Sunday, 15th December 2024

ಕೋವಿಡ್ ಸೋಂಕು ಹೆಚ್ಚಳ: ಭಾರತ ಪ್ರವಾಸ ಮುಂದೂಡಿ ಎಂದ ’ದೊಡ್ಡಣ್ಣ’

ವಾಷಿಂಗ್ಟನ್: ಕೋವಿಡ್ 19 ಸೋಂಕು ಪ್ರಕರಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳುವುದನ್ನು ಮುಂದೂಡಬೇಕೆಂದು ಅಮೆರಿಕ ತನ್ನ ಪ್ರಜೆಗಳಿಗೆ ಸಲಹೆ ನೀಡಿರುವುದಾಗಿ ವರದಿಯಾಗಿದೆ.

ಅಮೆರಿಕದ ಪ್ರಜೆಗಳು ಭಾರತ ಪ್ರವಾಸ ರದ್ದುಪಡಿಸುವಂತೆ ಸಿಡಿಸಿ ಸಲಹೆ ನೀಡಿರುವುದಾಗಿ ಹೇಳಿದೆ. ಭಾರತದಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗುತ್ತಿದೆ. ಲಸಿಕೆ ಪಡೆದವರು ಕೂಡ ಭಾರತಕ್ಕೆ ಪ್ರವಾಸ ಕೈಗೊಳ್ಳುವುದು ಅಪಾಯಕಾರಿ ಯಾಗಿದೆ ಎಂದು ಸಿಡಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಒಂದು ವೇಳೆ ಭೇಟಿ ನೀಡಲೇಬೇಕು ಎಂದಾದಲ್ಲಿ ಪ್ರವಾಸಕ್ಕೂ ಮುನ್ನ ಲಸಿಕೆ ಪಡೆದುಕೊಂಡ ನಂತರವೇ ತೆರಳಬೇಕು. ಮಾಸ್ಕ್ ಕಡ್ಡಾಯ ಧರಿಸಿರಬೇಕು, ಆರು ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದೆ. ನೀವು ವಿದೇಶದಿಂದ ಪ್ರಯಾಣ ಮುಗಿಸಿ ಅಮೆರಿಕಕ್ಕೆ ವಾಪಸ್ ಆದ ನಂತರ ಸ್ವಯಂ ಕ್ವಾರಂಟೈನ್ ಗೂ ಒಳಗಾಗಬೇಕಾಗಿಲ್ಲ ಎಂದು ಪ್ರಯಾಣಿಕರಿಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.