Wednesday, 8th January 2025

Mossad Spy: 1965ರಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿದ್ದ ಎಲಿ ಕೊಹೆನ್ ದೇಹ ಹಿಂಪಡೆಯಲು ಇಸ್ರೇಲ್ ಪ್ರಯತ್ನ; ಇದರ ಹಿಂದಿದೆ ಮುಖ್ಯ ಕಾರಣ

ಜೆರುಸಲೆಂ: ಬರೋಬ್ಬರಿ 60 ವರ್ಷಗಳ ಹಿಂದೆ ಗಲ್ಲಿಗೇರಿದ್ದ ಇಸ್ರೇಲ್‌(Israel) ಮೂಲದ ಗೂಢಚಾರಿ ಎಲಿ ಕೊಹೆನ್‌( Eli Cohen) ಮೃತದೇಹವನ್ನು ಹಿಂಪಡೆಯಲು ಇಸ್ರೇಲ್‌ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ (Mossad Spy)

ಯಾರಿದು ಎಲಿ ಕೊಹೆನ್?

1962ರಲ್ಲಿ ಉದ್ಯಮಿ ಎಲಿ ಕೊಹೆನ್ ಕಮೆಲ್ ಅಮೀನ್ ಥಾಬೆಟ್‌ ಎಂಬ ಹೆಸರಿನಲ್ಲಿ ಸಿರಿಯಾದ ರಾಜಧಾನಿ ಡಮಾಸ್ಕಸ್‌ಗೆ ಆಗಮಿಸಿದ್ದನು. ನಗರದಲ್ಲಿ ಆತ ಅದ್ದೂರಿ ಪಾರ್ಟಿಗಳನ್ನು ನಡೆಸುವ ಮೂಲಕ ಗಣ್ಯರಲ್ಲಿ ಒಬ್ಬನಾಗಿ ಬೆರೆತಿದ್ದ. ಜತೆಗೆ ನಿಧಾನವಾಗಿ ದೇಶದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳನ್ನು ತನ್ನ ಆತ್ಮೀಯರಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. 3 ವರ್ಷಗಳ ನಂತರ ಆತ ಇಸ್ರೇಲ್‌ ಗೂಢಚಾರಿ ಎಂಬುದು ಪತ್ತೆಯಾದಾಗ ಮಧ್ಯ ಡಮಾಸ್ಕಸ್‌ನ ಮಾರ್ಜೆ ಸ್ಕ್ವೇರ್‌ನಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿತ್ತು.

ಈ ಮೊದಲೇ ಹೇಳಿದಂತೆ, ಕಮೆಲ್ ಥಾಬೆಟ್ ಎಂಬ ಹೆಸರಿನೊಂದಿಗೆ ಸಿರಿಯಾಗೆ ಪ್ರವೇಶಿಸಿದ್ದ ಗೂಢಚಾರಿಯ ಮೂಲ ಹೆಸರು ಎಲಿ ಕೊಹೆನ್. ಈತ ಇಸ್ರೇಲ್‌ನ ಮೊಸಾದ್‌ಗಾಗಿ ಕೆಲಸ ಮಾಡುವ ಗೂಢಚಾರಿಯಾಗಿದ್ದ. ತನ್ನ ದೇಶದ ಆಸ್ತಿ ಎನಿಸಿದ ಇಂತಹ ವ್ಯಕ್ತಿಯ ಮೃತದೇಹವನ್ನು ಮರಳಿಸುವಂತೆ ಈಗ ಇಸ್ರೇಲ್ ಘಟನೆ ನಡೆದ ಬರೋಬ್ಬರಿ 62 ವರ್ಷಗಳ ನಂತರ ಸಿರಿಯಾವನ್ನು ಆಗ್ರಹಿಸಿದೆ.

