Monday, 13th January 2025

Los Angeles wildfire: ಲಾಸ್‌ಏಂಜಲೀಸ್‌ ಬೆಂಕಿ ಪ್ರಳಯಕ್ಕೆ ಅಮೆರಿಕ ತತ್ತರ; ಇತಿಹಾಸದಲ್ಲಿ ದಾಖಲಾದ ಭೀಕರ ಕಾಡ್ಗಿಚ್ಚು ದುರಂತಗಳಿವು

Los Angeles wildfire

ವಾಷಿಂಗ್ಟನ್‌: ಬೆಂಕಿ ಅಂದರೇನೆ ಹಾಗೆ. ಎದುರಿಗೆ ಸಿಕ್ಕಿದ್ದನ್ನೆಲ್ಲ ಆಪೋಶನ ತೆಗೆದುಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾಗಿಸುತ್ತದೆ. ಮರ, ಗಿಡ, ಬ‍ಳ್ಳಿ, ಪ್ರಾಣಿ, ಪಕ್ಷಿ, ಕಾಡು ಅಷ್ಟೇಕೆ ಅಡ್ಡಬಂದ ಊರು, ನಗರವನ್ನು ನಾಶ ಮಾಡಿ ಬಿಡುತ್ತದೆ. ಇನ್ನು ಕಾಡ್ಗಿಚ್ಚು ಎಂದರೆ ಕೇಳಬೇಕೆ? ಇದರ ಅಬ್ಬರ ಇನ್ನೂ ಅನೇಕ ಪಟ್ಟು ಹೆಚ್ಚಿರುತ್ತದೆ. ಸದ್ಯ ಅಮೆರಿಕದಲ್ಲಿ ಆಗಿರುವುದು ಇದೆ. ಈವರೆಗೂ ಕಂಡು ಕೇಳರಿಯದ ಅಗ್ನಿ ಅವಘಡಕ್ಕೆ ಅಮೆರಿಕ ಸಾಕ್ಷಿಯಾಗಿದೆ. ಲಾಸ್‌ಏಂಜಲೀಸ್‌ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಹಬ್ಬುತಲೇ ಇದೆ. ಅಮೆರಿಕದ ಪ್ರಮುಖ ರಾಜ್ಯಗಳ ಪೈಕಿ ಒಂದಾದ ಲಾಸ್‌ ಏಂಜಲೀಸ್‌ನ 40 ಸಾವಿರ ಎಕರೆಗೂ ಅಧಿಕ ಪ್ರದೇಶ ನಲುಗಿ ಹೋಗಿದೆ. ಇಲ್ಲಿ 12 ಸಾವಿರಕ್ಕೂ ಅಧಿಕ ಕಟ್ಟಡಗಳು ಸುಟ್ಟು ಭಸ್ಮವಾಗಿದ್ದು, ಅಂದಾಜು 13 ಲಕ್ಷ ಕೋಟಿ ರೂ. ನಷ್ಟವುಂಟಾಗಿದೆ. ಅಲ್ಲದೆ 16 ಮಂದಿ ಬಲಿಯಾಗಿದ್ದಾರೆ ಎಂದರೆ ಅಲ್ಲಿನ ಭೀಕರ ಪರಿಸ್ಥಿತಿ ಹೇಗಿರಬಹುದು ಎನ್ನುವುದನ್ನು ಊಹಿಸಿ. ಹಾಗಾದರೆ ಕಾಡ್ಗಿಚ್ಚು ಎಂದರೇನು? ಇದು ಹೇಗೆ ಉಂಟಾಗುತ್ತದೆ? ಇಲ್ಲಿದೆ ಸಮಗ್ರ ವಿವರ (Los Angeles wildfire).

