ಹೊಸದಿಲ್ಲಿ: ಹೊಸವರ್ಷ (New Year) ಬಂದೇ ಬಿಟ್ಟಿತು. ಹೊಸದಾದ ಏನನ್ನೇ ಆದರೂ ಸ್ವಾಗತಿಸುವಾಗ ಸಹಜವಾದ ಸಂಭ್ರಮವು ವಿಶ್ವದೆಲ್ಲೆಡೆ ಆವರಿಸಿಕೊಳ್ಳುತ್ತಿದೆ. ಹೊಸ ವರ್ಷದ ಸಂಭ್ರಮವೆಂದರೆ ಕೇವಲ ಕುಡಿಯುವುದು, ಕುಣಿಯುವುದು, ಮೈಮರೆಯುವುದು ಮಾತ್ರವಲ್ಲವಲ್ಲ. ವಿಶ್ವದ ಹಲವೆಡೆಗಳಲ್ಲಿ ಹೊಸವರ್ಷವನ್ನು ಸ್ವಾಗತಿಸುವ ಕ್ರಮಗಳು ಬೇರೆಬೇರೆ ರೀತಿಯಲ್ಲಿವೆ. ಕೆಲವು ತಮಾಷೆ ಎನಿಸಿದರೆ, ಕೆಲವು ಕುತೂಹಲ ಕೆರಳಿಸುವಂತಿವೆ. ಯಾವ್ಯಾವ ದೇಶದಲ್ಲಿ ಏನೇನು ಕ್ರಮಗಳಿವೆ ಎಂಬ ಬಗ್ಗೆ ಕೂತಲ್ಲೇ ಒಂದು ಚುಟುಕಾದ ವಿಶ್ವ ಪರ್ಯಟನೆ. ಹೊರಡೋಣವೇ?
ಸ್ಪೇನ್
ಹೊಸ ವರ್ಷವನ್ನು ಸ್ವಾಗತಿಸುವ ಹೊತ್ತಿಗೆ, ಅಂದರೆ ಸರಿಯಾಗಿ 12 ಗಂಟೆಗೆ 12 ದ್ರಾಕ್ಷಿ ಹಣ್ಣುಗಳನ್ನು ಮೆಲ್ಲುವ ಪದ್ಧತಿಯೊಂದು ಅಲ್ಲಿದೆಯಂತೆ. ಇದರಿಂದ ಹೊಸ ವರ್ಷದಲ್ಲಿ ಹರುಷ ಮತ್ತು ಒಳಿತಿನ ಪರಂಪರೆಯೇ ಹರಿದು ಬರುತ್ತದೆ ಎಂಬುದು ಅಲ್ಲಿನವರ ನಂಬಿಕೆ. 1909ರ ಸುಮಾರಿಗೆ ಈ ಪದ್ಧತಿ ಪ್ರಾರಂಭವಾಗಿರಬಹುದು ಎಂದು ಅಂದಾಜು. ಕಾರಣ, ಆ ವರ್ಷ ಸ್ಪೇನ್‌ನಲ್ಲಿ ದ್ರಾಕ್ಷಿಯ ಬಂಪರ್ ಬೆಳೆ ಬಂದಿತ್ತಂತೆ. ಹಾಗಾಗಿ ಹೆಚ್ಚುವರಿ ದ್ರಾಕ್ಷಿಗಳನ್ನು ಸಾರ್ವಜನಿಕವಾಗಿ ಹೊಸ ವರ್ಷಕ್ಕೆ ವಿತರಿಸಲಾಗಿತ್ತಂತೆ.
ಕೊಲಂಬಿಯ
ನೂತನ ವರ್ಷವನ್ನು ಸ್ವಾಗತಿಸುವ ರಾತ್ರಿ, ಖಾಲಿ ಸೂಟ್‌ಕೇಸ್‌ಗಳನ್ನು ಹಿಡಿದುಕೊಂಡು ಆಚೀಚೆ ಓಡಾಡುವ ಕ್ರಮ ಇಲ್ಲಿ ಜನಪ್ರಿಯ. ಇದರಿಂದ ಬರಲಿರುವ ವರ್ಷದಲ್ಲಿ ಹೊಸಹೊಸ ಜಾಗಗಳಿಗೆ ಪ್ರಯಾಣ ಮಾಡಿ ಸುಖಿಸಲು ಸಾಧ್ಯ ಎಂಬುದು ಅಲ್ಲಿನವರ ನಂಬಿಕೆ. ಉಳಿದೆಲ್ಲವನ್ನೂ ಬಿಟ್ಟು ಲೋಕ ಸುತ್ತುವುದನ್ನೇ ಸುಖವೆಂದು ನಂಬಿದವರನ್ನು ಕಂಡಾಗ, ʻದೇಶ ಸುತ್ತಿ ನೋಡು…ʼ ಎನ್ನುವ ಮಾತು ನೆನಪಾಗದಿದ್ದೀತೇ?