ಇಸ್ರೇಲಿ ಅಧಿಕಾರಿಗಳು ಈಗ ಎಲಿ ಕೊಹೆನ್ ದೇಹವನ್ನು ಮರುಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಉದ್ಯಮಿ ವೇಷದಲ್ಲಿದ್ದ ಎಲಿ ಕೊಹೆನ್ ಸಿರಿಯಾದ ರಾಜಕೀಯ ಮತ್ತು ಮಿಲಿಟರಿ ಗಣ್ಯರ ಜೊತೆಗೆ ಸಂಪಾದಿಸಿದ ಸ್ನೇಹ 1967 ರ 6 ದಿನಗಳ ಯುದ್ಧದಲ್ಲಿ ಇಸ್ರೇಲ್‌ನ ಯಶಸ್ಸಿಗೆ ಪ್ರಮುಖವಾದ ಗುಪ್ತಚರ ಮಾಹಿತಿಯನ್ನು ಒದಗಿಸಿತ್ತು. ಹೀಗಾಗಿ ಎಲಿ ಕೊಹೆನ್ ಸಾವಿನ ನಂತರ ದಶಕಗಳ ಕಾಲದ ಪ್ರಯತ್ನಗಳ ಹೊರತಾಗಿಯೂ ಆತನ ಸಮಾಧಿ ಸ್ಥಳ ಎಲ್ಲಿದೆ ಎಂಬುದನ್ನು ಸಿರಿಯಾ ಬಹಿರಂಗಪಡಿಸಿಲ್ಲ. ಇಸ್ರೇಲ್‌ ಎಲಿ ಕೊಹೆನ್ ದೇಹವನ್ನು ಮರುಪಡೆಯುವುದನ್ನು ತಡೆಯುವುದಕ್ಕಾಗಿ ಸಿರಿಯಾದ ಅಧಿಕಾರಿಗಳು ಅವನ ದೇಹವನ್ನು ಹಲವು ಬಾರಿ ಸ್ಥಳಾಂತರಿಸಿದ್ದಾರೆ. ಹೀಗಾಗಿ ಇಷ್ಟು ವರ್ಷಗಳು ಕಳೆದರೂ ಅವನ ಮೃತದೇಹ ಎಲ್ಲಿದೆ ಎಂಬುದು ಇಸ್ರೇಲ್‌ಗೆ ತಿಳಿದಿಲ್ಲ.

1962ರಲ್ಲಿ ಉದ್ಯಮಿ ಎಂಬ ಸೋಗಿನಲ್ಲಿ ಡಮಾಸ್ಕಸ್‌ಗೆ ತೆರಳಿದ್ದ ಕೊಹೆನ್ ಪ್ರಭಾವಿ ರಾಜಕೀಯ ಮತ್ತು ಮಿಲಿಟರಿ ವ್ಯಕ್ತಿಗಳು ಭಾಗವಹಿಸುವ ಅದ್ದೂರಿ ಪಾರ್ಟಿಗಳನ್ನು ಆಯೋಜಿಸಿ ಅಗತ್ಯವಾದ ಗುಪ್ತಚರ ಮಾಹಿತಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದ. ಅವನ ಈ ಪ್ರಯತ್ನಗಳು ಗೋಲನ್ ಹೈಟ್ಸ್‌ನಲ್ಲಿ ಸಿರಿಯನ್ ಕೋಟೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿತ್ತು. ನಂತರ ನಡೆದ 6 ದಿನಗಳ ಯುದ್ಧದಲ್ಲಿ ಇಸ್ರೇಲ್ ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಕೊಹೆನ್ ನೀಡಿದ ಮಾಹಿತಿ ಸಹಾಯ ಮಾಡಿತು.

ಈ ಸುದ್ದಿಯನ್ನೂ ಓದಿ: OYO Restriction: ಅವಿವಾಹಿತರಿಗೆ ಓಯೋ ಒಳಗೆ ನೋ ಎಂಟ್ರಿ; ಏನಿದು ಹೊಸ ನಿಯಮ?

Leave a Reply

Your email address will not be published. Required fields are marked *