ನವದೆಹಲಿ: 2024ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಾನ್ ಜೆ. ಹಾಪ್‌ಫೀಲ್ಡ್ (John J. Hopfield) ಮತ್ತು ಜೆಫ್ರಿ ಇ. ಹಿಂಟನ್ (Geoffrey E. Hinton) ಅವರಿಗೆ ಘೋಷಿಸಲಾಗಿದೆ. ಕೃತಕ ನರ ಜಾಲಗಳೊಂದಿಗೆ ಯಂತ್ರ ಕಲಿಕೆಯನ್ನು ಸಕ್ರಿಯಗೊಳಿಸುವ ಆವಿಷ್ಕಾರಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ಪ್ರಕಟಿಸಿದೆ (Nobel Prize in Physics 2024). ಜಾನ್ ಜೆ. ಹಾಪ್‌ಫೀಲ್ಡ್ ಅಮೆರಿಕ ಮೂಲದವರಾಗಿದ್ದು, ʼಗಾಡ್ ಫಾದರ್ ಆಫ್ ಎಐʼ ಎಂದು ಕರೆಯಲ್ಪಡುವ ಜಾನ್ ಜೆ. ಹಾಪ್‌ಫೀಲ್ಡ್ ಇಂಗ್ಲೆಂಡ್ ಮೂಲದವರು.
ಕಳೆದ ವರ್ಷ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು. ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ತಂತ್ರಜ್ಞಾನಕ್ಕೆ ಅಗತ್ಯವಾದ ಪರಮಾಣುಗಳ ಪ್ರಮುಖ ಭಾಗವಾದ ಎಲೆಕ್ಟ್ರಾನ್‌ಗಳೊಂದಿಗಿನ ಆವಿಷ್ಕಾರಕ್ಕಾಗಿ ಭೌತಶಾಸ್ತ್ರಜ್ಞರಾದ ಆ್ಯನಿ ಎಲ್ ಹುಲಿಯರ್, ಪಿಯರೆ ಅಗೋಸ್ಟಿನಿ ಮತ್ತು ಫೆರೆಂಕ್ ಕ್ರೌಜ್ (Anne L’Huillier, Pierre Agostini, and Ferenc Krausz) ಅವರಿಗೆ 2023ರ ಪ್ರಶಸ್ತಿ ನೀಡಲಾಗಿತ್ತು.
BREAKING NEWS
— The Nobel Prize (@NobelPrize) October 8, 2024
The Royal Swedish Academy of Sciences has decided to award the 2024 #NobelPrize in Physics to John J. Hopfield and Geoffrey E. Hinton “for foundational discoveries and inventions that enable machine learning with artificial neural networks.” pic.twitter.com/94LT8opG79
ವೈದ್ಯಕೀಯ ನೊಬೆಲ್ ಪ್ರಶಸ್ತಿ
ವೈದ್ಯಕೀಯ ಕ್ಷೇತ್ರಕ್ಕೆ ಅಭೂತಪೂರ್ವ ಕೊಡುಗೆಯನ್ನು ಗುರುತಿಸಿ ವಿಜ್ಞಾನಿಗಳಾದ ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ ಸೋಮವಾರ ವೈದ್ಯಕೀಯ ನೊಬೆಲ್ ಪ್ರಶಸ್ತಿ(Nobel Prize 2024)ಯನ್ನು ಘೋಷಿಸಲಾಗಿತ್ತು. ಮೈಕ್ರೋಆರ್‌ಎನ್‌ಎ ಆವಿಷ್ಕಾರಕ್ಕಾಗಿ ಮತ್ತು ಜೀನ್ ಅಭಿವ್ಯಕ್ತಿಯನ್ನು ನಿಯಂತ್ರಿಸುವಲ್ಲಿ ಅದರ ಪಾತ್ರಕ್ಕಾಗಿ ಇಬ್ಬರೂ ಜಂಟಿಯಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ಅವರ ಆವಿಷ್ಕಾರವು ಜೀವಿಗಳು ಹೇಗೆ ಅಭಿವೃದ್ಧಿ ಹೊಂದುತ್ತವೆ ಮತ್ತು ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥೈಸಿಕೊಳ್ಳಲು ಅತ್ಯಗತ್ಯವಾಗಿದೆ ಎಂದು ನೊಬೆಲ್ ಅಸೆಂಬ್ಲಿ ಹೇಳಿದೆ.
ಔಷಧ ಕ್ಷೇತ್ರಕ್ಕೆ ಕೊಡುಗೆ ನೀಡಿದ ಸಾಧಕರನ್ನು ಸ್ವೀಡನ್‌ನ ಕ್ಯಾರೊಲಿನ್‌ಸ್ಕಾ ಇನ್‌ಸ್ಟಿಟ್ಯೂಟ್ ವೈದ್ಯಕೀಯ ವಿಶ್ವವಿದ್ಯಾಲಯದ ನೊಬೆಲ್ ಅಸೆಂಬ್ಲಿ ಆಯ್ಕೆ ಮಾಡುತ್ತದೆ ಮತ್ತು 11 ಮಿಲಿಯನ್ ಸ್ವೀಡಿಷ್ ಕ್ರೌನ್‌ಗಳನ್ನು (₹92,429,645) ಬಹುಮಾನವನ್ನಾಗಿ ನೀಡುತ್ತುದೆ. ಈ ವರ್ಷದ ನೊಬೆಲ್ ಪ್ರಶಸ್ತಿಯು ಜೀನ್ ಚಟುವಟಿಕೆಯನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ನಿಯಂತ್ರಿಸುವ ಮೂಲಭೂತ ತತ್ವವನ್ನು ಕಂಡುಹಿಡಿದ ಈ ಇಬ್ಬರು ವಿಜ್ಞಾನಿಗಳಿಗೆ ಸಂದಿದೆ.
ಈ ಸುದ್ದಿಯನ್ನೂ ಓದಿ: Nobel Prize 2024: ವಿಜ್ಞಾನಿಗಳಾದ ಅಂಬ್ರೋಸ್, ಗ್ಯಾರಿ ರುವ್ಕುನ್‌ಗೆ ನೊಬೆಲ್ ಪ್ರಶಸ್ತಿ
ವಿಜೇತರು ತಮ್ಮ ಪ್ರಶಸ್ತಿಗಳನ್ನು ಡಿಸೆಂಬರ್ 10ರಂದು ನೊಬೆಲ್ ಅವರ ಮರಣದ ವಾರ್ಷಿಕೋತ್ಸವದಂದು ಸ್ವೀಕರಿಸಲಿದ್ದಾರೆ. ಬುಧವಾರ ರಸಾಯನಶಾಸ್ತ್ರ, ಗುರುವಾರ ಸಾಹಿತ್ಯ, ಶುಕ್ರವಾರ ಶಾಂತಿ ಮತ್ತು ಅಕ್ಟೋಬರ್ 14ರಂದು ಅರ್ಥಶಾಸ್ತ್ರ ಪ್ರಶಸ್ತಿ ಘೋಷಣೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.