3 ತಿಂಗಳ ಹಿಂದೆ ಇಂಡೋನೇಷ್ಯಾದ ಜಾವಾ ದ್ವೀಪದ ಉತ್ತರದ ಸಮುದ್ರದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇಂಡೋನೇಷ್ಯಾದ ಭೂವೈಜ್ಞಾನಿಕ ಸಂಸ್ಥೆಯು 594 ಕಿಲೋಮೀಟರ್ (370 ಮೈಲುಗಳು) ಆಳದಲ್ಲಿ ಭೂಕಂಪನದ ಕೇಂದ್ರ ಬಿಂದುವನ್ನು ಪತ್ತೆಹಚ್ಚಿತ್ತು. ಕಂಪಿಸಿದ ವೇಳೆ ಸಮುದ್ರದ ಅಲೆಗಳು ಎದ್ದಿರಲಿಲ್ಲ. ಇದರಿಂದ ಯಾವುದೇ ಹಾನಿ ಉಂಟಾಗಿರಲಿಲ್ಲ.

ಜನವರಿಯಲ್ಲೂ ಪಶ್ಚಿಮ ಇಂಡೋನೇಷ್ಯಾದಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿತ್ತು. ಸುಮಾರು 6.0 ತೀವ್ರತೆಯ ಭೂಕಂಪ ಕರಾವಳಿ ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು.