Tuesday, 7th January 2025

Justin Trudeau : ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಶೀಘ್ರದಲ್ಲೇ ರಾಜೀನಾಮೆ?

Justin Trudeau

ಟೊರೆಂಟೊ: ಕೆನಡಾದ ಪ್ರಧಾನಿ (Canada Prime Minister) ಜಸ್ಟಿನ್ ಟ್ರುಡೊ (Justin Trudeau) ಅವರು ಪ್ರಧಾನಿ ಹುದ್ದೆಗೆ ಹಾಗೂ ಲಿಬರಲ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಪಕ್ಷದೊಳಗೆ ಆಂತರಿಕ ಬಿಕ್ಕಟ್ಟು ಎದುರಿಸುತ್ತಿರುವ ಕಾರಣ ಈ ವಾರ ಅವರು ರಾಜೀನಾಮೆ ನೀಡಬಹುದು ಎಂದು ತಿಳಿದು ಬಂದಿದೆ. ಟ್ರೂಡೊ ತಕ್ಷಣವೇ ರಾಜೀನಾಮೆ ನೀಡುತ್ತಾರೋ ಅಥವಾ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಪ್ರಧಾನಿಯಾಗಿ ಮುಂದುವರಿಯುತ್ತಾರೋ ಎಂಬುದು ಸ್ಪಷ್ಟವಾಗಿಲ್ಲ.

ಟ್ರುಡೋ ಅವರು 2013 ರಲ್ಲಿ ಲಿಬರಲ್ (Liberal Party) ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಟ್ರೂಡೊ 2015 ರಲ್ಲಿ ವಿಜಯವನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದರು. ಅದರ ಬಳಿಕ, 2019 ಮತ್ತು 2021 ರಲ್ಲೂ ಅವರು ತಮ್ಮ ಪಕ್ಷದ ಲಿಬರಲ್ಸ್ ಅನ್ನು ವಿಜಯದತ್ತ ಮುನ್ನಡೆಸಿದರು.

ಈಗ ಟ್ರುಡೊ ನೇತೃತ್ವದಲ್ಲಿ ಕೆನಡಾದಲ್ಲಿ ತಮ್ಮ ಸೋಲು ಖಚಿತ ಎಂಬ ಭಾವನೆ ಲಿಬರಲ್ ಪಕ್ಷಕ್ಕೆ ಶುರುವಾಗಿದೆ. ಆದ್ದರಿಂದ, ಈಗ ಟ್ರೂಡೊ ಪ್ರಧಾನಿ ಹುದ್ದೆಯನ್ನು ಕಳೆದುಕೊಳ್ಳುವ ಅಪಾಯ ಎದುರಾಗಿದೆ. ಸಮೀಕ್ಷೆಗಳ ಪ್ರಕಾರ, ಪ್ರಸ್ತುತ ಅವರು ತಮ್ಮ ಪ್ರಮುಖ ಪ್ರತಿಸ್ಪರ್ಧಿ ಕನ್ಸರ್ವೇಟಿವ್ ಪಕ್ಷದ ಪಿಯರೆ ಪೊಯಿಲಿವ್ರೆಗಿಂತ 20 ಪಾಯಿಂಟ್‌ಗಳಿಂದ ಹಿಂದುಳಿದಿದ್ದಾರೆ. ರಾಷ್ಟ್ರೀಯ ಕಾಕಸ್ ಸಭೆಯಲ್ಲಿ ಟ್ರುಡೊ ಬಂಡಾಯ ಎದುರಿಸಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

ಯಾರಾಗ್ತಾರೆ ಮುಂದಿನ ಪ್ರಧಾನಿ ?

ಫ್ರೀಲ್ಯಾಂಡ್, ಲೆಬ್ಲಾಂಕ್, ಕೆನಡಾದ ಮಾಜಿ ವಸತಿ ಸಚಿವ ಸೀನ್ ಫ್ರೇಸರ್, ವಿದೇಶಾಂಗ ಸಚಿವೆ ಮೆಲಾನಿ ಜೋಲಿ, ನಾವೀನ್ಯತೆ ಸಚಿವ ಫ್ರಾಂಕೋಯಿಸ್-ಫಿಲಿಪ್ ಶಾಂಪೇನ್, ಸಾರಿಗೆ ಸಚಿವೆ ಅನಿತಾ ಆನಂದ್, ಮಾಜಿ ಸೆಂಟ್ರಲ್ ಬ್ಯಾಂಕರ್ ಮಾರ್ಕ್ ಕಾರ್ನಿ ಮತ್ತು ಬ್ರಿಟಿಷ್ ಕೊಲಂಬಿಯಾದ ಮಾಜಿ ಪ್ರೀಮಿಯರ್ ಕ್ರಿಸ್ಟಿ ಕ್ಲಾರ್ಕ್ ಪ್ರಧಾನಿ ರೇಸ್‌ನಲ್ಲಿದ್ದಾರೆ.

ಈ ಹಿಂದೆ ಅಕ್ಟೋಬರ್ 28ರ ಒಳಗೆ ಜಸ್ಟಿನ್ ಟ್ರುಡೊ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒಟ್ಟು 24 ಸಂಸದರು ಆಗ್ರಹಿಸಿದ್ದರು. ಈ ಸಂಬಂಧ ಪತ್ರ ಬರೆದು ಸಹಿಯನ್ನೂ ಹಾಕಿದ್ದರು. ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಕಳಪೆ ಪ್ರದರ್ಶನ ಹಾಗೂ ಜಸ್ಟಿನ್ ಟ್ರುಡೊ ಅವರ ನಾಯಕತ್ವದ ಕುರಿತಾಗಿ ಸ್ವಪಕ್ಷೀಯರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಧಾನ ಮಂತ್ರಿಯಾಗಿ ತಮ್ಮ ಸುದೀರ್ಘ 9 ವರ್ಷಗಳ ಆಳ್ವಿಕೆಯಲ್ಲಿ ಇದೇ ಮೊದಲ ಬಾರಿಗೆ ಜಸ್ಟಿನ್ ಟ್ರುಡೊ ಭಾರೀ ರಾಜಕೀಯ ಒತ್ತಡಕ್ಕೆ ಸಿಲುಕಿದ್ದಾರೆ.

ಈ ಸುದ್ದಿಯನ್ನೂ ಓದಿ : Justin Trudeau: ಕೆನಡಾ ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಜ್ಜಾದ ಎನ್‌ಡಿಪಿ; ರಾಜಿನಾಮೆ ನೀಡ್ತಾರಾ ಟ್ರುಡೋ ?

Leave a Reply

Your email address will not be published. Required fields are marked *