Tuesday, 26th November 2024

Israel-Hezbollah: ಇಸ್ರೇಲ್-ಹೆಜ್ಬುಲ್ಲಾ ಯುದ್ಧಕ್ಕೆ ಬೀಳುತ್ತಾ ಬ್ರೇಕ್? ಕದನ ವಿರಾಮಕ್ಕೆ ಮುಂದಾದ ಇಸ್ರೇಲ್‌! ಇಂದು ಮಹತ್ವದ ಸಭೆ

Israel-Hezbollah

ಜೆರುಸಲೇಂ: ಕಳೆದು ಒಂದು ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ಇಸ್ರೇಲ್‌ ಹಾಗೂ ಹೆಜ್ಬುಲ್ಲಾ (Israel-Hezbollah) ನಡುವಿನ ಯುದ್ಧ ಕೊನೆಗೂ ಅಂತ್ಯವಾಗುವ ಸೂಚನೆ ಸಿಕ್ಕಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲಿ ಅಧಿಕಾರಿಗಳೊಂದಿಗೆ ಭದ್ರತಾ ಸಮಾಲೋಚನೆಯ ನಂತರ  ಮಂಗಳವಾರ ಕದನ ವಿರಾಮಕ್ಕೆ (Ceasefire deal with Hezbollah) ಸಹಿ ಹಾಕುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಇಸ್ರೇಲ್‌ ಸರ್ಕಾರದ ವಕ್ತಾರರು, ‘ನಾವು ಒಪ್ಪಂದದತ್ತ ಸಾಗುತ್ತಿದ್ದೇವೆ, ಆದರೆ ಇನ್ನೂ ಕೆಲವು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ’ ಎಂದು ಹೇಳಿದ್ದಾರೆ. ವರದಿಯ ಪ್ರಕಾರ ಕದನ ವಿರಾಮದ ಮಧ್ಯವಹಿಸ್ಥಿಕೆಯನ್ನು ಅಮೆರಿಕಾ ವಹಿಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ. ಈ ಪ್ರಸ್ತಾಪ ಚರ್ಚೆಯಾದ ನಂತರ ಹಿಜ್ಬುಲ್ಲಾ ರಾಕೆಟ್‌ ದಾಳಿಯನ್ನು ನಿಲ್ಲಿಸಿದೆ ಎಂದು ಹೇಳಲಾಗಿದೆ.

ಕದನ ವಿರಾಮ ಮಾತುಕತೆಯ ಅಂಶಗಳು:

  • ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ದೀರ್ಘಕಾಲದ ಯುದ್ಧದಲ್ಲಿ ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ವಿಶ್ವಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಕದನ ವಿರಾಮಕ್ಕಾಗಿ ಒತ್ತಾಯಿಸುತ್ತಿರುವುದರಿಂದ ಕದನ ವಿರಾಮ ಒಪ್ಪಂದದ ಕುರಿತು ನಿರ್ಧರಿಸಲು ಇಸ್ರೇಲಿ ಅಧಿಕಾರಿಗಳು ಮಂಗಳವಾರ ಸಂಜೆ ಸಭೆ ಸೇರಲಿದ್ದಾರೆ.
  • ಈ ತಿಂಗಳ ಆರಂಭದಲ್ಲಿ, ಇಸ್ರೇಲ್-ಹಮಾಸ್ ಯುದ್ಧದ ಕದನ ವಿರಾಮದ ಪ್ರಮುಖ ಭಾಗವಾಗಿದ್ದ ಕತಾರ್ ಹಿಂದೆ ಸರಿದಿತ್ತು. ಇನ್ನು ಮುಂದೆ ತಾನು ಯಾವುದೇ ಸಹಾಯ ಮಾಡುವುದಿಲ್ಲ ಎಂದು ಹೆಜ್ಬುಲ್ಲಾಗೆ ಹೇಳಿತ್ತು.
  • ಕದನ ವಿರಾಮ ಒಪ್ಪಂದದ ನಂತರ ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನ್‌ನಿಂದ ಹಿಂದೆ ಸರಿಯಲಿವೆ ಎಂದು ತಿಳಿದು ಬಂದಿದೆ.
  • ಯುದ್ಧದ ನಡುವೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ನೆತನ್ಯಾಹುಗೆ ಬಂಧನ ವಾರಂಟ್ ಹೊರಡಿಸಿತ್ತು. ಇದೂ ಕೂಡ ಕದನ ವಿರಾಮಕ್ಕೆ ಸಹಿ ಮಾಡಲು ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.
  • ಗಾಜಾ ಪಟ್ಟಿ, ಲೆಬನಾನ್‌, ಇರಾನ್‌ ಗಡಿಗಳಲ್ಲಿ ಯುದ್ಧ ಮಾಡುತ್ತಿರುವ ಇಸ್ರೇಲ್‌ ಸೈನಿಕರ ಕೊರತೆಯನ್ನು ಎದುರಿಸುತ್ತಿದೆ.

ಭಾನುವಾರ ಲೆಬನಾನ್‌ನಿಂದ ಹಿಜ್ಬುಲ್ಲಾ, ಇಸ್ರೇಲ್‌ನ ಭೂ ಪ್ರದೇಶಕ್ಕೆ ಸುಮಾರು 250 ರಾಕೆಟ್‌ಗಳ ದಾಳಿ ನಡೆಸಿತ್ತು. (Rockets Attacks On Isreal). ಡೆಡ್ಲಿ ಡ್ರೋನ್‌ ಹಾಗೂ ಇತರ ಸ್ಫೋಟಕಗಳಿಂದ ಇಸ್ರೇಲ್‌ ಮೇಲೆ ಆಕ್ರಮಣ ಮಾಡಿತ್ತು. ಇಸ್ರೇಲ್‌ ಪ್ರಮುಖ ನಗರವಾದ ಟೆಲ್ ಅವಿವ್ ಮತ್ತು ದಕ್ಷಿಣ ಇಸ್ರೇಲ್ ಸೇರಿದಂತೆ ಇತರ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿತ್ತು. ಇತ್ತೀಚೆಗೆ ಇಸ್ರೇಲ್‌ ಬೈರೂತ್‌ ನಗರದ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಹಿಜ್ಬುಲ್ಲಾ ಈ ಪ್ರತಿದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Israel Airstrike: ಇರಾನ್‌ ಮೇಲೆ ಇಸ್ರೇಲ್‌ ಎರಡನೇ ಏರ್‌ಸ್ಟ್ರೈಕ್‌; ಇಲ್ಲಿದೆ ಭೀಕರ ದಾಳಿಯ ವಿಡಿಯೋ