ಇಸ್ರೇಲ್ (israel) ಮೇಲೆ ಮಂಗಳವಾರ ತಡರಾತ್ರಿ ಇರಾನ್ (Iran ) 180 ಬ್ಯಾಲಿಸ್ಟಿಕ್ ಕ್ಷಿಪಣಿಗಳೊಂದಿಗೆ (Ballistic Missile ) ಅತಿ ದೊಡ್ಡ ಮಟ್ಟದಲ್ಲಿ ದಾಳಿ (Iran israel war) ನಡೆಸಿde. ಇದು ಮಧ್ಯಪ್ರಾಚ್ಯ ರಾಷ್ಟ್ರಗಳ ಮಧ್ಯೆ ಸಂಘರ್ಷದ ವಾತಾವರಣವನ್ನು ಸೃಷ್ಟಿಸಿದೆ. 2023ರ ಅಕ್ಟೋಬರ್ 7ರಂದು ಪ್ರಾರಂಭವಾದ ಗಾಜಾ ಯುದ್ಧದೊಂದಿಗೆ ( Gaza war) ಈ ಸಂಘರ್ಷ ಪ್ರಾರಂಭವಾಗಿತ್ತು.
ಇಸ್ರೇಲ್ ಮೇಲೆ ದಾಳಿ ನಡೆಸುವ ಸಲುವಾಗಿಯೇ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿತ್ತು. ಈ ದಾಳಿ ಇಸ್ರೇಲ್ ಮೇಲೆ ಇರಾನ್‌ನ ಯುದ್ಧದ ಘೋಷಣೆಯಾಗಿದೆ. ಇರಾನ್ ತನ್ನ ಶಸ್ತ್ರಾಗಾರದಲ್ಲಿ ಯಾವ ರೀತಿಯ ಕ್ಷಿಪಣಿಗಳನ್ನು ಹೊಂದಿದೆ, ಅದು ಹಿಂದೆ ಎಷ್ಟು, ಯಾವ ದೇಶಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ ? ಇದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಕ್ಷಿಪಣಿ ದಾಸ್ತಾನು ಎಷ್ಟಿದೆ?
ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿಯಲ್ಲಿ ಹೆಚ್ಚಾಗಿ ಕಡಿಮೆ, ಮಧ್ಯಮ ಶ್ರೇಣಿಯ ಫತೇಹ್, ಸಜ್ಜಿಲ್, ಶಹಾಬ್, ಕಿಯಾಮ್ ಮತ್ತು ಖೋರ್ರಾಮ್‌ಶರ್ ಹೆಸರಿನ ಕ್ಷಿಪಣಿಗಳು ಸೇರಿವೆ.
ಸಣ್ಣ ಶ್ರೇಣಿಯ ಶಹಾಬ್-2 ಕ್ಷಿಪಣಿಯು 500 ಕಿ.ಮೀ.ವರೆಗೆ ಹಾರಬಲ್ಲದು. ಇದು 1998ರಿಂದ ಇರಾನ್‌ನ ಆರ್ಸೆನಲ್‌ನ ಭಾಗವಾಗಿದೆ. ಫತೇಹ್- 313 ಇನ್ನೊಂದು ಸಣ್ಣ ಶ್ರೇಣಿಯ ಕ್ಷಿಪಣಿಯಾಗಿದ್ದು, 500 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಇದು 2015ರಿಂದ ಇರಾನ್‌ನ ರಕ್ಷಣಾ ವ್ಯವಸ್ಥೆಯಲ್ಲಿದೆ.
1,000ರಿಂದ 2,000 ಕಿ.ಮೀ. ದೂರದವರೆಗೆ ಪ್ರಯಾಣಿಸುವ ಮಧ್ಯಮ ಶ್ರೇಣಿಯ ಕ್ಷಿಪಣಿಗಳಾದ ಶಹಾಬ್-3 ಅನ್ನು 2003ರಲ್ಲಿ ಇರಾನ್‌ನ ರಕ್ಷಣಾ ವ್ಯವಸ್ಥೆಗೆ ಸೇರಿಸಲಾಯಿತು. ಶಹಾಬ್- 3 ಕ್ಷಿಪಣಿಗಳು ಲಿಕ್ವಿಡ್ ಪ್ರೊಪೆಲ್ಲೆಂಟ್ ಅನ್ನು ಬಳಸುತ್ತವೆ. 760 ರಿಂದ 1,200 ಕೆ.ಜಿ. ಯಷ್ಟು ಸುಡು ಮದ್ದುಗಳನ್ನು ಹೊತ್ತೊಯ್ಯುತ್ತವೆ. ಇದನ್ನು ಮೊಬೈಲ್ ಲಾಂಚರ್‌ಗಳು ಮತ್ತು ಸಿಲೋಗಳಿಂದ ಹಾರಿಸಬಹುದು.
