Monday, 25th November 2024

Krishna Das Brahmachari: ಬಾಂಗ್ಲಾದೇಶದ ಇಸ್ಕಾನ್ ನಾಯಕ ಕೃಷ್ಣ ದಾಸ್‌ ಬ್ರಹ್ಮಚಾರಿ ಬಂಧನ

Krishna Das Brahmachari

ಢಾಕಾ: ಬಾಂಗ್ಲಾದೇಶದ ಹಿಂದೂ ಮುಖಂಡ, ಇಸ್ಕಾನ್‌ (ISKCON) ಸದಸ್ಯ ಕೃಷ್ಣ ದಾಸ್‌ ಬ್ರಹ್ಮಚಾರಿ (Krishna Das Brahmachari) ಅವರನ್ನು ಢಾಕಾ ವಿಮಾನ ನಿಲ್ದಾಣದಿಂದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಪರ ವಕೀಲರಾಗಿ ಜನಪ್ರಿಯರಾಗಿದ್ದಾರೆ.

ʼʼಹಿಂದೂಗಳ ಮೇಲೆ ಮುಸ್ಲಿಮರು ನಡೆಸುವ ದಾಳಿಯನ್ನು ಖಂಡಿಸಿ ಚಿನ್ಮೋಯ್ ಕೃಷ್ಣ ದಾಸ್‌ ಬ್ರಹ್ಮಚಾರಿ (ಕೃಷ್ಣ ದಾಸ್‌ ಪ್ರಭು) ಬೃಹತ್‌ ಪ್ರತಿಭಟನೆ ಮತ್ತು ರ‍್ಯಾಲಿ ಆಯೋಜಿಸಿದ್ದಾರೆ. ಅಲ್ಲದೆ ಹಿಂದೂಗಳ ಮೇಲಿನ ದೌರ್ಜನ್ಯ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಅವರನ್ನು ಬಂಧಿಸಲಾಗಿದೆʼʼ ಎಂದು ಹೋರಾಟಗಾರರು ತಿಳಿಸಿದ್ದಾರೆ. ಇದಕ್ಕೂ ಮೊದಲು ಬಾಂಗ್ಲಾ ದೇಶದ ಅಧಿಕಾರಿಗಳು ಬ್ರಹ್ಮಚಾರಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು. ಸದ್ಯ ಅವರ ಬಂಧನದ ಕುರಿತು ಅಧಿಕಾರಿಗಳು ಅದಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಯಾರು ಈ ಕೃಷ್ಣ ದಾಸ್‌ ಬ್ರಹ್ಮಚಾರಿ?

ಕೃಷ್ಣ ದಾಸ್ ಬ್ರಹ್ಮಚಾರಿ ಅವರು ಇಸ್ಕಾನ್ ಹಿಂದೂ ಸಂಘಟನೆಯ ಸ್ಥಾಪಕರಲ್ಲಿ ಒಬ್ಬರು ಮತ್ತು ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಪ್ರಮುಖ ವಕೀಲರು. ಅವರು ಸನಾತನ ಜಾಗರಣ್ ಮಂಚ್‌, ಬಾಂಗ್ಲಾದೇಶದ ಸನಾತನ ಜಾಗರಣ್ ಮಂಚ್‌ ಇದರ ವಕ್ತಾರರು ಮತ್ತು ಪುಂಡರಿಕ್ ಧಾಮ್‌ನ ಪ್ರಾಂಶುಪಾಲರು. ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಬಗ್ಗೆ ಅವರು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ.

ಕೆಲವು ತಿಂಗಳ ಹಿಂದೆ ಪ್ರಧಾನಿ ಶೇಕ್‌ ಹಸೀನಾ ಪಲಾಯನ ಮಾಡಿದ ಬಳಿಕ ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಅಧಿಕವಾಗಿದೆ. ಅಲ್ಪ ಸಂಖ್ಯಾತರಿಗೆ ಸಂರಕ್ಷಣೆ ಒದಗಿಸಲು ವಿಫಲರಾದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ವಿರುದ್ದ ವ್ಯಾಪಕ ಟೀಕೆ ಕೇಳಿ ಬಂದಿದೆ. ಕೃಷ್ಣ ದಾಸ್‌ ಅವರು ಬಾಂಗ್ಲಾದಲ್ಲಿನ ಹಿಂದೂಗಳ ಪ್ರಮುಖ ನಾಯಕರಾಗಿದ್ದು, ದೌರ್ಜನ್ಯವನ್ನು ಕಟುವಾದ ಶಬ್ದಗಳಲ್ಲಿ ಟೀಕಿಸುತ್ತಾರೆ. ಸದ್ಯ ಅವರ ಬಂಧನ ಹಿಂದೂಗಳಿಗೆ ಆತಂಕ ತಂದಿತ್ತಿದೆ. ಅವರನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಕಳೆದ ತಿಂಗಳು ಆಯೋಜಿಸಿದ್ದ ಬೃಹತ್‌ ರ‍್ಯಾಲಿಯಲ್ಲಿ ಮಾತನಾಡಿದ್ದ ಇಸ್ಕಾನ್ ನಾಯಕ ಕೃಷ್ಣ ದಾಸ್‌ ಅವರು, “ಯಾರಾದರೂ ನಮ್ಮನ್ನು ಈ ದೇಶದಿಂದ ಹೊರಹಾಕಲು ಬಯಸಿದರೆ ಇದು ಅಫ್ಘಾನಿಸ್ತಾನ ಅಥವಾ ಸಿರಿಯಾ ಆಗುತ್ತದೆ. ಬಾಂಗ್ಲಾದೇಶವು ಕೋಮುವಾದದ ಅಭಯಾರಣ್ಯವಾಗಲಿದೆʼʼ ಎಂದು ಗುಡುಗಿದ್ದರು.

ಇಸ್ಕಾನ್ ನಿಷೇಧಿಸಲು ಆಗ್ರಹ

ಕೆಲವು ದಿನಗಳ ಹಿಂದೆ ಬಾಂಗ್ಲಾದೇಶದ ಚಿತ್ತಗಾಂಗ್ ಮೂಲದ ಇಸ್ಲಾಮಿಕ್ ಸಂಘಟನೆ ಹೆಫಾಜತ್-ಎ-ಇಸ್ಲಾಂ, ಇಸ್ಕಾನ್ ಅನ್ನು ನಿಷೇಧಿಸುವಂತೆ ಆಗ್ರಹಿಸಿತ್ತು. ಲೇಖಕಿ ತಸ್ಲೀಮಾ ನಸ್ರೀನ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ, ಚಟ್ಟೋಗ್ರಾಮ್‌ನಲ್ಲಿ ಇತ್ತೀಚೆಗೆ ನಡೆದ ಜಾಥಾದಲ್ಲಿ, ‘ಇಸ್ಕಾನ್ ಅನ್ನು ನಿಷೇಧಿಸಿ, ಇಲ್ಲವೇ ಭಕ್ತರನ್ನು ಕೊಲ್ಲುತ್ತೇವೆ’ ಎಂಬ ಹಿಂಸಾತ್ಮಕ ಘೋಷಣೆಗಳನ್ನು ಕೂಗಲಾಗಿದೆ. ಆದರೆ ಮುಹಮ್ಮದ್ ಯೂನಸ್ ಅವರು ತಮ್ಮ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಯನ್ನು ತಳ್ಳಿ ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ: Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂಗಳ ಬೃಹತ್‌ ರ‍್ಯಾಲಿ; ವಿವಿಧ ಬೇಡಿಕೆಗಳಿಗೆ ಒತ್ತಾಯ