ವಾಷಿಂಗ್ಟನ್: ಅಮೆರಿಕದ ಲಾಸ್ ಏಂಜಲಿಸ್ನ (Los Angeles) ಹಾಲಿವುಡ್ ಬೆಟ್ಟದಲ್ಲಿ (Hollywood Hill) ನಡೆದ ಶತಮಾನದ ಭೀಕರ ಕಾಡ್ಗಿಚ್ಚು (Los Angeles Wildfire) ರನ್ಯಾನ್ ಕ್ಯಾನ್ಯನ್ ಮತ್ತು ವಾಟಲ್ಸ್ ಪಾಕ್ಗಳನ್ನು ಸಂಪೂರ್ಣವಾಗಿ ಆಹುತಿ ಪಡೆದಿದೆ. 7500 ಅಗ್ನಿಶಾಮಕ ದಳ, 1162 ಅಗ್ನಿಶಾಮಕ ವಾಹನ, 23 ನೀರು ಸರಬರಾಜುದಾರರು, 31 ಹೆಲಿಕಾಪ್ಟರ್, 53 ಬುಲ್ಡೋಜರ್‌ಗಳು ಬಂದರೂ ಅಗ್ನಿಯನ್ನು ನಂದಿಸಲು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕಾಡ್ಗಿಚ್ಚಿನ ಕಾಟದ ನಡುವೆ ಸಿಲುಕಿದ್ದ ಮೊಲವೊಂದನ್ನು ಯುವಕನೊಬ್ಬ ಸಾಹಸಮಯವಾಗಿ ರಕ್ಷಿಸಿದ ವಿಡಿಯೋ ಒಂದು ಇಡೀ ಜಗತ್ತಿನ ಗಮನವನ್ನು ಸೆಳೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಅಮೆರಿಕದ (USA) ಲಾಸ್ ಏಂಜಲಿಸ್ನ ಹಾಲಿವುಡ್ ಬೆಟ್ಟದಲ್ಲಿ ನಡೆದ ಶತಮಾನದ ಭೀಕರ ಕಾಡ್ಗಿಚ್ಚು ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಈ ಭಾಗದಲ್ಲಿ ಮಳೆಯ ಅಭಾವ ಈ ವರ್ಷ ಉಂಟಾಗಿದ್ದ ಕಾರಣದಿಂದ ಈ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಕಷ್ಟಸಾಧ್ಯವಾಗಿದೆ.
ಲಾಸ್ ಏಂಜಲಿಸ್‌ನಲ್ಲಿ ನೀರಿನ ಅಭಾವದಿಂದಾಗಿ ಅಗ್ನಿಶಾಮಕ ದಳದವರು ಸಾಕಷ್ಟು ಬೆಂಕಿ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ. ಸುತ್ತಲಿನ ಈಜುಕೊಳಗಳು ಮತ್ತು ಕೊಳಗಳಿಂದ ನೀರು ಸಂಗ್ರಹಿಸಿ ಕಾರ್ಯಾಚರಣೆ ನಡೆಸುವ ಅನಿವಾರ್ಯತೆ ಎದುರಾಗಿದೆ. ಫೈರ್ ಎಂದು ಕರೆಯಲ್ಪಡುವ ಅಗ್ನಿ ಹಾಲಿವುಡ್ ಹಿಲ್ಸ್‌ನಲ್ಲಿ ಕಾಣಿಸಿಕೊಂಡಿದೆ. 20ಕ್ಕೂ ಅಧಿಕ ಎಕರೆಗೆ ಆರಂಭದಲ್ಲಿ ವ್ಯಾಪಿಸಿರುವ ಈ ಬೆಂಕಿ, ರನ್ಯಾನ್ ಕ್ಯಾನ್ಯನ್ ಮತ್ತು ವಾಟಲ್ಸ್ ಪಾಕ್ಗಳನ್ನು ಸಂಪೂರ್ಣವಾಗಿ ಆಹುತಿ ಪಡೆದಿದೆ.
