Wednesday, 23rd October 2024

Nobel Prize in Literature 2024: ದಕ್ಷಿಣ ಕೊರಿಯಾದ ಲೇಖಕಿ ಹಾನ್ ಕಾಂಗ್‌ಗೆ ಸಾಹಿತ್ಯದ ನೊಬೆಲ್ ಪ್ರಶಸ್ತಿ

Nobel Prize in Literature 2024

ಸ್ಟಾಕ್ಹೋಮ್ (ಸ್ವೀಡನ್‌): ಐತಿಹಾಸಿಕ ಆಘಾತಗಳನ್ನು ಎದುರಿಸುವ ಮತ್ತು ಮಾನವ ಜೀವನದ ದುರ್ಬಲತೆಯನ್ನು ಬಹಿರಂಗಪಡಿಸುವ ತೀವ್ರವಾದ ಕಾವ್ಯಾತ್ಮಕ ಗದ್ಯಕ್ಕಾಗಿ ದಕ್ಷಿಣ ಕೊರಿಯಾದ ಲೇಖಕಿ ಹಾನ್ ಕಾಂಗ್ (Han Kang) ಅವರಿಗೆ 2024ರ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಗುರುವಾರ ಘೋಷಿಸಲಾಗಿದೆ (Nobel Prize in Literature 2024).

ಹಾನ್ ಕಾಂಗ್ ಅವರ ತಂದೆ ಪ್ರಸಿದ್ಧ ಕಾದಂಬರಿಕಾರರಾಗಿದ್ದರು. ಹಾನ್ ಕಾಂಗ್ ಬರವಣಿಗೆಯ ಜತೆಗೆ ಕಲೆ ಮತ್ತು ಸಂಗೀತದಲ್ಲಿಯೂ ತೊಡಗಿಸಿಕೊಂಡಿದ್ದಾರೆ. 54 ವರ್ಷದ ಹಾನ್ ಕಾಂಗ್ 1970ರಲ್ಲಿ ದಕ್ಷಿಣ ಕೊರಿಯಾದ ಗ್ವಾಂಗ್ಜುನಲ್ಲಿ ಜನಿಸಿದರು. ನಂತರ 9ನೇ ವಯಸ್ಸಿನಲ್ಲಿ ತಮ್ಮ ಕುಟುಂಬದ ಜತೆಗೆ ಸಿಯೋಲ್‌ಗೆ ತೆರಳಿದರು. 1993ರಲ್ಲಿ ಸಾಹಿತ್ಯ ನಿಯತಕಾಲಿಕದಲ್ಲಿ ಅವರ ಹಲವು ಕವಿತೆಗಳ ಪ್ರಕಟಗೊಂಡವು. ಹೀಗೆ ಅವರು ತಮ್ಮ ವೃತ್ತಿಜೀವನವನ್ನು ಯಶಸ್ವಿಯಾಗಿ ಆರಂಭಿಸಿದರು.

1995ರಲ್ಲಿ ಕಥೆಗಳ ಸಂಕಲನ ಹೊರ ತರುವುದರೊಂದಿಗೆ ಅವರು ಅವರ ಗದ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಕಾದಂಬರಿಗಳು ಮತ್ತು ಸಣ್ಣ ಕಥೆಗಳೆರಡರಲ್ಲೂ ಸಾಹಿತ್ಯ ಕೃಷಿ ಆರಂಭಿಸಿದರು. 2016ರಲ್ಲಿ ಹಾನ್ ಕಾಂಗ್ ಅವರ ʼದಿ ವೆಜಿಟೇರಿಯನ್ʼ ಕಾದಂಬರಿಗಾಗಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿತು. ಇದರಲ್ಲಿ ಮಾಂಸ ತಿನ್ನುವುದನ್ನು ನಿಲ್ಲಿಸುವ ಮಹಿಳೆಯ ನಿರ್ಧಾರದಿಂದ ಎದುರಾಗುವ ವಿನಾಶಕಾರಿ ಪರಿಣಾಮಗಳನ್ನು ಮನೋಜ್ಞವಾಗಿ ವಿವರಿಸಲಾಗಿದೆ.