ಡೆನ್ಮಾರ್ಕ್
ಈ ದೇಶದಲ್ಲಿ ತಮ್ಮ ಹಳೆಯದನ್ನು ತೊಳೆಯುವ ಕ್ರಮಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಹಾಗೆ ನೋಡಿದರೆ, ತಮಗಿಂತ ತಮ್ಮ ಆಪ್ತೇಷ್ಟರ ಬಗ್ಗೆ ಹೆಚ್ಚಿನ ಕಾಳಜಿ ಇಲ್ಲಿ ಕಾಣಿಸುತ್ತದೆ. ತಮ್ಮಲ್ಲಿರುವ ಹಳೆಯ ತಟ್ಟೆ, ಲೋಟ, ಚಮಚೆ ಮುಂತಾದ ಕೆಲಸಕ್ಕೆ ಬಾರದ ಪಾತ್ರೆ-ಪಡಗಗಳನ್ನು ಬಂಧು-ಮಿತ್ರರ ಮನೆಯ ಬಾಗಿಲಲ್ಲಿ ಎಸೆಯುತ್ತಾರಂತೆ. ಇದರಿಂದ ಅವರ ಮನೆಯಲ್ಲಿನ ಕೆಡುಕುಗಳು ನಿವಾರಣೆಯಾಗಿ ಒಳಿತಾಗುತ್ತದೆ ಎಂಬ ನಂಬಿಕೆ ಅವರದ್ದು.
ಫಿನ್ಲೆಂಡ್
ಹಳೆಯ ಲೋಹದ ಟಿನ್ ಕರಗಿಸಿ ಅದನ್ನು ನೀರಿಗೆ ಹಾಕಿದರೆ, ಅದು ಯಾವ ಆಕಾರ ತೆಗೆದುಕೊಳ್ಳುತ್ತದೆ ಎನ್ನುವುದು ಮೇಲೆ ಮುಂದಿನ ವರ್ಷ ಹೇಗೆ ಎನ್ನುವುದನ್ನು ಈ ದೇಶದವರು ತಿಳಿಯುತ್ತಾರಂತೆ. ನಮ್ಮಲ್ಲಿಯೂ ಯುಗಾದಿ ಪುರುಷನ ಆಗಮನವನ್ನು ಬಣ್ಣಿಸುತ್ತಾ ಹೊಸವರ್ಷ ಹೇಗಿರಬಹುದು ಎಂದು ಹೇಳುವ ಕ್ರಮವಿರಲಿಲ್ಲವೇ? ಅಂತೆಯೇ, ಕರಗಿದ ಟಿನ್ ಹೃದಯಾಕೃತಿ, ಉಂಗುರ ಮುಂತಾದ ಆಕಾರ ತಳೆದರೆ ಮನೆಯಲ್ಲೊಂದು ಮದುವೆಯಾಗಲಿದೆ ಎಂದೋ, ಹಂದಿಯಂಥ ಯಾವುದೋ ಪ್ರಾಣಿಯಂತೆ ಕಂಡರೆ ಸುಭಿಕ್ಷ ಹೆಚ್ಚಲಿದೆ ಎಂದೋ, ಅಂತೂ ಅವರದ್ದೇ ಒಂದಿಷ್ಟು ಕ್ರಮಗಳಿವೆ.
ಪನಾಮಾ
ಇವರದ್ದು ಹೊಸವರ್ಷ ಸ್ವಾಗತಿಸುವ ಮೊದಲು, ಹಳೆ ವರ್ಷವನ್ನು ʻಮುಗಿಸುವʼ ಕ್ರಮವೊಂದು ಚಾಲ್ತಿಯಲ್ಲಿದೆ. ತಮಗೆ ಬೇಡದ ಪ್ರತಿಕೃತಿಯನ್ನು ಸುಟ್ಟು, ಅದರಲ್ಲೇ ಹಳೆಯ ವರ್ಷವನ್ನು ಬೂದಿ ಮಾಡಿಬಿಡುತ್ತಾರೆ. ಇದರಿಂದ ಹಳೆಯದು ಕಳೆದು, ಹೊಸದನ್ನು ಕರೆಯಲು ಅವರಿಗೆ ಅನುಕೂಲವಂತೆ.
ದಕ್ಷಿಣ ಆಫ್ರಿಕಾ
ತಮಗೆ ಬೇಡದ ಹಳೆಯದ್ದನ್ನೆಲ್ಲ ಮನೆಯಿಂದ ಹೊರಗೆಸೆಯುವ ಕೆಲಸವನ್ನು ಡಿಸೆಂಬರ್ ಅಂತ್ಯದಲ್ಲಿ ತಪ್ಪದೆ ಮಾಡುವ ಸಂಪ್ರದಾಯ ಇಲ್ಲಿನ ಹಲವರದ್ದು. ಹಳೆಯ ವಸ್ತುಗಳ ಜೊತೆಗೆ ಹಳೆಯ ವರ್ಷದ ಕೊಳೆ-ಕೆಡುಕುಗಳನ್ನೂ ಮನೆಯಿಂದ ಹೊರಗೆ ಬಿಸಾಡುತ್ತಿದ್ದೇವೆ ಎಂಬ ಭಾವ ಇವರದ್ದು. ಇದರಿಂದ ಹೊಸತು, ಒಳಿತು ತಮಗೆ ದೊರೆಯುತ್ತದೆಂಬ ನಂಬಿಕೆ ಇಲ್ಲಿನವರದ್ದು.
