Thursday, 19th September 2024

Ryan Wesley Routh: ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಿದ ರಿಯಾನ್ ವೆಸ್ಲಿ ರೌತ್ ಯಾರು? ಈತನ ಹಿನ್ನೆಲೆ ಏನು?

Ryan Wesley Routh

ವಾಷಿಂಗ್ಟನ್‌: ಅಮೆರಿಕದಲ್ಲಿ ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ (US Presidential Election 2024) ನಡೆಯಲಿದ್ದು, ಬಿರುಸಿನ ಪ್ರಚಾರ ನಡೆಯುತ್ತಿದೆ. ಈ ಮಧ್ಯೆ ಮಾಜಿ ಅಧ್ಯಕ್ಷರೂ ಆದ ಈ ಬಾರಿಯ ಸ್ಪರ್ಧಿ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ಮೇಲೆ ಮತ್ತೊಂದು ಗುಂಡಿನ ದಾಳಿ ನಡೆದಿದೆ. ಭಾನುವಾರ (ಸೆಪ್ಟೆಂಬರ್‌ 15) ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ನಡೆದ ದಾಳಿಯೊಂದರಿಂದ ಅವರು ಪಾರಾಗಿದ್ದಾರೆ. ಸದ್ಯ ದಾಳಿ ನಡೆಸಿದ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನನ್ನು 58 ವರ್ಷದ ರಿಯಾನ್ ವೆಸ್ಲಿ ರೌತ್ (Ryan Wesley Routh) ಎಂದು ಗುರುತಿಸಲಾಗಿದೆ.

ರಿಯಾನ್ ವೆಸ್ಲಿ ರೌತ್ ಬಳಿಯಿಂದ ಎಕೆ -47 ಶೈಲಿಯ ರೈಫಲ್ ಮತ್ತು ಗೋಪ್ರೊ (GoPro) ಕ್ಯಾಮರಾವನ್ನು ವಶಪಡಿಸಿಕೊಳ್ಳಲಾಗಿದೆ. 2 ತಿಂಗಳ ಅಂತರದಲ್ಲಿ ಟ್ರಂಪ್‌ ಮೇಲೆ ನಡೆಯುತ್ತಿರುವ 2ನೇ ದಾಳಿ ಇದಾಗಿದೆ.

ಪರಾರಿಯಾಗಿದ್ದ

ʼʼಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ತಮ್ಮ ಗಾಲ್ಫ್ ಕೋರ್ಸ್‌ನಲ್ಲಿ ಆಡುತ್ತಿದ್ದ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಶಂಕಿತ ರಿಯಾನ್ ವೆಸ್ಲಿ ರೌತ್ ಪೊದೆಯೊಂದರ ಬಳಿ ಅವಿತು ಕುಳಿತಿದ್ದ. ಸೀಕ್ರೆಟ್ ಸರ್ವಿಸ್ ಏಜೆಂಟರು ಗುಂಡು ಹಾರಿಸಿದಾಗ ಪೊದೆಗಳಿಂದ ಹೊರಬಂದು ಕಪ್ಪು ಕಾರಿನಲ್ಲಿ ಪರಾರಿಯಾಗಿದ್ದ. ನಂತರ ಆತನನ್ನು ವಶಕ್ಕೆ ಪಡೆಯಲಾಗಿದೆʼʼ ಎಂದು ಮೂಲಗಳು ತಿಳಿಸಿವೆ.

ಯಾರು ಈ ರಿಯಾನ್ ವೆಸ್ಲಿ ರೌತ್ ?

ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ರೌತ್ ಉತ್ತರ ಕೆರೊಲಿನಾ ಗ್ರೀನ್ಸ್‌ಬೊರೊ (North Carolina Greensboro) ಮೂಲದವನು. ಈ ಹಿಂದೆ ಆತ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ಕಾರ್ಯ ಮಾಡುತ್ದ್ದತಿ. ರೌತ್ ಯಾವುದೇ ಔಪಚಾರಿಕ ಮಿಲಿಟರಿ ಹಿನ್ನೆಲೆಯನ್ನು ಹೊಂದಿಲ್ಲ. ಆದರೂ ಶಸ್ತ್ರ ಹಿಡಿದು ಯುದ್ಧದಲ್ಲಿ ಭಾಗವಹಿಸಬೇಕೆಂಬ ಬಯಕೆಯನ್ನು ಈ ಹಿಂದೆ ವ್ಯಕ್ತಪಡಿಸಿದ್ದ. 2022ರಲ್ಲಿ ರಷ್ಯಾ-ಉಕ್ರೇನ್‌ ಯುದ್ಧ ಆರಂಭವಾದಾಗ ಎಕ್ಸ್‌ (ಹಿಂದಿನ ಟ್ವಿಟ್ಟರ್‌)ನಲ್ಲಿ ಈ ಬಗ್ಗೆ ತನ್ನ ಇಚ್ಛೆಯನ್ನು ಬಹಿರಂಗಪಡಿಸಿದ್ದ. ಉಕ್ರೇನ್‌ನಲ್ಲಿ ನಡೆಯುವ ಯುದ್ಧದಲ್ಲಿ ಭಾಗವಹಿಸಿ ಸಾಯುವುದಾಗಿ ತಿಳಿಸಿದ್ದ.

“ನಾನು ಕ್ರಾಕೋವ್‌ಗೆ ತೆರಳಲು, ಸ್ವಯಂಸೇವಕನಾಗಿ ಹೋರಾಡಲು, ಸಾಯಲು ಮತ್ತು ಉಕ್ರೇನ್ ಗಡಿಗೆ ಹೋಗಲು ಸಿದ್ಧನಿದ್ದೇನೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದ. ಮೆಸೇಜಿಂಗ್ ಅಪ್ಲಿಕೇಶನ್ ಸಿಗ್ನಲ್‌ನಲ್ಲಿ, ರೌತ್ ತನ್ನ ಪ್ರೊಫೈಲ್ ಬಯೋದ ಭಾಗವಾಗಿ “ನಾಗರಿಕರು ಈ ಯುದ್ಧವನ್ನು ಬದಲಾಯಿಸಬೇಕು ಮತ್ತು ಭವಿಷ್ಯದ ಯುದ್ಧಗಳನ್ನು ತಡೆಯಬೇಕು” ಎಂದು ಉಲ್ಲೇಖಿಸಿದ್ದಾನೆ. 2002ರಲ್ಲಿ, ಗ್ರೀನ್ಸ್‌ಬೊರೊದಲ್ಲಿ ಸ್ವಯಂಚಾಲಿತ ಆಯುಧದೊಂದಿಗೆ ಕಟ್ಟಡವೊಂದಕ್ಕೆ ಪ್ರವೇಶಿಸಿದ್ದ ಆತನ್ನು ಬಂಧಿಸಲಾಗಿತ್ತು. ಆತನ ಬಗ್ಗೆ ಹೆಚ್ಚಿನ ವಿವರ ಕಲೆ ಹಾಕಲಾಗುತ್ತಿದೆ.

ಸುರಕ್ಷಿತವಾಗಿದ್ದೇನೆ: ಟ್ರಂಪ್‌ ಸಂದೇಶ

ಗುಂಡಿನ ದಾಳಿಯಿಂದ ಟ್ರಂಪ್‌ ಅವರಿಗೆ ಯಾವುದೇ ಅಪಾಯವಾಗಿಲ್ಲ, ಅವರು ಸುರಕ್ಷಿತರಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ʼʼಭಯಪಡಬೇಡಿ. ನಾನು ಸುರಕ್ಷಿತವಾಗಿ, ಆರೋಗ್ಯದಿಂದಿದ್ದೇನೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲʼʼ ಎಂದು ಟ್ರಂಪ್‌ ಸಂದೇಶ ನೀಡಿದ್ದಾರೆ. ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಜುಲೈ 13ರ ಸಂಜೆ ಆಯೋಜಿಸಿದ್ದ ರ‍್ಯಾಲಿಯ ವೇಳೆಯೂ ಗುಂಡಿನ ದಾಳಿ ನಡೆದಿತ್ತು. ಆಗ ಟ್ರಂಪ್‌ ಕೂದಲೆಳೆ ಅಂತರದಿಂದ ಪಾರಾಗಿದ್ದರು.

ಈ ಸುದ್ದಿಯನ್ನೂ ಓದಿ: Donald Trump : ಮತ್ತೊಂದು ಬಾರಿ ಗುಂಡಿನ ದಾಳಿಯಿಂದ ಬಚಾವಾದ ಡೊನಾಲ್ಡ್ ಟ್ರಂಪ್‌