Sunday, 17th November 2024

Mass Shooting: ಪಾಕಿಸ್ತಾನದಲ್ಲಿ ಗುಂಡಿನ ದಾಳಿ; 20 ಗಣಿ ಕಾರ್ಮಿಕರು ಬಲಿ

Mass Shooting

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ನಡೆದ ಅಪರಿಚಿತ ಬಂದೂಕುಧಾರಿಗಳ ಗುಂಡಿನ ದಾಳಿಗೆ ಸುಮಾರು 20 ಮಂದಿ ಗಣಿ ಕಾರ್ಮಿಕರು ಬಲಿಯಾಗಿದ್ದು, ಸುಮಾರು 7 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ (Mass Shooting). ಬಲೂಚಿಸ್ತಾನ ಪ್ರಾಂತ್ಯದಲ್ಲಿ ಈ ದಾಳಿ ನಡೆದಿದ್ದು, ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶೃಂಗಸಭೆಗೆ ಕೆಲವೇ ದಿನಗಳ ಮೊದಲು ನಡೆದ ಈ ಘಟನೆ ಆತಂಕ ಮೂಡಿಸಿದೆ.

ಪೊಲೀಸ್ ಅಧಿಕಾರಿ ಹಮಾಯೂನ್ ಖಾನ್ ನಾಸಿರ್ ಅವರ ಪ್ರಕಾರ ಬಂದೂಕುಧಾರಿಗಳು ಗುರುವಾರ (ಅಕ್ಟೋಬರ್‌ 10) ತಡರಾತ್ರಿ ಡುಕಿ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿರುವ ಕಾರ್ಮಿಕರ ವಸತಿಗೃಹಗಳಿಗೆ ನುಗ್ಗಿ ದಾಳಿ ನಡೆಸಿದರು. ಮೃತರಲ್ಲಿ ಬಹುತೇಕರು ಪಶ್ತೂನ್‌ ಭಾಷೆ ಮಾತನಾಡುವ ಬಲೂಚಿಸ್ತಾನದ ಪ್ರದೇಶದವರು. ಇವರ ಜತೆಗೆ ಮೂವರು ಅ‍ಫ್ಘಾನಿಸ್ತಾನ ಮೂಲದವರು ಅಸುನೀಗಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರು ಅ‍ಫ್ಘಾನಿಸ್ತಾನಿಗಳೂ ಸೇರಿದ್ದಾರೆ.

ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಮುನ್ನ ದಾಳಿ

ಅಕ್ಟೋಬರ್ 16 ಮತ್ತು 17ರಂದು ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (Shanghai Cooperation Organisation) ಶೃಂಗಸಭೆಗೆ ಕೆಲವೇ ದಿನಗಳ ಮೊದಲು ಈ ದಾಳಿ ನಡೆದಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ (S Jaishankar) ಸೇರಿದಂತೆ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಈ ಘಟನೆ ಆತಂಕ ಮೂಡಿಸಿದೆ. ಅಕ್ಟೋಬರ್‌ 15ರಂದು ಜೈಶಂಕರ್‌ ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಸುಮಾರು 9 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡಿದ ಕೊನೆಯ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. 2015ರ ಡಿಸೆಂಬರ್‌ನಲ್ಲಿ ಅವರು ಅಫ್ಘಾನಿಸ್ತಾನ ಕುರಿತಾದ ಸಮಾಲೋಚನೆಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ತೆರಳಿದ್ದರು.

ಹೆಚ್ಚಿನ ಭದ್ರತಾ ಕ್ರಮಗಳ ಭಾಗವಾಗಿ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯ ರೆಸ್ಟೋರೆಂಟ್‌ಗಳು, ಕಲ್ಯಾಣ ಮಂಟಪಗಳು, ಕೆಫೆಗಳು ಮತ್ತು ಸ್ನಕರ್‌ ಕ್ಲಬ್‌ಗಳನ್ನು ಅಕ್ಟೋಬರ್ 12ರಿಂದ 16ರವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಈಗಾಗಲೇ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Karachi Airport Explosion: ಪಾಕಿಸ್ತಾನದಲ್ಲಿ ಭೀಕರ ಸ್ಫೋಟ; ಇಬ್ಬರು ಚೀನಿ ನಾಗರಿಕರು ಬಲಿ

ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳ ವೈವಾಡ?

ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ನಡೆದ ಈ ದಾಳಿಯ ಹಿಂದೆ ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಅಕ್ಟೋಬರ್‌ 6ರ ತಡರಾತ್ರಿ ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದ ಹೊರಗೆ ಸ್ಫೋಟ ಸಂಭವಿಸಿ ಇಬ್ಬರು ಚೀನಿ ಪ್ರಜೆಗಳು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದರು. ಪ್ರತ್ಯೇಕತಾವಾದಿ ಗುಂಪು ಬಲೂಚ್‌ ಲಿಬರೇಷನ್‌ ಆರ್ಮಿ (Baloch Liberation Army) ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಯಲ್ಲಿರುವ ಬಲೂಚಿಸ್ತಾನ ಪ್ರಾಂತ್ಯವನ್ನು ಸ್ವಾತಂತ್ರಗೊಳಿಸಲು ಬಿಎಲ್‌ಎ ಹೋರಾಟ ನಡೆಸುತ್ತಿದೆ. ಆಗಸ್ಟ್‌ನಲ್ಲಿ ನಡೆಸಿದ ದಾಳಿಯಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಸದ್ಯ ಈ ದಾಳಿಯಲ್ಲಿ ಹೊಣೆಯನ್ನೂ ಯಾರೂ ಹೊತ್ತುಕೊಂಡಿಲ್ಲ. ತನಿಖೆ ನಡೆಯುತ್ತಿದೆ.