Thursday, 19th September 2024

Lebanon Pager Explosions: ಸ್ಮಾರ್ಟ್‌ಫೋನ್‌ ಕಾಲದಲ್ಲೂ ಹೆಜ್ಬೊಲ್ಲಾ ಉಗ್ರರು ಇನ್ನೂ ಪೇಜರ್‌ಗಳನ್ನೇ ಬಳಸುತ್ತಿರುವುದೇಕೆ?

Lebanon Pager Explosions

ನೂರಾರು ಲೆಬೆನಾನ್‌ಗಳ ಪೇಜರ್‌ ಸ್ಫೋಟ (Lebanon Pager Explosions) ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಸಾಕಷ್ಟು ಆಧುನಿಕ ತಂತ್ರಜ್ಞಾನಗಳು ವಿಶ್ವದಾದ್ಯಂತ ಬಳಕೆಯಾಗುತ್ತಿದ್ದರೂ ಹೆಜ್ಬೊಲ್ಲಾ ಸದಸ್ಯರು (Hezbollah members) ಇನ್ನೂ ಏಕೆ ಸಂವಹನ (communication) ಸಾಧನವಾಗಿ ಪೇಜರ್ ಬಳಸುತ್ತಿದ್ದಾರೆ ಎನ್ನುವ ಪ್ರಶ್ನೆಗಳು ಎಲ್ಲರನ್ನೂ ಕಾಡತೊಡಗಿದೆ.

ಲೆಬೆನಾನ್‌ನಾದ್ಯಂತ ಹೆಜ್ಬೊಲ್ಲಾ ಸದಸ್ಯರು ಬಳಸುತ್ತಿದ್ದ ನೂರಕ್ಕೂ ಹೆಚ್ಚು ಪೇಜರ್‌ಗಳು ಮಂಗಳವಾರ ಮಧ್ಯಾಹ್ನ ಏಕಕಾಲದಲ್ಲಿ ಸ್ಫೋಟಗೊಂಡ ಪರಿಣಾಮ 8 ವರ್ಷದ ಬಾಲಕಿ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ದಹಿಯೆಹ್ ಎಂದು ಕರೆಯಲ್ಪಡುವ ಬೈರುತ್‌ನ ದಕ್ಷಿಣ ಉಪನಗರ ಮತ್ತು ಉಗ್ರಗಾಮಿ ಗುಂಪಿನ ಭದ್ರಕೋಟೆಗಳಾದ ಪೂರ್ವ ಬೆಕಾ ಕಣಿವೆಯಲ್ಲಿ ಮಧ್ಯಾಹ್ನದ ವೇಳೆಗೆ ಈ ಸ್ಫೋಟ ಸಂಭವಿಸಿದೆ.

ಇರಾನ್‌ನ ಬೆಂಬಲ ಪಡೆದಿರುವ ಹೆಜ್ಬೊಲ್ಲಾ ಸಂಘಟನೆ ಈ ದಾಳಿಗೆ ಇಸ್ರೇಲ್ ಕಾರಣ ಎಂದು ಆರೋಪಿಸಿದೆ. ನಾಗರಿಕರನ್ನು ಗುರಿಯಾಗಿಸಿಕೊಂಡ ಈ ಆಕ್ರಮಣಕ್ಕೆ ನಾವು ನಮ್ಮ ಶತ್ರು ರಾಷ್ಟ್ರವಾದ ಇಸ್ರೇಲ್ ಅನ್ನು ಸಂಪೂರ್ಣ ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ಹೆಜ್ಬೊಲ್ಲಾ ಅಧಿಕಾರಿಗಳು ಹೇಳಿದ್ದು, ಇದಕ್ಕೆ ಖಂಡಿತವಾಗಿಯೂ ನಾವು ತಿರುಗೇಟು ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಲೆಬೆನಾನ್ ಮೇಲೆ ನಡೆಸಿದ ದಾಳಿಯ ಕಾರ್ಯಾಚರಣೆ ಬಗ್ಗೆ ಇಸ್ರೇಲ್‌ನ ಅಧಿಕಾರಿಯೊಬ್ಬರು ವಾಷಿಂಗ್ಟನ್ ಡಿಸಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈ ಕುರಿತು ಸಾರ್ವಜನಿಕವಾಗಿ ಚರ್ಚಿಸುವ ಅಧಿಕಾರ ತಮಗಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

Lebanon Pager Explosions

ದಾಳಿ ನಡೆಸಿದ್ದು ಹೇಗೆ?

ಇಸ್ರೇಲ್‌ನ ಮೊಸಾದ್ ಬೇಹುಗಾರಿಕಾ ಸಂಸ್ಥೆಯು 5,000 ಪೇಜರ್‌ಗಳ ಒಳಗೆ ಸ್ಫೋಟಕಗಳನ್ನು ರಹಸ್ಯವಾಗಿ ಇಟ್ಟಿತ್ತು ಎಂದು ಹಿರಿಯ ಲೆಬೆನಾನಿನ ಭದ್ರತಾ ಮೂಲವು ಮಾಧ್ಯಮವೊಂದಕ್ಕೆ ತಿಳಿಸಿದೆ. ತಿಂಗಳ ಹಿಂದೆ ಲೆಬೆನಾನಿನ ಹೆಜ್ಬೊಲ್ಲಾ ಸಂಘಟನೆ ಪೇಜರ್‌ಗಳನ್ನು ತೈವಾನ್ ಮೂಲದ ಗೋಲ್ಡ್ ಅಪೊಲೊದಿಂದ ಆಮದು ಮಾಡಿಕೊಂಡಿತ್ತು. ಆದರೆ ಆ ಕಂಪನಿಯು ಈ ಸಾಧನಗಳನ್ನು ತಾನು ತಯಾರಿಸಿಲ್ಲ ಎಂದು ಹೇಳಿಕೊಂಡಿದೆ. ಈ ಸಾಧನಗಳನ್ನು ಮೊಸಾದ್ ಮಾರ್ಪಡಿಸಿ ಹೆಜ್ಬುಲ್ಲಾ ಉಗ್ರರ ಕೈಗೆ ಸಿಗುವಂತೆ ಮಾಡಿದೆ ಎಂದು ಲೆಬನಾನ್ ತಿಳಿಸಿದೆ.