ಶಹಾಬ್- 3ಯ ಹೊಸ ರೂಪಾಂತರ ಘದರ್ ಮತ್ತು ಎಮಾದ್ ಕ್ಷಿಪಣಿಗಳು. ಇದು ಸುಮಾರು 1,000 ಅಡಿ ದೂರದವರೆಗೆ ನಿಖರವಾಗಿ ದಾಳಿ ಮಾಡುತ್ತದೆ.
ಇಸ್ರೇಲ್ ಮೇಲೆ ಮಂಗಳವಾರದ ದಾಳಿಯಲ್ಲಿ ಟೆಹ್ರಾನ್ ಹೊಸ ಕ್ಷಿಪಣಿ ಫತೇಹ್- 1 ಅನ್ನು ಬಳಸಲಾಗಿತ್ತು. ಫತೇಹ್-1, ಮ್ಯಾಕ್ 5 ಕ್ಷಿಪಣಿ ಗಂಟೆಗೆ 6,100 ಕಿ.ಮೀ. ದೂರ ಚಲಿಸುತ್ತದೆ. ಫತೇಹ್ -1 ಅನ್ನು ಇರಾನ್ ಮೊದಲ ಬಾರಿಗೆ ಬಳಸಿದೆ ಎನ್ನಲಾಗಿದೆ.
ಎಷ್ಟು ಬಾರಿ ಕ್ಷಿಪಣಿ ದಾಳಿ ಮಾಡಿದೆ?
1980ರ ಯುದ್ಧದ ವೇಳೆ ಇರಾಕ್‌ನ ಕ್ಷಿಪಣಿ ದಾಳಿಯನ್ನು ಇರಾನ್ ಸ್ಕಡ್ ಬಿ ಕ್ಷಿಪಣಿಯಿಂದ ಎದುರಿಸಿತ್ತು. ಇರಾನ್ ಸ್ಕಡ್-ಬಿ ಕ್ಷಿಪಣಿಗಳನ್ನು ಲಿಬಿಯಾ, ಸಿರಿಯಾ ಮತ್ತು ಉತ್ತರ ಕೊರಿಯಾದಿಂದ ಪಡೆದುಕೊಂಡಿತ್ತು.1985ರಿಂದ 1988ರವರೆಗೆ ಯುದ್ಧವು ಕೊನೆಗೊಳ್ಳುವವರೆಗೆ ಇರಾಕ್ ವಿರುದ್ಧ 300 ಕಿ.ಮೀ. ವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸಿತ್ತು.
1994 ಮತ್ತು 2001ರಲ್ಲಿ ಇರಾನ್ ತನ್ನ ಸ್ವಂತ ಸ್ಕಡ್ ಬಿಯ ರೂಪಾಂತರವಾದ ಶಹಾಬ್-1 ಅನ್ನು ಸಿಡಿಸಿತ್ತು. ಇದು ಸುಮಾರು 300 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ ಇರಾಕ್‌ನ ನೆಲೆಗಳ ಮೇಲೆ ದಾಳಿ ನಡೆಸಲು ಬಳಸಲಾಗಿತ್ತು.
