Wednesday, 25th December 2024

Pakistani Airstrike: ಅಫ್ಘಾನಿಸ್ತಾನದ ಮೇಲೆ ಪಾಕ್‌ ಸೇನೆಯ ಏರ್‌ಸ್ಟ್ರೈಕ್‌; 15 ಬಲಿ- ತಾಲಿಬಾನ್‌ನಿಂದ ಪ್ರತೀಕಾರದ ಪ್ರತಿಜ್ಞೆ

pak

ಕಾಬೂಲ್: ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದ ಬರ್ಮಾಲ್ ಜಿಲ್ಲೆಯ ಮೇಲೆ ಪಾಕಿಸ್ತಾನ ಸರಣಿ ವೈಮಾನಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ(Pakistani Airstrike). ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಇದೆ ಎನ್ನಲಾಗಿದೆ. ಡಿ. 24 ರ ರಾತ್ರಿ ಪಾಕಿಸ್ತಾನ ಸೇನೆ ಲಮನ್ ಸೇರಿದಂತೆ ಏಳು ಗ್ರಾಮಗಳನ್ನು ಗುರಿಯಾಗಿಸಿ ಭೀಕರ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಬಾಂಬ್ ದಾಳಿಗೆ ಪಾಕಿಸ್ತಾನದ ಜೆಟ್‌ಗಳು ಕಾರಣ ಎಂದು ಸ್ಥಳೀಯ ಮೂಲಗಳು ಹೇಳಿವೆ. ವರದಿಗಳ ಪ್ರಕಾರ ಬರ್ಮಾಲ್‌ನ ಮುರ್ಗ್ ಬಜಾರ್ ಗ್ರಾಮವನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಇನ್ನು ತಾಲಿಬಾನ್‌ನ ರಕ್ಷಣಾ ಸಚಿವಾಲಯವು ಬರ್ಮಾಲ್, ಪಕ್ಟಿಕಾ ಮೇಲಿನ ವೈಮಾನಿಕ ದಾಳಿಯ ನಂತರ ಪ್ರತೀಕಾರ ತೀರಿಸಲು ಪ್ರತಿಜ್ಞೆ ಮಾಡಿದೆ.

ಪಾಕಿಸ್ತಾನದ ಅಧಿಕಾರಿಗಳು ವೈಮಾನಿಕ ದಾಳಿಯನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ, ಸೇನೆಗೆ ನಿಕಟವಾಗಿರುವ ಭದ್ರತಾ ಮೂಲಗಳು ಗಡಿಯ ಸಮೀಪವಿರುವ ತಾಲಿಬಾನ್ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿವೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಈ ದಾಳಿ ನಡೆದಿದೆ. ಪಾಕಿಸ್ತಾನಿ ತಾಲಿಬಾನ್, ಅಥವಾ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ), ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನಿ ಪಡೆಗಳ ಮೇಲೆ ತನ್ನ ದಾಳಿಯನ್ನು ಹೆಚ್ಚಿಸಿದೆ. ಅಫ್ಘಾನ್ ತಾಲಿಬಾನ್ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.

ತಾಲಿಬಾನ್ ರಕ್ಷಣಾ ಸಚಿವಾಲಯದ ವಕ್ತಾರರಾದ ಎನಾಯತುಲ್ಲಾ ಖ್ವಾರಾಜ್ಮಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನ ಸೇನೆ ನಡೆಸಿದ ದಾಳಿಯಲ್ಲಿ ಹಲವು ಮಕ್ಕಳು ಮತ್ತು ಇತರ ನಾಗರಿಕರು ಹುತಾತ್ಮರಾಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದಿದ್ದಾರೆ. ಆದರೂ ಯಾವುದೇ ಅಧಿಕೃತ ಸಾವುನೋವುಗಳ ಅಂಕಿಅಂಶಗಳನ್ನು ಒದಗಿಸಲಾಗಿಲ್ಲ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 15 ಮೃತದೇಹಗಳು ಪತ್ತೆಯಾಗಿವೆ ಮತ್ತು ಶೋಧ ಪ್ರಯತ್ನಗಳು ಮುಂದುವರಿದಂತೆ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮೂಲಗಳು ವರದಿ ಮಾಡಿದೆ.

ಈ ಸುದ್ದಿಯನ್ನೂ ಓದಿ: Imran Khan: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಿಡುಗಡೆಗೆ ಆಗ್ರಹಿಸಿ ಪಾಕಿಸ್ತಾನದಲ್ಲಿ ಬೃಹತ್‌ ಪ್ರತಿಭಟನೆ