Monday, 6th January 2025

Oldest University: ವಿಶ್ವದಲ್ಲೇ ಅತೀ ಪ್ರಾಚೀನ ವಿಶ್ವವಿದ್ಯಾನಿಲಯ ಯಾವುದು ಗೊತ್ತೆ? ಇಲ್ಲಿದೆ ಅಪರೂಪದ ಮಾಹಿತಿ

Oldest University

ವಿಶ್ವದ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯ (Oldest University) ಯಾವುದು ಎಂಬ ಬಗ್ಗೆ ನಿರಂತರ ಚರ್ಚೆಯಾಗುತ್ತಿದೆ. ಮೊರಕ್ಕಾದಲ್ಲಿರುವ (Morocco) ಎ.ಐ. ಕ್ಯುರಾರೌಯಿನೆ (Al Quaraouiyine) ವಿ.ವಿ. ಮತ್ತು ಇಟಲಿಯಲ್ಲಿರುವ (Italy) ಬೊಲೊಗ್ನಾ ವಿ.ವಿ.ಗಳನ್ನು (University of Bologna) ಅತ್ಯಂತ ಪ್ರಾಚೀನ ವಿಶ್ವವಿದ್ಯಾನಿಲಯಗಳೆಂದು ಪರಿಗಣಿಸಲಾಗುತ್ತದೆ. ಈ ಎರಡೂ ವಿ.ವಿ.ಗಳೂ ಭವ್ಯ ಇತಿಹಾಸವನ್ನು ಹೊಂದಿವೆ ಮತ್ತು ಆ ಕಾಲದ ಶಿಕ್ಷಣ ಕ್ಷೇತ್ರಕ್ಕೆ ಇವುಗಳು ಮಹತ್ತರವಾದ ಕೊಡುಗೆಗಳನ್ನು ನೀಡಿವೆ. ಆದರೆ ಇವೆರಡೂ ವಿ.ವಿ.ಗಳೂ ವಿಭಿನ್ನ ಸಂಪ್ರದಾಯ ಮತ್ತು ಕಾಲಘಟ್ಟವನ್ನು ಪ್ರತಿನಿಧಿಸುತ್ತಿವೆ.