2017 ಮತ್ತು 2018ರಲ್ಲಿ, ಪೂರ್ವ ಸಿರಿಯಾದ ಐಎಸ್‌ಐಎಸ್‌ಗಳನ್ನು ಗುರಿಯಾಗಿಸಿಕೊಂಡು ಇರಾನ್ ಸುಮಾರು 12 ಅಲ್ಪ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿತು. ಇದರಲ್ಲಿ ಕೆಲವು 595 ಕಿ.ಮೀ.ಗಿಂತಲೂ ದೂರ ಪ್ರಯಾಣಿಸಿತ್ತು. 2018ರಲ್ಲಿ ಉತ್ತರ ಇರಾಕ್ ನ ಕುರ್ದಿಶ್ ಪ್ರತ್ಯೇಕತಾವಾದಿಗಳ ಮೇಲೆ ಏಳು ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇರಾನ್ ಉಡಾಯಿಸಿತು.
2019ರಲ್ಲಿ ಸೌದಿ ಅರೇಬಿಯಾದ ತೈಲ ಘಟಕಕ್ಕೆ ಇರಾನ್ ಏಳು ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ ಮತ್ತು 2020ರಲ್ಲಿ ಇರಾನ್ ಎರಡು ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ 12ಕ್ಕಿಂತಲೂ ಹೆಚ್ಚು ಕಿರು-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ.
2024ರ ಆರಂಭದಲ್ಲಿ ಇರಾನ್ 1,198 ಕಿ.ಮೀ. ದೂರದ ವಾಯವ್ಯ ಸಿರಿಯಾದ ಮೇಲೆ ದಾಳಿ ಮಾಡಿದಾಗ ತನ್ನ ಹೊಸ ಕ್ಷಿಪಣಿಗಳ ವ್ಯಾಪ್ತಿಯನ್ನು ಪ್ರದರ್ಶಿಸಿತು.
ಕ್ಷಿಪಣಿ ಪೂರೈಕೆ
2000ರಿಂದ ಇರಾನ್ ತನ್ನ ಮಿತ್ರ ದೇಶಗಳಿಗೆ ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪೂರೈಸುತ್ತಿದೆ. ಇದರಲ್ಲಿ ಇರಾಕ್, ಲೆಬನಾನ್ ಮತ್ತು ಯೆಮೆನ್ ಕೂಡ ಸೇರಿದೆ. ಟೆಹ್ರಾನ್‌ನ ತಂತ್ರಜ್ಞಾನ ಮತ್ತು ಕ್ಷಿಪಣಿಗಳ ವರ್ಗಾವಣೆಯು 120 ಕಿ.ಮೀ ನಿಂದ 1,950 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಇದು ಹೆಚ್ಚಿನ ಶ್ರೇಣಿಯದ್ದಾಗಿದ್ದು, ನಿಖರವಾಗಿ ದಾಳಿ ಮಾಡಲು ಸಾಮರ್ಥ್ಯವನ್ನು ಹೊಂದಿದೆ.
ಲೆಬನಾನ್
ಸುಮಾರು 14,000 ಕ್ಷಿಪಣಿಗಳನ್ನು ಪೂರೈಸಲಾಗಿದೆ. 125 ಕಿ.ಮೀನಿಂದ 300 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಈ ಕ್ಷಿಪಣಿಗಳನ್ನು ಲೆಬನಾನ್‌ನ ಹೆಜ್ಬುಲ್ಲಾಗೆ ವರ್ಗಾಯಿಸಲಾಗಿದೆ. ಇದು ಅತಿದೊಡ್ಡ ಪೂರೈಕೆಯಾಗಿದೆ. 2000ರ ದಶಕದ ಆರಂಭದಲ್ಲಿ ಇರಾನ್ ಕ್ಷಿಪಣಿಗಳನ್ನು ಪಡೆದ ಮೊದಲ ಸಂಘಟನೆ ಹೆಜ್ಬುಲ್ಲಾ.
2016ರಿಂದ ಹೆಜ್ಬುಲ್ಲಾದ ಆರ್ಸೆನಲ್ ಅನ್ನು ಅಲ್ಪ ಶ್ರೇಣಿಯ ರಾಕೆಟ್‌ಗಳಿಂದ ಇಸ್ರೇಲ್‌ಗೆ ಭಾರಿ ಹೊಡೆತ ನೀಡುವ ಸಾಮರ್ಥ್ಯವಿರುವ ನಿಖರ-ನಿರ್ದೇಶಿತ ಕ್ಷಿಪಣಿಗಳಿಗೆ ಅಪ್‌ಗ್ರೇಡ್ ಮಾಡಲು ಇರಾನ್ ಪರಿವರ್ತನೆ ಕಿಟ್‌ಗಳನ್ನು ಒದಗಿಸಿದೆ. ಹೆಜ್ಬುಲ್ಲಾ ಇಸ್ರೇಲ್‌ಗೆ ಸಾವಿರಾರು ರಾಕೆಟ್‌ಗಳನ್ನು ಹಾರಿಸಿದೆ. ಆದರೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿಲ್ಲ.