ಕಾಡ್ಗಿಚ್ಚು ಎನ್ನುವುದು ನಿಯಂತ್ರಣಕ್ಕೆ ಸಿಗದ ಬೆಂಕಿಯಾಗಿದ್ದು, ಇದು ಅಪಾರ ಪ್ರಮಾಣದಲ್ಲಿ ಅರಣ್ಯ, ಗ್ರಾಮೀಣ ಪ್ರದೇಶವನ್ನು ಸುಟ್ಟು ಭಸ್ಮವಾಗಿಸುತ್ತದೆ. ಕೋಟ್ಯಂತರ ವರ್ಷಗಳಿಂದ ಕಾಡ್ಗಿಚ್ಚಿಗೆ ಸಿಲುಕಿ ಕಾಡುಗಳು, ಹುಲ್ಲುಗಾವಲುಗಳು, ಅನೇಕ ಹಳ್ಳಿಗಳು, ನಗರಗಳು ನಾಶವಾಗಿವೆ. ಇದು ಒಂದು ನಿರ್ದಿಷ್ಟ ಖಂಡ, ಪ್ರದೇಶ ಅಥವಾ ದೇಶಕ್ಕೆ ಸೀಮಿತವಾಗಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಉದ್ದೇಶಪೂರ್ವಕವಲ್ಲದ ಈ ಬೆಂಕಿ ನೈಸರ್ಗಿಕ ಮೂಲಗಳಾದ ಕಾಡು, ಹುಲ್ಲುಗಾವಲು ಮುಂತಾದೆಡೆಗಳಲ್ಲಿ ಕಾಣಿಸಿಕೊಂಡು ಗಾಳಿಯ ಸಹಾಯದಿಂದ ಎಲ್ಲೆಡೆ ಹಬ್ಬುತ್ತದೆ. ಕಾಡ್ಗಿಚ್ಚು ಎಲ್ಲಿ, ಯಾವಾಗ ಬೇಕಾದರೂ ಹೊತ್ತಿಕೊಳ್ಳಬಹುದು. ಮಾನವರ ವಿವೇಕರಹಿತ ವರ್ತನೆ ಅಥವಾ ಮಿಂಚು ಮುಂತಾದ ನೈಸರ್ಗಿಕ ಕಾರಣದಿಂದ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತದೆ. ಅದಾಗ್ಯೂ ಶೇ. 50ರಷ್ಟು ಪ್ರಕರಣಗಳಲ್ಲಿ ಕಾಡ್ಗಿಚ್ಚು ಹೇಗೆ ಉಂಟಾಯಿತು ಎನ್ನುವುದನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ.

ಒಣ ಹವೆ, ಬಲವಾದ ಗಾಳಿ ಕಾಡ್ಗಿಚ್ಚು ವೇಗವಾಗಿ ಹರಡಲು ಕಾರಣವಾಗುತ್ತದೆ. ಸಾರಿಗೆ, ಸಂವಹನ, ವಿದ್ಯುತ್‌, ನೀರು ಪೂರೈಕೆ ಮುಂತಾದ ಮೂಲ ಸೌಲಭ್ಯಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಜೀವ, ಬೆಳೆ, ಜಮೀನು ಹಾನಿಯ ಜತೆಗೆ ಉಸಿರಾಡುವ ಗಾಳಿಯ ಗುಣಮಟ್ಟ ಕುಸಿತಕ್ಕೂ ಇದು ಕಾರಣವಾಗುತ್ತದೆ.

ಕಾರಣವೇನು?

ಕಾಡ್ಗಿಚ್ಚು ಪ್ರಮುಖವಾಗಿ 2 ಕಾರಣಗಳಿಗೆ ಕಾಣಿಸಿಕೊಳ್ಳುತ್ತದೆ. ಮಾನವ ಕಾರಣ, ನೈಸರ್ಗಿಕ ಕಾರಣ ಎಂದು ಇದನ್ನು ವರ್ಗೀಕರಿಸಲಾಗಿದೆ.

ಮಾನವ ಕಾರಣ: ಕಾಡ್ಗಿಚ್ಚು ಕಾಣಿಸಿಕೊಳ್ಳಲು ಶೇ. 90ರಷ್ಟು ಮಾನವರೇ ಕಾರಣ ಎಂದು ಅಧ್ಯಯನಗಳು ತಿಳಿಸಿವೆ. ಪ್ರತಿ ವರ್ಷ ಮಾನವರ ನಿರ್ಲಕ್ಷ್ಯದಿಂದ ಕಾಡ್ಗಿಚ್ಚು ಕಾಣಿಸಿಕೊಂಡು ಲಕ್ಷಾಂತರ ಎಕರೆ ಭೂಮಿ ಸುಟ್ಟು ಬೂದಿಯಾಗುತ್ತದೆ. ಮುಖ್ಯವಾಗಿ ಧೂಮಪಾನ, ಕ್ಯಾಂಪ್‌ ಫೈರ್‌, ಬೆಳೆಗಳನ್ನು ಸುಡುವುದು, ಯಾಂತ್ರಿಕ ಅಪಘಾತಗಳಿಂದ ಇದು ಸಂಭವಿಸುತ್ತದೆ.

