ಮಾಸ್ಕೋ: ಬ್ರಿಕ್ಸ್ ಶೃಂಗಸಭೆ (BRICS Summit)ಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಷ್ಯಾ ತೆರಳಿದ್ದಾರೆ (Modi Visit Russia). ಕಜಾನ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೃಷ್ಣ ಭಜನೆಯೊಂದಿಗೆ ರಷ್ಯಾದ ಪ್ರಜೆಗಳು ಮಂಗಳವಾರ (ಅಕ್ಟೋಬರ್ 22) ಆತ್ಮೀಯವಾಗಿ ಸ್ವಾಗತಿಸಿದ್ದು. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದೆ.
ಸೀರೆ ಸುತ್ತಿ, ಪಂಚೆ ತೊಟ್ಟು, ಸಾಂಪ್ರದಾಯಿಕ ಬಟ್ಟೆಯಲ್ಲಿ ಕಾಣಿಸಿಕೊಂಡ ರಷ್ಯನ್ನರು ಕೃಷ್ಣನ ಭಜನೆ ಹಾಡುತ್ತ, ಭಾರತದ ಬಾವುಟ ಪ್ರದರ್ಶಿಸಿ, ಕೈ ಮುಗಿದುಕೊಂಡು ಮೋದಿ ಅವರನ್ನು ಬರ ಮಾಡಿಕೊಂಡರು. ಪ್ರಧಾನಿ ಮೋದಿ ಕೆಲವು ಹೊತ್ತು ಅಲ್ಲೇ ನಿಂತು ನಸುನಗುತ್ತಾ ಅವರೊಂದಿಗೆ ಸಮಯ ಕಳೆದರು. ಮೋದಿ ಕೂಡ ಕೈ ಮುಗಿದು ಅವರಿಗೆ ವಂದಿಸಿದರು. ಈ ಮೂಲಕ ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣಗೊಂಡಿದೆ.
What a beautiful moment!
— Mr Sinha (@MrSinha_) October 22, 2024
Russians welcome PM Modi with Krishna Bhajan in Kazan, Russia. ❤️ pic.twitter.com/iWnzBpOJ5h
ನೃತ್ಯ ಪ್ರದರ್ಶನ
ಇದಕ್ಕೂ ಮುನ್ನ ರಷ್ಯಾದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಪ್ರಧಾನಿ ಮೋದಿ ಕಜಾನ್‌ನ ಹೋಟೆಲ್ ಕೋರ್‌ಸ್ಟನ್‌ದಲ್ಲಿ ರಷ್ಯಾದ ಸಮುದಾಯದ ಕಲಾವಿದರು ಪ್ರದರ್ಶಿಸಿದ ನೃತ್ಯವನ್ನು ವೀಕ್ಷಿಸಿದರು. ಇದಲ್ಲದೆ ಅವರು ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು. ಸುಮಾರು 62 ಸಾವಿರ ಭಾರತೀಯ ವಲಸಿಗರು ರಷ್ಯಾದಲ್ಲಿ ವಾಸಿಸುತ್ತಿದ್ದಾರೆ. ಮೋದಿ ಆಗಮಿಸುತ್ತಿದ್ದಂತೆ ಭಾರತ್ ಮಾತಾ ಕಿ ಜೈ, ಮೋದಿಯವರಿಗೆ ಜಯವಾಗಲಿ ಎಂದು ನೆರೆದವರು ಘೋಷಣೆಗಳನ್ನು ಕೂಗಿದರು. ಅಲ್ಲದೆ ಮೋದಿ ಅವರನ್ನು ಸಮೀಪದಿಂದ ಕಂಡು, ಸೆಲ್ಫಿ ತೆಗೆದುಕೊಂಡು, ಹಸ್ತಲಾಘವ ಮಾಡಿ ಖುಷಿ ಪಟ್ಟರು.
ಬ್ರಿಕ್ಸ್ ಶೃಂಗಸಭೆ ಯಾವಾಗ?
ರಷ್ಯಾಕ್ಕೆ ತೆರಳುವ ಮೊದಲು ಮೋದಿ ಅವರು ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳನ್ನು ಒತ್ತಿ ಹೇಳಿದರು. ಈ ವರ್ಷ ರಷ್ಯಾಕ್ಕೆ ಎರಡನೇ ಬಾರಿ ಭೇಟಿ ನೀಡುತ್ತಿರುವ ಅವರು ಎರಡೂ ದೇಶಗಳ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುವ ವಿಶ್ವಾಸ ವ್ಯಕ್ತಪಡಿಸಿದರು. ಬ್ರಿಕ್ಸ್ ಶೃಂಗಸಭೆಯಲ್ಲಿ ಜಾಗತಿಕ ಅಭಿವೃದ್ಧಿ ಕಾರ್ಯಸೂಚಿ, ಸುಧಾರಿತ ಬಹುಪಕ್ಷೀಯತೆ, ಹವಾಮಾನ ಬದಲಾವಣೆ, ಆರ್ಥಿಕ ಸಹಕಾರ, ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸುವುದು, ಸಾಂಸ್ಕೃತಿಕ ವಿನಿಮಯ ಮುಂತಾದ ವಿಷಯಗಳ ಬಗ್ಗೆ ಸಂವಾದ ನಡೆಯುವ ನಿರೀಕ್ಷೆ ಇದೆ.
ಅಕ್ಟೋಬರ್ 22ರಿಂದ 24ರವರೆಗೆ ರಷ್ಯಾದ ಕಜಾನ್‌ನಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಮೋದಿ ಹೇಳಿದ್ದೇನು?
ʼʼರಷ್ಯಾ- ಉಕ್ರೇನ್ ಸಮಸ್ಯೆ ಪರಿಹಾರಕ್ಕಾಗಿ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಎಲ್ಲ ಸಂಘರ್ಷಗಳನ್ನು ಮಾತುಕತೆಯಿಂದ ಪರಿಹರಿಸಬಹುದು ಎಂಬುದು ನಮ್ಮ ನಿಲುವಾಗಿದೆ. ಸಂಘರ್ಷಗಳಿಗೆ ಶಾಂತಿಯುತ ಪರಿಹಾರಗಳು ಇರಬೇಕು ಎಂದು ನಾವು ನಂಬುತ್ತೇವೆ. ಶಾಂತಿ ಸ್ಥಾಪನೆಗೆ ಭಾರತ ಯಾವಾಗಲೂ ಸಿದ್ದʼʼ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Modi Visit Russia : ರಷ್ಯಾ- ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ; ಪುಟಿನ್‌ಗೆ ಪ್ರಧಾನಿ ಮೋದಿ ಭರವಸೆ