ಯೆಮೆನ್
2015ರಿಂದ ಟೆಹ್ರಾನ್ ಸಣ್ಣ ಮತ್ತು ಮಧ್ಯಮ-ಶ್ರೇಣಿಯ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಪಡೆದುಕೊಂಡಿದೆ. ಇದು 1,950 ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು, ಇದನ್ನು ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರಿಗೆ ವರ್ಗಾಯಿಸಲಾಗಿದೆ.
ಝೈದಿ ಶಿಯಾ ಸೇನೆಯು 2004ರಿಂದ ಸೌದಿ ಬೆಂಬಲಿತ ಕೇಂದ್ರ ಸರ್ಕಾರದ ವಿರುದ್ಧ ಹೋರಾಡುತ್ತಿದೆ. ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ 2015 ರಲ್ಲಿ ವಾಯು ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಅನಂತರ ಹೌತಿಗಳು ಪ್ರಮುಖ ಸೌದಿ ಮತ್ತು ಎಮಿರಾಟಿ ನಗರಗಳ ವಿರುದ್ಧ ಕ್ಷಿಪಣಿ ದಾಳಿ ನಡೆಸಿದರು.
ಇರಾಕ್
ಇರಾನ್ 2018ರಿಂದ ಇರಾಕ್‌ನಲ್ಲಿರುವ ಕಟೈಬ್ ಹೆಜ್ಬುಲ್ಲಾ ಮತ್ತು ಸರಯಾ ಅಲ್ ಜಿಹಾದ್ ಸೇರಿದಂತೆ ಇರಾಕ್‌ನಲ್ಲಿರುವ ಶಿಯಾ ಮಿಲಿಷಿಯಾಗಳಿಗೆ 700 ಕಿ.ಮೀ. ವ್ಯಾಪ್ತಿಯ ಸಾಮರ್ಥ್ಯವಿರುವ ಕಡಿಮೆ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪೂರೈಸಿದೆ. ಈ ಕ್ಷಿಪಣಿಗಳನ್ನು ಪಶ್ಚಿಮ ಮರುಭೂಮಿಯಿಂದ ಉಡಾವಣೆ ಮಾಡಿದರೆ ಇರಾಕ್ ಮೂಲದ ಯುಎಸ್ ಪಡೆಗಳನ್ನು ಹೊಡೆಯಬಹುದು ಮತ್ತು ಇಸ್ರೇಲ್ ಅನ್ನು ತಲುಪಬಹುದು.
2024ರಲ್ಲಿ ಇರಾಕಿನ ಪೊಲೀಸರು ಬಾಬಿಲ್‌ನಲ್ಲಿ ಕುಡ್ಸ್ – 2 ಕ್ರೂಸ್ ಕ್ಷಿಪಣಿ, ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿದರು. ಇದು ಇರಾನ್‌ನ ಸೌಮರ್ ಕ್ರೂಸ್ ಕ್ಷಿಪಣಿಯಾಗಿತ್ತು. ಇದು ಇರಾನ್‌ನಿಂದ ಇರಾಕಿ ಮಿಲಿಟರಿಗಳಿಗೆ ತಂತ್ರಜ್ಞಾನ ಅಥವಾ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಸೂಚಿಸಿದೆ.
ಗಾಜಾ
2024ರ ಜನವರಿಯಲ್ಲಿ ಗಾಜಾ ನಗರದಲ್ಲಿನ ಭೂಗತ ಶಸ್ತ್ರಾಸ್ತ್ರ ಉತ್ಪಾದನಾ ಘಟಕದಲ್ಲಿ ರಾಕೆಟ್ ಎಂಜಿನ್ ಮತ್ತು ಕ್ರೂಸ್ ಕ್ಷಿಪಣಿಯನ್ನು ಇಸ್ರೇಲ್ ಪತ್ತೆ ಹಚ್ಚಿದೆ. ಹಮಾಸ್ ಉಗ್ರ ಸಂಘಟನೆ ಇರಾನಿನ ಮಾರ್ಗದರ್ಶನದಲ್ಲಿ ಶಸ್ತ್ರಾಸ್ತ್ರಗಳನ್ನು ಹೇಗೆ ನಿರ್ವಹಿಸುವುದು ಮತ್ತು ನಿರ್ಮಿಸುವುದು ಎಂದು ಕಲಿತಿದೆ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ಹಮಾಸ್ ಈ ಹಿಂದೆ ಮಾರ್ಗದರ್ಶಿ ಕ್ಷಿಪಣಿಗಳನ್ನು ಬಳಸಿರಲಿಲ್ಲ.
ರಷ್ಯಾ
ಉಕ್ರೇನ್ ವಿರುದ್ಧ ಯುದ್ಧಕ್ಕಾಗಿ ಇರಾನ್ ಅಲ್ಪ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ರಷ್ಯಾಕ್ಕೆ ವರ್ಗಾಯಿಸಿದೆ ಎಂದು ಅಮೆರಿಕ ತಿಳಿಸಿದೆ. ಶ್ವೇತಭವನವು ಶಸ್ತ್ರಾಸ್ತ್ರ ವರ್ಗಾವಣೆಯನ್ನು ದೃಢೀಕರಿಸಲು ನಿರಾಕರಿಸಿತು. ಆದರೆ ಇರಾನ್ ರಷ್ಯಾಕ್ಕೆ ತನ್ನ ಬೆಂಬಲವನ್ನು ಹೆಚ್ಚಿಸುತ್ತಿದೆ ಎಂದು ಅದು ಕಳವಳ ವ್ಯಕ್ತಪಡಿಸಿತ್ತು.
ಇಸ್ರೇಲ್‌ನ ಸೈನ್ಯದಲ್ಲಿ ಏನಿದೆ?
ಇಸ್ರೇಲ್ ಪರಮಾಣು ಶಸ್ತ್ರಾಸ್ತ್ರಗಳನ್ನೂ ಹೊಂದಿದೆ ಎನ್ನಲಾಗಿದೆ. ಆದರೆ ಇದನ್ನು ಇಸ್ರೇಲ್ ಒಪ್ಪಿಕೊಂಡಿಲ್ಲ. ಹಾಗಂತ ನಿರಾಕರಣೆಯನ್ನೂ ಮಾಡಿಲ್ಲ.
ಸೆಂಟರ್ ಫಾರ್ ಆರ್ಮ್ಸ್ ಕಂಟ್ರೋಲ್ ಮತ್ತು ನಾನ್-ಪ್ರೊಲಿಫರೇಷನ್ ಪ್ರಕಾರ ಇಸ್ರೇಲ್ ಸುಮಾರು 90 ಪ್ಲುಟೋನಿಯಂ ಆಧಾರಿತ ಪರಮಾಣು ಮದ್ದುಗುಂಡುಗಳನ್ನು ಹೊಂದಿದೆ. 100- 200 ಶಸ್ತ್ರಾಸ್ತ್ರಗಳಿಗೆ ಸಾಕಷ್ಟು ಪ್ಲುಟೋನಿಯಂ ಅನ್ನು ಉತ್ಪಾದಿಸಿದೆ ಎಂದು ಅಂದಾಜಿಸಲಾಗಿದೆ.
2007ರಲ್ಲಿ ಇಸ್ರೇಲ್ ಅಲ್ ಕಿಬಾರ್ ನಲ್ಲಿ ನಿರ್ಮಾಣ ಹಂತದಲ್ಲಿರುವ ರಿಯಾಕ್ಟರ್ ಮೇಲೆ ಬಾಂಬ್ ದಾಳಿ ನಡೆಸಿತು. ಅಕ್ರಮ ಪರಮಾಣು ಶಸ್ತ್ರಾಸ್ತ್ರಗಳ ಪ್ರಯತ್ನದ ಭಾಗವಾಗಿ ಸಿರಿಯಾ ರಿಯಾಕ್ಟರ್ ಅನ್ನು ನಿರ್ಮಿಸುತ್ತಿದೆ ಎನ್ನುವುದಕ್ಕೆ ಇದು ಪುರಾವೆಯಾಗಿದೆ.