ಮೊದಲ ದಕ್ಷಿಣ ಕೊರಿಯಾ ಸಾಹಿತಿ

ವಿಶೇಷ ಎಂದರೆ ಹಾನ್ ಕಾಂಗ್ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ದಕ್ಷಿಣ ಕೊರಿಯಾದ ಮೊದಲ ಸಾಹಿತಿ ಎನಿಸಿಕೊಂಡಿದ್ದಾರೆ. “ಅವರು ದೇಹ ಮತ್ತು ಆತ್ಮ, ಜೀವಂತ ಮತ್ತು ಸತ್ತವರ ನಡುವಿನ ಸಂಪರ್ಕಗಳ ಬಗ್ಗೆ ಅನನ್ಯ ಅರಿವು ಹೊಂದಿದ್ದಾರೆ. ಅವರ ಕಾವ್ಯಾತ್ಮಕ ಮತ್ತು ಪ್ರಾಯೋಗಿಕ ಶೈಲಿಯಲ್ಲಿ ಸಮಕಾಲೀನ ಗದ್ಯದಲ್ಲಿ ಹೊಸ ಪ್ರಯೋಗ ನಡೆಸಿದ್ದಾರೆʼʼ ಎಂದು ನೊಬೆಲ್ ಸಮಿತಿಯ ಅಧ್ಯಕ್ಷ ಆ್ಯಂಡರ್ಸ್ ಓಲ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚೀನಾದ ಬರಹಗಾರ ಕ್ಯಾನ್ ಕ್ಸುಯೆ, ಕೀನ್ಯಾದ ಎನ್ಗುಗಿ ವಾ ಥಿಯೋಂಗೊ, ಆಸ್ಟ್ರೇಲಿಯಾದ ಜೆರಾಲ್ಡ್ ಮುರ್ನಾನೆ, ಕೆನಡಾದ ಅನ್ನೆ ಕಾರ್ಸನ್ ಅವರಂತಹ ಘಟಾನುಘಟಿ ಲೇಖಕರು ಅಂತಿಮ ಸುತ್ತಿನಲ್ಲಿದ್ದರು. ಇವರನ್ನೆಲ್ಲ ಹಿಂದಿಕ್ಕಿದ ಹಾನ್ ಕಾಂಗ್ ಅವರಿಗೆ ಪ್ರಶಸ್ತಿ ಲಭಿಸಿದೆ.

ಕಳೆದ ವರ್ಷ ಪ್ರಶಸ್ತಿ ಲಭಿಸಿದ್ದು ಯಾರಿಗೆ?

ನಾಟಕಕಾರ, ಕಾದಂಬರಿಕಾರ ಹಾಗೂ ನಾರ್ಡಿಕ್ ಬರವಣಿಗೆಯ ಮಾಸ್ಟರ್ ಜಾನ್ ಫಾಸ್ಸೆ ಅವರಿಗೆ 2023ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಲಭಿಸಿತ್ತು. ಜಾನ್ ಫಾಸ್ಸೆ ಅವರ ಕಾದಂಬರಿಗಳು ಧ್ವನಿ ಇಲ್ಲದವರಿಗೆ ದನಿಯಾಗಿವೆ ಎಂದು ನೊಬೆಲ್ ಪ್ರಶಸ್ತಿ ಅಕಾಡೆಮಿ ಬಣ್ಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಫಾಸ್ಸೆ ಅವರ ಬರಹ “ನಾರ್ವೇಜಿಯನ್ ಹಿನ್ನೆಲೆಯ ಭಾಷೆ ಮತ್ತು ಸ್ವಭಾವದಲ್ಲ” ಬೇರೂರಿದೆ ಎಂದು ನೊಬೆಲ್ ಸಾಹಿತ್ಯ ಸಮಿತಿಯ ಅಧ್ಯಕ್ಷ ಆ್ಯಂಡರ್ಸ್ ಓಲ್ಸನ್ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Nobel Prize in Physics 2024: ಜಾನ್ ಜೆ. ಹಾಪ್‌ಫೀಲ್ಡ್‌, ಜೆಫ್ರಿ ಇ. ಹಿಂಟನ್‌ಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ

ಈ ಬಾರಿಯ ನೊಬೆಲ್‌ ಪ್ರಶಸ್ತಿಯನ್ನು ಅಕ್ಟೋಬರ್‌ 7ರಿಂದ ಘೋಷಿಸಲಾಗುತ್ತಿದೆ. ಅಕ್ಟೋಬರ್‌ 11ರಂದು ಶಾಂತಿ ಮತ್ತು ಅಕ್ಟೋಬರ್ 14ರಂದು ಅರ್ಥಶಾಸ್ತ್ರ ಪ್ರಶಸ್ತಿ ಘೋಷಣೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.