Friday, 20th September 2024

Israel-Palestine War: ಒತ್ತೆಯಾಳುಗಳನ್ನು ಸುರಂಗದಲ್ಲಿ ಕೂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ ಹಮಾಸ್‌ ಉಗ್ರರು; ವೀಡಿಯೊ ಇಲ್ಲಿದೆ

Israel-Palestine War

ಗಾಜಾ: ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ (Israel-Palestine War) ನಡುವೆ ಯುದ್ಧ ಮುಂದವರಿದಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಇದೀಗ ಇಸ್ರೇಲ್‌ನ ಸೈನಿಕರು ಹಮಾಸ್‌ ಉಗ್ರರ ಭೀಕರತೆಯನ್ನು ಸಾರುವ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವೀಡಿಯೊದಲ್ಲಿ ಕಬ್ಬಿಣದ ಬಾಗಿಲಿನಿಂದ ಮುಚ್ಚಿದ ಕತ್ತಲೆ, ಇಕ್ಕಟ್ಟಾದ ಸುರಂಗದ ನೆಲದ ಮೇಲೆ ರಕ್ತದ ಕಲೆ ಕಂಡು ಬಂದಿದೆ. ಜೊತೆಗೆ ಗುಂಡುಗಳು ಸುತ್ತ ಚೆಲ್ಲಾಡಿರುವುದನ್ನೂ ನೋಡಬಹುದು. ಈ ಭೂಗತ ಸುರಂಗದಲ್ಲಿ ಹಮಾಸ್ ಉಗ್ರರು 6 ಒತ್ತೆಯಾಳುಗಳನ್ನು ಸೆರೆಹಿಡಿದು ಹತ್ಯೆ ಮಾಡಿದ್ದಾರೆ ಎಂದು ಇಸ್ರೇಲ್‌ ಹೇಳಿದೆ (Viral Video).

ಈ ವಿಡಿಯೋವನ್ನು ಸೆಪ್ಟೆಂಬರ್‌ 6ರಂದು ಯೋಧರು ಚಿತ್ರೀಕರಿಸಿದ್ದಾರೆ. ಆಗಸ್ಟ್ 29ರ ರಾತ್ರಿ 6 ಒತ್ತೆಯಾಳುಗಳನ್ನು ಹತ್ಯೆ ಮಾಡಲಾಗಿತ್ತು ಎಂದು ಇಸ್ರೇಲ್ ರಕ್ಷಣಾ ಪಡೆ (Israel Defense Forces)ಯ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ (Rear Admiral Daniel Hagari) ತಿಳಿಸಿದ್ದಾರೆ. ದಕ್ಷಿಣ ಗಾಜಾದ ರಾಫಾ ಪ್ರದೇಶದಲ್ಲಿ 6 ಮಂದಿಯ ಶವ ಪತ್ತೆಯಾಗಿತ್ತು.

”ನೆಲದಿಂದ ಸುಮಾರು 20 ಮೀಟರ್ (66 ಅಡಿ) ಕೆಳಗೆ ಇರುವ, 170 ಸೆಂಟಿಮೀಟರ್ (5.6 ಅಡಿ) ಎತ್ತರ ಮತ್ತು ಸುಮಾರು 80 ಸೆಂಟಿಮೀಟರ್ (32 ಇಂಚು) ಅಗಲವಿರುವ ಸುರಂಗದಲ್ಲಿ ಕನಿಷ್ಠ ಇಬ್ಬರು ಹಮಾಸ್ ಬಂದೂಕುಧಾರಿಗಳು ಈ ಒತ್ತೆಯಾಳುಗಳನ್ನು ಗುಂಡಿಕ್ಕಿ ಕೊಂದಿದ್ದಾರೆ” ಎಂದು ಡೇನಿಯಲ್ ಹಗರಿ ವಿವರಿಸಿದ್ದಾರೆ. ”ಒತ್ತೆಯಾಳುಗಳನ್ನು ಉಗ್ರರು ಈ ಇಕ್ಕಟ್ಟಾದ ಸುರಂಗದಲ್ಲಿ ಕೂಡಿ ಹಾಕುತ್ತಾರೆ. ಅಲ್ಲಿ ಉಸಿರಾಡಲು ಮತ್ತು ನೇರವಾಗಿ ನಿಲ್ಲಲು ಕಷ್ಟವಾಗುತ್ತದೆ. ಇದು ಅಕ್ಷರಶಃ ನರಕ ಸದೃಶʼʼ ಎಂದು ಅವರು ಮಾಹಿತಿ ನೀಡಿದ್ದಾರೆ.

ನರಕ ದರ್ಶನ

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವೀಡಿಯೊದಲ್ಲಿ ಮೂತ್ರ ತುಂಬಿದ ಪ್ಲಾಸ್ಟಿಕ್ ಬಾಟಲಿಗಳನ್ನು ಹೊಂದಿರುವ ಚೀಲಗಳು ಕಂಡು ಬರುತ್ತಿದೆ. ಬಕೆಟ್‌ಗೆ ರಂಧ್ರ ಕೊರೆದು ಅದನ್ನು ಶೌಚಾಲಯವಾಗಿ ಬಳಸಲಾಗಿದೆ. ಜೊತೆಗೆ ಮಹಿಳೆಯರ ಬಟ್ಟೆ ನೆಲದ ಮೇಲೆ ಹರಡಿಕೊಂಡಿದೆ. ಒಟ್ಟಿನಲ್ಲಿ ಈ ವೀಡಿಯೊ ಮೂಲಕ ನರಕದ ದರ್ಶನವಾಗುತ್ತಿದೆ. ಜೊತೆಗೆ ಹಮಾಸ್‌ ಉಗ್ರರ ಮೃಗೀಯತೆ ಮತ್ತೊಮ್ಮೆ ಅನಾವರಣಗೊಂಡಿದೆ.

ಹಮಾಸ್‌ ಉಗ್ರರು ಅಪಹರಿಸಿದ ಹರ್ಷ್ ಗೋಲ್ಡ್ ಬರ್ಗ್-ಪೋಲಿನ್ (23), ಈಡನ್ ಯೆರುಶಾಲ್ಮಿ (24), ಓರಿ ಡ್ಯಾನಿನೊ (25), ಅಲೆಕ್ಸ್ ಲೊಬನೊವ್ (32), ಕಾರ್ಮೆಲ್ ಗ್ಯಾಟ್ (40) ಮತ್ತು ಅಲ್ಮೋಗ್ ಸರೂಸಿ (27) ಅವರ ಶವಗಳು ಗಾಜಾದ ದಕ್ಷಿಣ ನಗರದ ರಾಫಾ ಸುರಂಗದಲ್ಲಿ ಪತ್ತೆಯಾಗಿತ್ತು. 2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ದಾಳಿಯಲ್ಲಿ ಹಮಾಸ್ ಉಗ್ರಗಾಮಿಗಳು ಸುಮಾರು 1,200 ಜನರನ್ನು ಹತ್ಯೆಗೈದು ಸುಮಾರು 250 ಮಂದಿಯನ್ನು ಅಪಹರಿಸಿದ ಬಳಿಕ ಇಸ್ರೇಲ್‌-ಪ್ಯಾಲಸ್ತೀನ್‌ ಯುದ್ಧ ಆರಂಭವಾಗಿತ್ತು. ಅಂದಿನಿಂದ ಕನಿಷ್ಠ 40,738 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Israel-Hamas Conflict: 6 ಮಂದಿ ಒತ್ತೆಯಾಳುಗಳ ಶವ ಪತ್ತೆಯಾದ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಭುಗಿಲೆದ್ದ ಆಕ್ರೋಶ