ಎ.ಐ. ಕ್ಯುರಾರೌಯಿನೆ ವಿಶ್ವವಿದ್ಯಾನಿಲಯ

ಈ ವಿಶ್ವವಿದ್ಯಾನಿಲಯವು ಕ್ರಿ.ಶ. 859ರಲ್ಲಿ ಸ್ಥಾಪನೆಯಾಯಿತು. ಇದು ಮೊರಕ್ಕಾದ ಫೆಝ್ ಎಂಬಲ್ಲಿದೆ. ಇದು ಮಸೀದಿಯಾಗಿ ಪ್ರಾರಂಭಗೊಂಡಿದ್ದು, ಬಳಿಕದ ದಿನಗಳಲ್ಲಿ ಇದೊಂದು ಪ್ರಮುಖ ಧಾರ್ಮಿಕ ಮತ್ತು ಶಿಕ್ಷಣ ಕೇಂದ್ರವಾಗಿ ಪ್ರವರ್ಧಮಾನಕ್ಕೆ ಬಂತು. ಇನ್ನೊಂದು ವಿಶೇಷವೆಂದರೆ ಇಸ್ಲಾಂ ಧರ್ಮದ ಸುವರ್ಣ ಯುಗದಲ್ಲಿ ಈ ವಿ.ವಿ. ತನ್ನ ಖ್ಯಾತಿಯ ಉತ್ತುಂಗತೆಯನ್ನು ಮುಟ್ಟಿತ್ತು. ತಂತ್ರಜ್ಞಾನ, ಗಣಿತ, ಖಗೋಳಶಾಸ್ತ್ರ ಮತ್ತು ಭಾಷಾ ಕಲಿಕೆಗಳನ್ನು ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುತ್ತಿತ್ತು. ಇದನ್ನು ಯುನೆಸ್ಕೋ ಗುರುತಿಸಿದ್ದು, ನಿರಂತರ ಕಾರ್ಯಚಟುವಟಿಕೆಗಳ ಮೂಲಕ ಪದವಿ ಪ್ರದಾನ ಮಾಡುತ್ತಿದ್ದ ಅತ್ಯಂತ ಪ್ರಾಚೀನ ವಿವಿ ಎಂಬ ನೆಲೆಗಟ್ಟಿನಲ್ಲಿ ಇದು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗೂ ಸೇರ್ಪಡೆಗೊಂಡಿದೆ. 1963ರಲ್ಲಿ ಇದನ್ನು ಮೊರಕ್ಕಾದ ಮಾಡರ್ನ್ ಸ್ಟೇಟ್ ಯುನಿವರ್ಸಿಟಿ ಸಿಸ್ಟಮ್ ಜತೆ ಸೇರ್ಪಡೆಗೊಳಿಸಲಾಯಿತು ಮತ್ತು ಇದು ಇಂದಿಗೂ ಜಾಗತಿಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಈ ವಿಶ್ವವಿದ್ಯಾನಿಲಯದ ಪ್ರಾಮುಖ್ಯತೆ ಕೇವಲ ಇದರ ಪ್ರಾಚೀನತೆಗೆ ಮಾತ್ರ ಸಿಮಿತವಾಗಿಲ್ಲ, ಬದಲಾಗಿ ಇದು ಕಾಲಾನುಕಾಲದಲ್ಲಿ ಜ್ಞಾನದ ಹರಿವನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ವಿಶ್ವದ ವಿವಿಧ ಕಡೆಗಳ ಚಿಂತಕರು ಈ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಲು ಬರುತ್ತಿದ್ದರು. ಖ್ಯಾತ ಇತಿಹಾಸಕಾರ ಮತ್ತು ತತ್ವಜ್ಞಾನಿ ಇಬ್ನ್ ಖಲ್ದುನ್ ಪ್ರಮುಖರಾಗಿದ್ದಾರೆ.

ಬೊಲೊಗ್ನಾ ವಿಶ್ವವಿದ್ಯಾನಿಲಯ

ಯುರೋಪ್ ಭಾಗದ ಪ್ರಾಚೀನ ವಿಶ್ವವಿದ್ಯಾನಿಲಯಗಳಲ್ಲಿ ಬೊಲೊಗ್ನಾ ವಿಶ್ವವಿದ್ಯಾನಿಲಯವು ಮೇಲ್ಪಂಕ್ತಿಯಲ್ಲಿದೆ. ಈ ವಿಶ್ವವಿದ್ಯಾನಿಲಯವು ಕ್ರಿ.ಶ. 1088ರಲ್ಲಿ ಸ್ಥಾಪನೆಗೊಂಡಿತು. ಇದನ್ನು ‘ಅಧ್ಯಯನಗಳ ಸ್ಪೂರ್ತಿ ಮಾತೆ’ ಎಂದು ಕರೆಯಲಾಗುತ್ತದೆ. ವ್ಯವಸ್ಥಿತ ವಿದ್ಯಾರ್ಥಿಗಳು ಮತ್ತು ಚಿಂತಕರ ಸಮೂಹವನ್ನೊಳಗೊಂಡು ವಿಶ್ವವಿದ್ಯಾನಿಲಯದ ಸ್ವರೂಪವನ್ನು ಪಡೆದುಕೊಂಡಿದ್ದ ಸಂಸ್ಥೆಯೆಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಇದು ಕಾನೂನು ಕಲಿಕೆಯ ಕೇಂದ್ರವಾಗಿ ಪ್ರಾರಂಭಗೊಂಡು ಬಳಿಕ ಕಾಲಾನುಕ್ರಮದಲ್ಲಿ ವಿವಿಧ ವಿಷಯಗಳ ಅಧ್ಯಯನ ಕೇಂದ್ರವಾಗಿ ಬೆಳವಣಿಗೆ ಹೊಂದಿ ಖ್ಯಾತಿಯನ್ನು ಪಡೆಯಿತು.

ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಒಂದು ಆಡಳಿತ ಸ್ವರೂಪವನ್ನು ಒಳಗೊಂಡ ಒಂದು ವ್ಯವಸ್ಥಿತ ಶಿಕ್ಷಣ ಕೇಂದ್ರವಾಗಿ ಇದು ಆ ಕಾಲದಲ್ಲಿಯೇ ಹೆಸರುವಾಸಿಯಾಗಿತ್ತು. ಶಿಕ್ಷಣ ಶುಲ್ಕ ಹಾಗೂ ಕೋರ್ಸ್‌ಗಳ ಬಗ್ಗೆ ಆ ಕಾಲದಲ್ಲೇ ಪ್ರೊಫೆಸರ್ ಗಳೊಂದಿಗೆ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಚರ್ಚೆ ನಡೆಸುವ ಅವಕಾಶ ಈ ವಿ.ವಿ.ಯಲ್ಲಿತ್ತು. ಈ ವ್ಯವಸ್ಥೆಯೇ ಬಳಿಕ ವಿಶ್ವದ ವಿವಿಧ ಆಧುನಿಕ ವಿಶ್ವವಿದ್ಯಾನಿಲಯಗಳಿಗೆ ಸ್ಪೂರ್ತಿಯಾಗಿರುವುದು ವಿಶೇಷ.

ಇದನ್ನೂ ಓದಿ: Bus Fare Hike: ಆರ್. ಅಶೋಕ್‌ ಸಾರಿಗೆ ಸಚಿವರಾಗಿದ್ದಾಗ ಶೇ.47.8 ಏರಿಕೆಯಾಗಿತ್ತು ಬಸ್‌ ಟಿಕೆಟ್‌ ದರ!

ಇಂದು, ಬೊಲೊಗ್ನೋ ವಿಶ್ವವಿದ್ಯಾನಿಲಯದಲ್ಲಿ ಸುಮಾರು 87,760 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇವರಲ್ಲಿ ಹಲವಾರು ಅಂತಾರಾಷ್ಟ್ರೀಯ ವಿದ್ಯಾರ್ತಿಗಳೂ ಸೇರಿದ್ದಾರೆ. ಈ ವಿವಿಯ ಹಳೆ ವಿದ್ಯಾರ್ಥಿಗಳಲ್ಲಿ ಮೂವರು ಪೋಪ್‌ಗಳು ಮತ್ತು ಹಲವಾರು ಪ್ರತಿಷ್ಠಿತ ರಾಜಕಾರಣಿಗಳು ಮತ್ತು ಉದ್ಯಮಿಗಳು ಸೇರಿದ್ದಾರೆ.

ವಿಶೇಷವೆಂದರೆ ಇವೆರಡೂ ವಿಶ್ವವಿದ್ಯಾನಿಲಯಗಳು ತಮ್ಮದೇ ವಿಶ್ವದ ಹಳೆಯ ವಿಶ್ವವಿದ್ಯಾನಿಲಯಗಳೆಂದು ಹೇಳಿಕೊಳ್ಳುತ್ತವೆ., ಎ.ಐ. ಕ್ಯುರಾರೌಯಿನೆ ವಿಶ್ವವಿದ್ಯಾನಿಲಯವು ಇಸ್ಲಾಮಿಕ್ ಸಂಸ್ಕೃತಿ ಮತ್ತು ಶಿಕ್ಷಣದಲ್ಲಿ ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇನ್ನು ಬೊಲೊಗ್ನೋ ವಿಶ್ವವಿದ್ಯಾನಿಲಯವು ಪಾಶ್ಚಾತ್ಯ ಶೈಕ್ಷಣಿಕ ಸಂಪ್ರದಾಯವನ್ನು ರೂಪಿಸುವಲ್ಲಿ ಮೂಲ ತಳಹದಿಯಾಗಿ ಗುರುತಿಸಿಕೊಳ್ಳುತ್ತಿದೆ. ಇವೆರಡೂ ಶಿಕ್ಷಣ ಸಂಸ್ಥೆಗಳೂ ತಮ್ಮದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದ್ದು, ವಿಶ್ಯಾದ್ಯಂತ ಆಧುನಿಕ ಶಿಕ್ಷಣವನ್ನು ಪ್ರಭಾವಿಸಿದೆ.