ಇಸ್ರೇಲ್ ರಕ್ಷಣಾ ವ್ಯವಸ್ಥೆಯು ಐರನ್ ಡೋಮ್, ಡೇವಿಡ್ ಸ್ಲಿಂಗ್ ಮತ್ತು ಆರೋ 2 ಮತ್ತು 3 ಅನ್ನು ಒಳಗೊಂಡಿದೆ.
ಇಸ್ರೇಲ್ ವಿನ್ಯಾಸಗೊಳಿಸಿರುವ ಐರನ್ ಡೋಮ್ ಕಡಿಮೆ ಶ್ರೇಣಿಯ ಕ್ಷಿಪಣಿಗಳನ್ನು ತಡೆಯುತ್ತದೆ. ಇದು ವಾಯುಪ್ರದೇಶದ ಮೇಲೆ ಗುರಿ ಇಡುವ ಸಾಮರ್ಥ್ಯವನ್ನು ಹೊಂದಿದೆ. ರಾಕೆಟ್‌ನ ಪಥ, ವೇಗ ಮತ್ತು ನಿರೀಕ್ಷಿತ ಗುರಿಯನ್ನು ಪತ್ತೆಹಚ್ಚಲು ವೇಗ, ಸಂಕೀರ್ಣ ಲೆಕ್ಕಾಚಾರಗಳನ್ನು ಇದು ಮಾಡುತ್ತದೆ.
ಇದನ್ನು ಮೊದಲ ಬಾರಿಗೆ 2011ರ ಮಾರ್ಚ್ ನಲ್ಲಿ ದಕ್ಷಿಣ ನಗರವಾದ ಬೀರ್ಶೆವಾ ಬಳಿ ಪ್ರಯೋಗಿಸಲಾಯಿತು. ಗಾಜಾ ಪಟ್ಟಿಯಿಂದ 40 ಕಿಲೋ ಮೀಟರ್ ಮತ್ತು ಪ್ಯಾಲೇಸ್ಟಿನಿಯನ್ ಪ್ರದೇಶದಿಂದ ಹಾರಿಸಲಾದ ಗ್ರಾಡ್ ರಾಕೆಟ್‌ಗಳನ್ನು ಎದುರಿಸಲು ಇಸ್ರೇಲ್ ಇದನ್ನು ಬಳಸಿದೆ.
ಇಸ್ರೇಲ್ ಬಳಿ ರೆಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ ಮತ್ತು ಅಮೆರಿಕದ ರಕ್ಷಣಾ ದೈತ್ಯ ರೇಥಿಯಾನ್‌ನ ಜಂಟಿ ಯೋಜನೆಯಾದ ಡೇವಿಡ್ಸ್ ಸ್ಲಿಂಗ್ ಕ್ಷಿಪಣಿ ಇದ್ದು, ಇದು 186 ಮೈಲುಗಳಷ್ಟು ದೂರದ ಮೇಲೆ ಗುರಿ ಇಡುವ ಸಾಮರ್ಥ್ಯವನ್ನು ಹೊಂದಿದೆ.
Israel Airstrike: ಇರಾನ್ ಕ್ಷಿಪಣಿ ದಾಳಿಗೆ ತಿರುಗೇಟು- ಹೆಜ್ಬುಲ್ಲಾ ನೆಲೆಗಳನ್ನು ಪುಡಿಗಟ್ಟಿದ ಇಸ್ರೇಲ್
ಇಸ್ರೇಲ್ ಬಳಿ ಇರುವ ಆರೋ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆರೋ 3 ಬಾಹ್ಯಾಕಾಶದಲ್ಲಿ ಒಳಬರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರತಿಬಂಧಿಸಲು ಹಿಟ್-ಟು-ಕಿಲ್ ತಂತ್ರಜ್ಞಾನವನ್ನು ಬಳಸುತ್ತದೆ. ಅತ್ಯಂತ ಎತ್ತರದಲ್ಲಿ ಅವು ಕಾರ್ಯನಿರ್ವಹಿಸುತ್ತವೆ.