Thursday, 26th December 2024

Kazakhstan plane crash: ಕಜಕಿಸ್ತಾನದ ವಿಮಾನ ಪತನಕ್ಕೂ ಮುನ್ನ ಏನಾಗಿತ್ತು? ವಿಡಿಯೋ ವೈರಲ್‌

Kazakhstan plane crash

ಆಸ್ತಾನಾ: ಕಜಕಿಸ್ತಾನದಲ್ಲಿ ಬುಧವಾರ ಭೀಕರ ವಿಮಾನ ಅಪಘಾತವೊಂದು ಸಂಭವಿಸಿದ್ದು, (Kazakhstan plane crash) ಸುಮಾರು 70ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನ ಪತನವಾಗಿದೆ. ಘಟನೆಯಲ್ಲಿ ಕನಿಷ್ಟ 30 ಮಂದಿ ಮೃತಪಟ್ಟಿರುವುದು ತಿಳಿದು ಬಂದಿದೆ. ಇದೀಗ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಅಪಘಾತಕ್ಕೂ ಮುನ್ನ ಸೆರೆ ಹಿಡಿದಿದ್ದ ವಿಡಿಯೋ ವೈರಲ್‌ ಆಗಿದೆ. (Viral Video)

70ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನ ಬಕು ನಗರದಿಂದ ರಷ್ಯಾದ ಗ್ರೋಜ್ನಿ ನಗರಕ್ಕೆ ಪ್ರಯಾಣ ಬೆಳೆಸಿತ್ತು. ಆದರೆ ಕಜಕಿಸ್ತಾನದ ಅಕ್ತಾವು ಬಳಿ ವಿಮಾನ ಏಕಾಏಕಿ ಪತನಗೊಂಡಿದೆ.

ವಿಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿಯೊಬ್ಬರು ಕ್ಯಾಬಿನ್ ಅನ್ನು ತೋರಿಸಿದರು ಮತ್ತು ವಿಮಾನವು ಏಕಾಏಕಿ ಇಳಿಮುಖವಾಗುತ್ತಿದ್ದಂತೆ ‘ಅಲ್ಲಾಹು ಅಕ್ಬರ್’ ಎಂದು ಹೇಳುವುದು ಕೇಳಿಸುತ್ತದೆ. ವೀಡಿಯೊದಲ್ಲಿ, ಭಯಭೀತರಾದ ಪ್ರಯಾಣಿಕರು ಪ್ರಾರ್ಥಿಸುವುದು ಮತ್ತು ಕೂಗುವುದು ಕೇಳಿಸಿತು. ಹಿನ್ನಲೆಯಲ್ಲಿ ‘ವೇರ್ ಸೀಟ್‌ಬೆಲ್ಟ್’ ಲೈಟ್‌ನ ಶಬ್ದವೂ ಕೇಳಿಸುತ್ತದೆ.

ಮೂಲಗಳ ಪ್ರಕಾರ ದಟ್ಟ ಮಂಜಿನ ಕಾರಣ ವಿಮಾನದ ಮಾರ್ಗ ಕೊನೆಯ ಕ್ಷಣದಲ್ಲಿ ಬದಲಾಯಿಸಲಾಗಿತ್ತು. ರಷ್ಯಾದ ಗ್ರೋಜ್ನಿಗೆ ಹೊರಟಿದ್ದ ವಿಮಾನಕ್ಕೆ ಮಾರ್ಗ ಬದಲಾವಣೆ ಸೂಚನೆ ನೀಡಲಾಗಿತ್ತು. ಗ್ರೋಜ್ನಿಯಲ್ಲಿ ದಟ್ಟ ಮಂಜು ಆವರಿಸಿರುವ ಕಾರಣ ವಿಮಾನ ಹಾರಾಟ ಸವಾಲಾಗುವ ಸಾಧ್ಯತೆ ಇದೆ. ಹೀಗಾಗಿ ಮಾರ್ಗ ಬದಲಾವಣೆಗೆ ಸೂಚಿಸಲಾಗಿತ್ತು.

ಆದರೆ ಅಕ್ತಾವು ಬಳಿ ವಿಮಾನ ಆಗಸದಲ್ಲೇ ಕೆಲ ಸುತ್ತು ಹೊಡದಿದೆ. ಪೈಲೆಟ್‌, ವಿಮಾನವನ್ನು ಲ್ಯಾಂಡಿಂಗ್ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಲ್ಯಾಂಡಿಂಗ್ ಸಾಧ್ಯವಾಗಿಲ್ಲ. ನೇರವಾಗಿ ವಿಮಾನ ನೆಲಕ್ಕೆ ಅಪ್ಪಳಿಸಿದೆ. ಇದರ ಪರಿಣಾಮ ವಿಮಾನ ಪತನಗೊಂಡಿದೆ.

ಇನ್ನು ವಿಮಾನ ಪತನಕ್ಕೆ ಕಾರಣಗಳು ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ದಟ್ಟ ಮಂಜು ಅಥವಾ ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗುತ್ತಿದ್ದರೂ ವಿಮಾನ ಹೈಜಾಕ್ ಮಾಡಿರುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆಯೂ ಕೂಲಂಕುಷ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Kazakhstan plane crash: 70ಕ್ಕೂ ಅಧಿಕ ಪ್ರಯಾಣಿಕರಿದ್ದ ವಿಮಾನ ಪತನ- ವಿಡಿಯೊ ಇದೆ