Friday, 22nd November 2024

Iran Missile attack: ಮೊಸಾದ್‌ ಪ್ರಧಾನ ಕಚೇರಿ ಸಮೀಪವೇ ಕ್ಷಿಪಣಿ ದಾಳಿ; ಈ ಡೆಡ್ಲಿ ಅಟ್ಯಾಕ್‌ನ ವಿಡಿಯೋ ಇಲ್ಲಿದೆ

Iran Attacks Israel

ಜೆರುಸಲೇಂ: ಇಸ್ರೇಲ್‌ನ ವೈಮಾನಿಕ ದಾಳಿ(Israel Airstrike)ಗೆ ಪ್ರತಿಕಾರವಾಗಿ ಇರಾನ್‌ನ ಕ್ಷಿಪಣಿ ದಾಳಿ(Iran Missile attack)ಯು ಎರಡು ಇಸ್ರೇಲಿ ಸೇನಾ ನೆಲೆಗಳು ಮತ್ತು ಗುಪ್ತಚರ ಇಲಾಖೆ ಮೊಸಾದ್‌ ಪ್ರಧಾನ(Mossad HQ) ಕಚೇರಿಯನ್ನು ಗುರಿಯಾಗಿಸಿ ನಡೆದಿತ್ತು ಎಂಬುದು ಇದೀಗ ಬಯಲಾಗಿದೆ. ಇದಕ್ಕೆ ಪೂರಕ ಎಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೊಸಾದ್‌ ಪ್ರಧಾನ ಕಚೇರಿ ಸಮೀಪದಲ್ಲೇ ಕ್ಷಿಪಣಿ ಬಿದ್ದು, ಆ ಪ್ರದೇಶ ಧ್ವಂಸಗೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ವಿಡಿಯೋದಲ್ಲೇನಿದೆ?

ನಿನ್ನೆ ತಡರಾತ್ರಿ ಇರಾನ್‌ ಸುಮಾರು 200ಕ್ಕೂ ಅಧಿಕ ಕ್ಷಿಪಣಿಗಳನ್ನು ಇಸ್ರೇಲ್‌ ಮೇಲೆ ಸಿಡಿಸಿತ್ತು. ಅದರಲ್ಲಿ ಒಂದು ಕ್ಷಿಪಣಿ ಇಸ್ರೇಲ್‌ನ ಗುಪ್ತಚರ ಇಲಾಖೆ ಮೊಸಾದ್‌ ಪ್ರಧಾನ ಕಚೇರಿ ಕಟ್ಟಡದ ಹೊರಭಾಗಕ್ಕೆ ಅಪ್ಪಳಿಸಿದ್ದು, ಅ ಪ್ರದೇಶದಲ್ಲಿ ಭಾರೀ ಗಾತ್ರದ ಕುಳಿಯನ್ನು ಸೃಷ್ಟಿಸಿದೆ. ಮೊಸಾದ್ ಕಚೇರಿಯಿಂದ ಕೇಲವ 1500ಮೀಟರ್‌ ದೂರದಲ್ಲಿ ಕ್ಷಿಪಣಿ ದಾಳಿ ಸಂಭವಿಸಿದ್ದು, 30 ಅಡಿ ಆಳ ಮತ್ತು 50 ಅಡಿ ಅಗಲದ ಗುಂಡಿ ಸೃಷ್ಟಿಯಾಗಿದೆ. ಇದು ವಸತಿ ಪ್ರದೇಶವಾಗಿದ್ದು, ಇಲ್ಲಿನ ಜನ ಸ್ಥಳಾಂತರಗೊಂಡಿದ್ದಾರೆ.

ಹೆಜ್ಬುಲ್ಲಾವನ್ನು ಗುರಿಯಾಗಿಸಲು ಲೆಬನಾನ್ ಮೇಲೆ ಇಸ್ರೇಲ್‌ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್‌ ಮಂಗಳವಾರ ಇಸ್ರೇಲ್‌ ಮೇಲೆ 200 ಕ್ಷಿಪಣಿಗಳ ದಾಳಿ ಮಾಡಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಇಸ್ರೇಲ್‌, ಈ ಉದ್ಧಟತನಕ್ಕೆ ಇರಾನ್‌ ಬೆಲೆ ತೆರಲೇಬೇಕು ಎಂದು ಹೇಳಿತ್ತು. ಇದರ ಬೆನ್ನಲ್ಲೇ ಹೆಜ್ಬುಲ್ಲಾ ನೆಲೆಗಳನ್ನು ಇಸ್ರೇಲ್‌ ಧ್ವಂಸಗೊಳಿಸಿದೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಇರಾನ್‌ನ ಕ್ಷಿಪಣಿ ದಾಳಿ ಬೆನ್ನಲ್ಲೇ ರಾತ್ರೋರಾತ್ರಿ ಭದ್ರತಾ ಸಚಿವಾಲಯದ ಸಭೆ ಕರೆದಿದ್ದು, ಹಲವು ವಿಚಾರಗಳನ್ನು ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಇರಾನ್‌ ದೊಡ್ಡ ತಪ್ಪು ಮಾಡಿದೆ. ಇದಕ್ಕೆ ತಕ್ಕ ಶಿಕ್ಷೆ ಸಿಕ್ಕೇ ಸಿಗುತ್ತದೆ. ಬಹುದೊಡ್ಡಮಟ್ಟದಲ್ಲಿ ಇರಾನ್‌ ಈ ಕೃತ್ಯಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ. ಆ ಮೂಲಕ ಇರಾನ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇರಾನ್‌ನ ಕ್ಷಿಪಣಿ ದಾಳಿಯು ವಿಫಲವಾಗಿದೆ. ಗಾಜಾ, ಲೆಬನಾನ್ ಮತ್ತು ಇತರ ಸ್ಥಳಗಳಲ್ಲಿ ತನ್ನ ಶತ್ರುಗಳು ಕಲಿತಂತೆ ಇರಾನ್ ಶೀಘ್ರದಲ್ಲೇ ತಕ್ಕ ಪಾಠವನ್ನು ಕಲಿಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ನಮ್ಮ ಮೇಲೆ ಯಾರೇ ದಾಳಿ ಮಾಡಿದರೂ ನಾವು ಅವರ ಮೇಲೆ ದಾಳಿ ಮಾಡುತ್ತೇವೆ ಎಂದರು.

ಇರಾನ್ ಕ್ಷಿಪಣಿ ದಾಳಿಯಿಂದ ಯಾವುದೇ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ ಎಂದು ಇಸ್ರೇಲಿ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ. ಹಗರಿ ದೇಶದ ವಾಯು ರಕ್ಷಣಾ ವಿಭಾಗವು ಒಳಬರುವ ಹಲವು ಕ್ಷಿಪಣಿಗಳನ್ನು ತಡೆಹಿಡಿದಿದೆ ಎಂದರು. ಅದಾಗ್ಯೂ ಜೆರಿಕೊದಲ್ಲಿ ಪ್ಯಾಲೇಸ್ಟಿನಿಯನ್ ಮೂಲದ ವ್ಯಕ್ತಿಯೊಬ್ಬ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Israel Airstrike: ಇರಾನ್‌ ಕ್ಷಿಪಣಿ ದಾಳಿಗೆ ತಿರುಗೇಟು- ಹೆಜ್ಬುಲ್ಲಾ ನೆಲೆಗಳನ್ನು ಪುಡಿಗಟ್ಟಿದ ಇಸ್ರೇಲ್‌