ಇಸ್ರೇಲ್‌ ಗುಪ್ತಚರ ಸಂಸ್ಥೆ ಮೊಸಾದ್ ಈ ಸಾಧನದ ಒಳಗೆ ಒಂದು ಬೋರ್ಡ್ ಅನ್ನು ಇಟ್ಟಿದ್ದು, ಅದು ಕೋಡ್ ಸ್ವೀಕರಿಸುವಾಗ ಸ್ಫೋಟಗೊಳ್ಳುವ ವಸ್ತುವನ್ನು ಹೊಂದಿತ್ತು. ಯಾವುದೇ ವಿಧಾನದ ಮೂಲಕ ಅದನ್ನು ಪತ್ತೆ ಮಾಡುವುದು ತುಂಬಾ ಕಷ್ಟ. ಕೋಡ್ ಸಂದೇಶವನ್ನು ಕಳುಹಿಸಿದ ತಕ್ಷಣ 3,000 ಪೇಜರ್‌ಗಳು ಸ್ಫೋಟಗೊಂಡವು ಎಂದು ಲೆಬೆನಾನ್ ಮೂಲಗಳು ತಿಳಿಸಿವೆ.

ಹೆಜ್ಬೊಲ್ಲಾಗಳು ಇನ್ನೂ ಪೇಜರ್‌ಗಳನ್ನು ಏಕೆ ಬಳಸುತ್ತಾರೆ?

ಹೆಜ್ಬೊಲ್ಲಾ ಗುಂಪಿನ ಚಲನವಲನಗಳನ್ನು ಇಸ್ರೇಲ್ ಪತ್ತೆ ಮಾಡಬಹುದಾದ ಸೆಲ್ ಫೋನ್‌ಗಳನ್ನು ಕೊಂಡೊಯ್ಯದಂತೆ ಹೆಜ್ಬೊಲ್ಲಾ ನಾಯಕ ಹಸನ್ ನಸ್ರಲ್ಲಾ ಈ ಹಿಂದೆ ತನ್ನ ಸದಸ್ಯರಿಗೆ ಎಚ್ಚರಿಕೆ ನೀಡಿದ್ದ. ಇದರ ಪರಿಣಾಮವಾಗಿ, ಇರಾನ್ ಬೆಂಬಲಿತ ಉಗ್ರಗಾಮಿ ಗುಂಪು ಸಂವಹನಕ್ಕಾಗಿ ಪೇಜರ್‌ಗಳನ್ನು ಬಳಸುತ್ತಿತ್ತು.

ಪೇಜರ್‌ಗಳು ಸರಳ ತಂತ್ರಜ್ಞಾನವನ್ನು ಹೊಂದಿದ್ದು, ಇದಕ್ಕೆ ವ್ಯತಿರಿಕ್ತವಾಗಿರುವ ಸ್ಮಾರ್ಟ್‌ಫೋನ್‌ಗಳು ಸಂವಹನದ ವೇಳೆಯಲ್ಲಿ ಹೆಚ್ಚಿನ ಅಪಾಯವನ್ನು ಹೊಂದಿರುತ್ತದೆ ಎಂದು ನ್ಯೂಯಾರ್ಕ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಪ್ರೊಫೆಷನಲ್ ಸ್ಟಡೀಸ್‌ನಲ್ಲಿರುವ ಸೆಂಟರ್ ಫಾರ್ ಗ್ಲೋಬಲ್ ಅಫೇರ್ಸ್‌ನ ಸಹಾಯಕ ಬೋಧಕ ನಿಕೋಲಸ್ ರೀಸ್ ತಿಳಿಸಿದ್ದು, ಮಂಗಳವಾರದ ದಾಳಿಯು ತನ್ನ ಸಂವಹನ ತಂತ್ರಗಳನ್ನು ಬದಲಾಯಿಸಲೇಬೇಕಾದ ಒತ್ತಡ ಹೆಜ್ಬೊಲ್ಲಾಗಳ ಮೇಲೆ ಬೀಳುವಂತಾಗಿದೆ ಎಂದಿದ್ದಾರೆ.

PM Narendra Modi: ಸೆ. 21ರಿಂದ ಮೋದಿ ಅಮೆರಿಕ ಪ್ರವಾಸ; ಭೇಟಿಯಾಗಲು ಉತ್ಸುಕರಾದ ಡೋನಾಲ್ಡ್‌ ಟ್ರಂಪ್‌

ಈ ಸ್ಫೋಟದಲ್ಲಿ ಬದುಕಿರುವವರು ತಮ್ಮ ಪೇಜರ್‌ಗಳನ್ನು ಮಾತ್ರವಲ್ಲದೆ ಫೋನ್, ಟ್ಯಾಬ್ಲೆಟ್‌ ಸೇರಿದಂತೆ ಯಾವುದೇ ಬಗೆಯ ಎಲೆಕ್ಟ್ರಾನಿಕ್ ಸಾಧನಗಳನ್ನು ತಮ್ಮ ಜೀವಮಾನದಲ್ಲಿ ಬಿಟ್ಟುಬಿಡುವ ಸಾಧ್ಯತೆಯಿದೆ ಎಂದು ನಿಕೋಲಸ್‌ ಅವರು ತಿಳಿಸಿದ್ದಾರೆ.