Saturday, 11th January 2025

Myanmar Civil War :ಮ್ಯಾನ್ಮಾರ್‌ ಅಂತರ್ಯುದ್ಧ; ಏರ್‌ಸ್ಟ್ರೈಕ್‌ನಲ್ಲಿ 500ಕ್ಕೂ ಅಧಿಕ ಮನೆ ಸುಟ್ಟು ಕರಕಲು-ಹಲವರು ಬಲಿ

Myanmar Civil War

ನಾಯ್`ಪಿಯದಾವ್ : ಆಗ್ನೇಯ ಏಷ್ಯಾ ರಾಷ್ಟ್ರವಾದ ಮ್ಯಾನ್ಮಾರ್‌ನ ಅಂತರ್ಯುದ್ಧ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. (Myanmar Civil War) ಪಶ್ಚಿಮ ರಾಖೈನ್ ರಾಜ್ಯದ (Rakhine state) ಮೇಲೆ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರವು (Myanmar Army) ನಡೆಸಿದ ವೈಮಾನಿಕ ದಾಳಿಯಲ್ಲಿ ಹತ್ತಾರು ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಅರಕನ್ ಸೇನೆಯಿಂದ (Arakan Army) ನಿಯಂತ್ರಿಸಲ್ಪಡುವ ಪ್ರದೇಶವಾದ ರಾಮ್ರೀ ದ್ವೀಪದ ಕ್ಯೌಕ್ ನಿ ಮಾವ್ ಗ್ರಾಮದಲ್ಲಿ ಬುಧವಾರ ಈ ದಾಳಿ ನಡೆದಿತ್ತು.

ಅಲ್ಪಸಂಖ್ಯಾತ ಗುಂಪಿನ ನಿಯಂತ್ರಣದಲ್ಲಿರುವ ಹಳ್ಳಿಯೊಂದರ ಮೇಲೆ ಮ್ಯಾನ್ಮಾರ್‌ನ ಸೇನೆಯು ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 40 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 20 ಜನರು ಗಾಯಗೊಂಡಿದ್ದಾರೆ ಎಂದು ಗುಂಪಿನ ಅಧಿಕಾರಿಗಳು ಮತ್ತು ಸ್ಥಳೀಯ ಚಾರಿಟಿ ಗುರುವಾರ ತಿಳಿಸಿದ್ದಾರೆ. ಬಾಂಬ್ ಸ್ಫೋಟದಿಂದ ಉಂಟಾದ ಬೆಂಕಿಯಲ್ಲಿ 500 ಕ್ಕೂ ಅಧಿಕ ಮನೆಗಳು ಸುಟ್ಟುಹೋಗಿವೆ.

ಅರಾಕನ್ ಸೇನೆಯು ಮೃತಪಟ್ಟ 26 ಮುಸ್ಲಿಂ ಗ್ರಾಮಸ್ಥರ ಹೆಸರನ್ನು ಬಿಡುಗಡೆ ಮಾಡಿದೆ ಮತ್ತು ದಾಳಿಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ. 2021ರಲ್ಲಿ ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂ ಕಿ ಅವರ ಚುನಾಯಿತ ಸರ್ಕಾರವನ್ನು ಮಿಲಿಟರಿ ಪದಚ್ಯುತಗೊಳಿಸಿದ ನಂತರ ಮ್ಯಾನ್ಮಾರ್‌ನಲ್ಲಿ ಅಶಾಂತಿ ನೆಲೆಸಿದೆ. ದೇಶದಾದ್ಯಂತ ನಡೆಯುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಸೈನ್ಯವು ಮಾರಕ ಬಲವನ್ನು ಬಳಸಿದ ನಂತರ, ಮಿಲಿಟರಿ ಆಡಳಿತದ ಅನೇಕ ವಿರೋಧಿಗಳು ಶಸ್ತ್ರಾಸ್ತ್ರಗಳನ್ನು ಬಳಸಿ ಪ್ರತಿಭಟನೆ ಶುರು ಮಾಡಿದ್ದರು. ಇದು ಮತ್ತಷ್ಟು ವಿಕೋಪಕ್ಕೆ ಕಾರಣವಾಗಿತ್ತು.

ಅರಾಕನ್ ಸೇನೆಯ ವಕ್ತಾರರಾದ ಖೈಂಗ್ ತುಖಾ ಈ ಬಗ್ಗೆ ಮಾತನಾಡಿದ್ದು, ಮೃತರೆಲ್ಲರೂ ನಾಗರಿಕರು. ಸತ್ತವರು ಮತ್ತು ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ವೈಮಾನಿಕ ದಾಳಿಯಿಂದ ಪ್ರಾರಂಭವಾದ ಬೆಂಕಿಯು ಗ್ರಾಮದಾದ್ಯಂತ ಹರಡಿತು, 500 ಕ್ಕೂ ಹೆಚ್ಚು ಮನೆಗಳನ್ನು ನಾಶಪಡಿಸಿದೆ ಎಂದು ತಿಳಿಸಿದ್ದಾರೆ.

ಅರಾಕನ್ ಸೈನ್ಯವು ರಾಖೈನ್ ಜನಾಂಗೀಯ ಅಲ್ಪಸಂಖ್ಯಾತ ಚಳುವಳಿಯ ಸುಶಿಕ್ಷಿತ ಮತ್ತು ಸುಸಜ್ಜಿತ ಮಿಲಿಟರಿ ವಿಭಾಗವಾಗಿದ್ದು, ಇದು ಮ್ಯಾನ್ಮಾರ್‌ನ ಕೇಂದ್ರ ಸರ್ಕಾರದಿಂದ ಸ್ವಾಯತ್ತತೆಯನ್ನು ಬಯಸುತ್ತದೆ . ಇದು  2023 ರಲ್ಲಿ ರಾಖೈನ್‌ನಲ್ಲಿ ತನ್ನ ಆಕ್ರಮಣವನ್ನು ಪ್ರಾರಂಭಿಸಿತು ಮತ್ತು ಈಗ ಆಯಕಟ್ಟಿನ ಪ್ರಮುಖ ಪ್ರಾದೇಶಿಕ ಸೇನಾ ಪ್ರಧಾನ ಕಛೇರಿ ಮತ್ತು ರಾಖೈನ್‌ನ 17 ಟೌನ್‌ಶಿಪ್‌ಗಳಲ್ಲಿ 14 ಟೌನ್‌ಶಿಪ್‌ಗಳ ನಿಯಂತ್ರಣವನ್ನು ಪಡೆದುಕೊಂಡಿದೆ. ರಾಜ್ಯದ ರಾಜಧಾನಿ ಸಿಟ್ವೆ ಮತ್ತು ರಾಮರೀ ಬಳಿಯ ಎರಡು ಪ್ರಮುಖ ಟೌನ್‌ಶಿಪ್‌ಗಳನ್ನು ಮಾತ್ರ ಇನ್ನೂ ಮಿಲಿಟರಿ ಸರ್ಕಾರದ ಕೈಯಲ್ಲಿದೆ.

ಈ ಸುದ್ದಿಯನ್ನೂ ಓದಿ : China Dam: ಬ್ರಹ್ಮಪುತ್ರ ನದಿಗೆ ವಿಶ್ವದ ಅತಿ ದೊಡ್ಡ ಡ್ಯಾಂ ನಿರ್ಮಿಸಲು ಮುಂದಾದ ಚೀನಾ; ಭಾರತದ ರಿಯಾಕ್ಷನ್‌ ಏನು?

Leave a Reply

Your email address will not be published. Required fields are marked *