ಫಿಲಿಪ್ಪೀನ್ಸ್
ಯಾವುದಾದರೂ ಗೋಲಾಕೃತಿ ಇವರಿಗೆ ಶುಭಸೂಚಕವಂತೆ. ಹಾಗಾಗಿ ಹೊಸ ವರ್ಷದ ಹೊತ್ತಿಗೆ ಮನೆ-ಮನಗಳನ್ನು ವೃತ್ತಾಕಾರದಲ್ಲಿ ಅಲಂಕರಿಸುತ್ತಾರೆ. ಅಂದರೆ ದೊಡ್ಡ ಪೋಲ್ಕಾ ಆಕೃತಿ ಹೊಂದಿರುವ ವಸ್ತ್ರಗಳನ್ನು ಧರಿಸುವುದು, ಗೋಲಾಕೃತಿಯ ಹಣ್ಣು-ತರಕಾರಿಗಳನ್ನು ಅಲಂಕಾರಕ್ಕೆ ಇರಿಸುವುದು- ಇಂಥವುಗಳಿಂದ ಧನಲಾಭ ಎಂಬುದು ಅವರ ನಂಬಿಕೆ.
ಬ್ರೆಜಿಲ್
ದಕ್ಷಿಣ ಅಮೆರಿಕ ಖಂಡದ ಹಲವು ದೇಶಗಳಲ್ಲಿ ಬಣ್ಣಗಳ ಬಗ್ಗೆ ನಂಬಿಕೆಗಳು ಹೆಚ್ಚು. ಹಾಗಾಗಿ ಶುಭ ಸೂಚಿಸುವ ಕೆಲವು ಬಣ್ಣಗಳನ್ನು ಬ್ರೆಜಿಲ್‌ನಲ್ಲಿ ಧರಿಸುತ್ತಾರೆ, ಅದರಲ್ಲೂ ಅಂಡರ್‌ವೇರ್‌ಗಳನ್ನು ಈ ಬಣ್ಣಗಳಲ್ಲಿ ಹೊಸವರ್ಷಕ್ಕೆಂದೇ ಧರಿಸುತ್ತಾರಂತೆ. ಉದಾ, ಹೊಸವರ್ಷದಲ್ಲಿ ಯಾರದ್ದೋ ಪ್ರೀತಿ ಬೇಕೆ? ಕೆಂಪು ಬಣ್ಣದ್ದು ಇರಲಿ; ಹಣ ಬೇಕೇ? ಹಳದಿ ಬಣ್ಣದ್ದು ಸೂಕ್ತ… ಇತ್ಯಾದಿ.
ಗ್ರೀಸ್
ಇವರಿಗೆ ಈರುಳ್ಳಿಯೆಂದರೆ ಖುಷಿಯಿಂದ ಕಣ್ಣೀರು ಬರುತ್ತದೆ ಇವರಿಗೆ. ಹಾಗಾಗಿಯೇ ತಮ್ಮ ಮನೆಯ ಮುಂದೆ ಈರುಳ್ಳಿಗಳನ್ನು ನೇತಾಡಿಸುವ ಮೂಲಕ ಹೊಸವರ್ಷವನ್ನು ಸ್ವಾಗತಿಸುತ್ತಾರೆ. ಇದು ಹೊಸಹುಟ್ಟನ್ನು ಸಂಕೇತಿಸುತ್ತದಂತೆ. ಹೆತ್ತವರು ತಮ್ಮ ಮಕ್ಕಳನ್ನು ಹೊಸವರ್ಷದಂದು ಆಶೀರ್ವದಿಸುವಾಗ ತಲೆಯ ಮೇಲೆ ಈರುಳ್ಳಿಯಿಂದ ಮೊಟಕುತ್ತಾರಂತೆ.
ಎಸ್ಟೋನಿಯ
ಹೊಸವರ್ಷದಂದು ಈ ದೇಶದಲ್ಲಿ ತಿನ್ನುವುದೇ ದೊಡ್ಡ ಕೆಲಸ. ಆ ದಿನ ಎಷ್ಟು ಹೆಚ್ಚು ತಿನ್ನುತ್ತಾರೊ ಅಷ್ಟೆ ಸಮೃದ್ಧಿ ಅವರ ಪಾಲಿಗೆ ಎಂಬುದು ಈ ಕ್ರಮದ ಹಿಂದಿನ ನಂಬಿಕೆ. ಹಾಗಾಗಿ ದಿನಕ್ಕೆ ಮೂರಲ್ಲ, ಆರು, ಎಂಟು, ಹತ್ತು ಊಟವನ್ನಾದರೂ ಮಾಡುತ್ತಾರಂತೆ ಇಲ್ಲಿನ ಜನ.
ಈ ಸುದ್ದಿಯನ್ನೂ ಓದಿ: New year Celebration: ಹೊಸ ವರ್ಷಾಚರಣೆ: ಈ ತಾಣಗಳು ಸೈಲೆಂಟ್, ನೋ ಎಂಟ್ರಿ!