ನೈಸರ್ಗಿಕ ಕಾರಣ: ಶೇ. 10ರಷ್ಟು ಪ್ರಕರಣಗಳಲ್ಲಿ ನೈಸರ್ಗಿಕ ಕಾರಣದಿಂದ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತದೆ. ಮಿಂಚು, ಜ್ವಾಲಾಮುಖಿ ಸ್ಫೋಟ ಇದಕ್ಕೆ ಮುಖ್ಯ ಕಾರಣ.

ಇತಿಹಾಸದಲ್ಲಿ ದಾಖಲಾದ ಪ್ರಮುಖ ಕಾಡ್ಗಿಚ್ಚು ದುರಂತಗಳು

2003 ಸೈಬೀರಿಯನ್ ಟೈಗಾ ಫೈರ್ (ರಷ್ಯಾ) – 5.5 ಕೋಟಿ ಎಕರೆ ನಾಶ
1919/2020 ಆಸ್ಟ್ರೇಲಿಯನ್ ಬುಷ್‌ಫೈರ್‌ (ಆಸ್ಟ್ರೇಲಿಯಾ) – 4.2 ಕೋಟಿ ಎಕರೆ ನಾಶ
2014 ನಾರ್ತ್‌ವೆಸ್ಟ್‌ ಟೆರಿಟರೀಸ್ ಫೈರ್ (ಕೆನಡಾ) – 0.85 ಎಕರೆ ನಾಶ
2004 ಅಲಾಸ್ಕಾ ಫೈರ್ ಸೀಸನ್ (ಅಮೆರಿಕ) – 0.6 ಕೋಟಿ ಎಕರೆ ನಾಶ
1939 ಬ್ಲ್ಯಾಕ್ ಫ್ರೈಡೇ ಬುಷ್‌ಫೈರ್‌ (ಆಸ್ಟ್ರೇಲಿಯಾ) – 0.5 ಕೋಟಿ ಎಕರೆ ನಾಶ
1919 ದಿ ಗ್ರೇಟ್ ಫೈರ್ ಆಫ್ 1919 (ಕೆನಡಾ) – 0.5 ಕೋಟಿ ಎಕರೆ ನಾಶ
1950 ಚಿಂಚಗಾ ಫೈರ್‌ (ಕೆನಡಾ) – 0.42 ಕೋಟಿ ಎಕರೆ ನಾಶ
2010 ಬೊಲಿವಿಯಾ ಕಾಡ್ಗಿಚ್ಚು (ದಕ್ಷಿಣ ಅಮೆರಿಕ) – 0.37 ಕೋಟಿ ಎಕರೆ ನಾಶ
1910 ಗ್ರೇಟ್ ಫೈರ್ ಆಫ್ ಕನೆಕ್ಟಿಕಟ್ (ಅಮೆರಿಕ) – 0.3 ಕೋಟಿ ಎಕರೆ ನಾಶ
1987 ಬ್ಲ್ಯಾಕ್ ಡ್ರ್ಯಾಗನ್ ಫೈರ್ (ಚೀನಾ ಮತ್ತು ರಷ್ಯಾ) – 0.25 ಕೋಟಿ ಎಕರೆ ನಾಶ
2011 ರಿಚರ್ಡ್ಸನ್ ಬ್ಯಾಕ್ಕಂಟ್ರಿ ಫೈರ್ (ಕೆನಡಾ) – 0.17 ಕೋಟಿ ಎಕರೆ ನಾಶ
1989 ಮ್ಯಾನಿಟೋಬಾ ಕಾಡ್ಗಿಚ್ಚು (ಕೆನಡಾ) – 0.13 ಕೋಟಿ ಎಕರೆ ನಾಶ

ಈ ಸುದ್ದಿಯನ್ನೂ ಓದಿ: Viral Video: ಲಾಸ್‌ ಏಂಜಲೀಸ್‌ನ ಕಾಡ್ಗಿಚ್ಚಿನ ರಣ ಭೀಕರ ದೃಶ್ಯಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌

Leave a Reply

Your email address will not be published. Required fields are marked *