ಇದರ ನಡುವೆಯೇ ಮನಕಲಕುವ ವಿಡಿಯೋ ಒಂದು ವೈರಲ್ ಆಗಿದೆ. ಮಾನವೀಯತೆ ಇನ್ನೂ ಜೀವಂತ ಆಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎನ್ನುತ್ತಿದ್ದಾರೆ ನೆಟ್ಟಿಗರು. ಕಾಡ್ಗಿಚ್ಚು ಇದಾಗಲೇ ಮನುಷ್ಯರನ್ನು ಮಾತ್ರವಲ್ಲದೇ ಹಲವು ಪ್ರಾಣಿ-ಪಕ್ಷಿಗಳ ಆಹುತಿ ಪಡೆದಿದೆ. ಈ ಕಾಡ್ಗಿಚ್ಚಿನ ಪ್ರಕೋಪಕ್ಕೆ ಸಿಲುಕಿ ಮೊಲವೊಂದು ಎಲ್ಲಿ ಹೋಗುವುದು ಎಂದು ತಿಳಿಯದೇ ಭಯದಿಂದ ಓಡಿಹೋಗುತ್ತಿತ್ತು. ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಬೆಂಕಿಯನ್ನೂ ಗಮನಿಸದೇ ಆ ಮೊಲದ ರಕ್ಷಣೆಗೆ ಓಡಿದ್ದನ್ನು ನೋಡಬಹುದು. ಆದರೆ ಆ ಮೊಲ ಭಯದಿಂದ ಅತ್ತ ಕಡೆ ಓಡಿ ಹೋದಾಗ, ಅದನ್ನು ಹೇಗೆ ರಕ್ಷಣೆ ಮಾಡುವುದು ಎಂದು ತಿಳಿಯದೇ ವ್ಯಕ್ತಿ ತೊಳಲಾಡಿದ್ದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಬಳಿಕ ಆ ಮೊಲ ಅದೃಷ್ಟವಶಾತ್ ವಾಪಸ್ ಓಡಿ ಬಂದಾಗ, ಅದರ ಹಿಂದೆಯೇ ಓಡಿದ ವ್ಯಕ್ತಿ ಅದನ್ನು ರಕ್ಷಣೆ ಮಾಡಿದ್ದಾನೆ. ಇದರ ಮನಕಲುಕುವ ವಿಡಿಯೋ ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ: Chhattisgarh Horror: ಮತ್ತೊಂದು ಬೆಚ್ಚಿ ಬೀಳಿಸುವ ಪ್ರಕರಣ- ಪತ್ರಕರ್ತನ ಕುಟುಂಬವನ್ನೇ ಮುಗಿಸಿದ ದುರುಳರು
ಅಷ್ಟಕ್ಕೂ, ಅಮೆರಿಕದ ಅತಿ ದೊಡ್ಡ ದುರಂತವಾಗಿರುವ ಕಾಳ್ಗಿಚ್ಚು ಇಡೀ ದೇಶವನ್ನಷ್ಟೇ ಅಲ್ಲದೇ, ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆಯಲ್ಲಿ ಐದು ಜನ ಪ್ರಾಣ ಕಳೆದಕೊಂಡಿದ್ದು, ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಲಾಸ್ ಏಂಜಲೀಸ್ ಮತ್ತು ಸುತ್ತಮುತ್ತ ಉರಿಯುತ್ತಿರುವ ಕಾಳ್ಗಿಚ್ಚು ಹಾಲಿವುಡ್ ಸೆಲೆಬ್ರಿಟಿಗಳಾದ ಬಿಲ್ಲಿ ಕ್ರಿಸ್ಟಲ್, ಮ್ಯಾಂಡಿ ಮೂರ್ ಮತ್ತು ಪ್ಯಾರಿಸ್ ಹಿಲ್ಟನ್ ಸೇರಿದಂತೆ ಹಲವಾರು ಮಂದಿಯ ಮನೆಗಳನ್ನು ಕಣ್ಣೆದುರೇ ಸುಟ್ಟು ಭಸ್ಮ ಮಾಡಿದೆ. ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ ವಸ್ತುಗಳು ಧಗಧಗನೆ ಹೊತ್ತಿಕೊಂಡು ಉರಿದಿವೆ. ಪ್ರಾಣ ಉಳಿಸಿಕೊಂಡರೆ ಸಾಕು ಎನ್ನುವಷ್ಟರ ಮಟ್ಟಿಗೆ ಸೆಲೆಬ್ರಿಟಿಗಳು ಸೇರಿದಂತೆ ಜನರು ಸ್ಥಳದಿಂದ ಮಾತ್ರವಲ್ಲದೇ ಊರೇ ಬಿಡುತ್ತಿದ್ದಾರೆ.
ಒಟ್ಟಿನಲ್ಲಿ ವಿಶ್ವದ ದೊಡ್ಡಣ್ಣನನ್ನು ಹೊಸ ವರ್ಷದ ಪ್ರಾರಂಭದಲ್ಲೇ ಅಗ್ನಿದೇವ ಇನ್ನಿಲ್ಲದಂತೆ ಕಾಡುತ್ತಿದ್ದಾನೆ. ಅಗ್ನಿ ನಿಯಂತ್ರಣಕ್ಕೆ ಆಧುನಿಕ ತಂತ್ರಜ್ಞಾನಗಳಿದ್ದರೂ ಅಗ್ನಿಯ ಪ್ರಕೋಪಕ್ಕೆ ಅಮೆರಿಕ ಪತರುಗುಟ್ಟಿ ಹೋಗಿರುವುದಂತೂ ಸತ್ಯ.